

ಮಡಿಕೇರಿ: ಮೇಯಿಸಲು ಕರೆದೊಯ್ಯುತ್ತಿದ್ದ ಹಸು ಮತ್ತು ರೈತನ ಮೇಲೆ ಹುಲಿ ದಾಳಿ ನಡೆಸಿದ್ದು ದಾಳಿಯಲ್ಲಿ ಹಸು ಸಾವನ್ನಪ್ಪಿದ್ದು, ರೈತ ಪಾರಾಗಿರುವ ಘಟನೆ ಕೊಡಗಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.
ದಾದಾ ಸೋಮಯ್ಯ ರಾಸುಗಳನ್ನು ಮೇಯಿಸಲು ಗದ್ದೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಹುಲಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ರೈತ ಜೋರಾಗಿ ಕಿರುಚಿಕೊಂಡು, ಕೈಯಲ್ಲಿದ್ದ ದೊಣ್ಣೆಯನ್ನು ಬೀಸಿ ತಪ್ಪಿಸಿಕೊಂಡಿದ್ದಾರೆ. ಆದರೆ, ಸಿಕ್ಕಿಬಿದ್ದ ಹಸುವನ್ನು ಹುಲಿ ಕೊಂದಿದೆ.
ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮತ್ತು ಗ್ರಾಮಕ್ಕೆ ಭೇಟಿ ನೀಡಿದ ಇತರ ಅಧಿಕಾರಿಗಳು ಹುಲಿ ದಾಳಿಯಲ್ಲಿ ಹಸು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ ಹುಲಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಹುಲಿಯ ಹೆಜ್ಜೆ ಹಾಗೂ ಚಲನೆಯನ್ನು ಆಧರಿಸಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಬೋನ್'ನ್ನು ಇರಿಸಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಮತ್ತು ಇತರ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹುಲಿ ದಾಳಿಗಳನ್ನು ತಪ್ಪಿಸಲು ಸರ್ಕಾರವನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದೇ ರೈತ ಕೆಲವು ದಿನಗಳ ಹಿಂದೆ ನಡೆದ ಹುಲಿ ದಾಳಿಯಲ್ಲಿ ಮತ್ತೊಂದು ಹಸುವನ್ನು ಕಳೆದುಕೊಂಡಿದ್ದಾರೆ. ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆಂದು ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ರಾಬಿನ್ ಅವರು ಮಾತನಾಡಿ, ಇತ್ತೀಚೆಗೆ ನಡೆದ ಹುಲಿ ದಾಳಿಯಲ್ಲಿ ಮೂರು ಹಸುಗಳು ಸಾವನ್ನಪ್ಪಿವೆ. ಆಗಾಗ್ಗೆ ಆಗುತ್ತಿರುವ ಹುಲಿ ದಾಳಿಯಿಂದ ಹತ್ತಿರದ ಗ್ರಾಮಗಳಾದ ಬೆಸಗೂರು, ಕಿರುಗೂರು, ಪೊನ್ನಪ್ಪಸಂತೆ ಮತ್ತು ಬೆಳ್ಳೂರುಗಳ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ನಿವಾಸಿಗಳು ಭಯದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement