

ಗುಂಧ್ (ಉತ್ತರ ಕನ್ನಡ): ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂಧ್ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಸುಮಾರು 50 ವರ್ಷದ ಹಳೆಯ ಬೃಹತ್ ವ್ಯಕ್ಷವನ್ನು ಕತ್ತರಿಸಿ ಪೆರ್ಗೋಲಾ (ವಿಶ್ರಾಂತಿ ಸ್ಥಳ) ನಿರ್ಮಿಸಿರುವ ಆರೋಪ ಕೇಳಿಬಂದಿದೆ.
ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972 (WPA) ಅಡಿಯಲ್ಲಿ ಬರುತ್ತವೆ, ಇಲ್ಲಿ ಒಂದೇ ಒಂದು ಮರವನ್ನು ಕಡಿತಗೊಳಿಸುವುದಕ್ಕೂ, ಅರಣ್ಯ ಸಂಪನ್ಮೂಲಗಳನ್ನು ಬಳಸುವುದಕ್ಕೂ ಕಟ್ಟುನಿಟ್ಟಿನ ನಿಷೇಧವಿದೆ.
ಅಕ್ರಮಗಳನ್ನು ತಡೆಯಲು ಅರಣ್ಯ ಇಲಾಖೆ ಸಂರಕ್ಷಿತ ಪ್ರದೇಶಗಳಲ್ಲಿ ಆ್ಯಂಟಿ–ಪೋಚಿಂಗ್ ಕ್ಯಾಂಪ್‌ಗಳನ್ನು ಸ್ಥಾಪಿಸಿ 24 ಗಂಟೆಗಳ ಕಾವಲು ಕಾಯುತ್ತವೆ.
ಆದರೆ, ಗುಂಧ್ ವಲಯದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೃಹತ್ ಮರವನ್ನು ಕಡಿಯಲಾಗಿದ್ದು, ಅಲ್ಲಿ ಪೆರ್ಗೋಲಾ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ವನ್ಯಜೀವಿ ಪ್ರೇಮಿಗಳು ಮಾತನಾಡಿ, ಉತ್ತರ ಕರ್ನಾಟಕದ ಲಿಂಗಾಯತರಿಗೆ ಪ್ರಮುಖವಾಗಿರುವ ಉಳವಿ ಜಾತ್ರೆ ಹತ್ತಿರಬರುತ್ತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ಭೇಟಿ ನಿರೀಕ್ಷೆಯಿರುವುದರಿಂದ ಈ ಪೆರ್ಗೋಲಾ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಇಡೀ ಪರ್ಗೋಲಾವನ್ನು ತೇಗದ ಮರವನ್ನು ಬಳಸಿ ನಿರ್ಮಿಸಲಾಗಿದೆ, ಈ ಮೂಲಕ ಕಾನೂನು ಉಲ್ಲಂಘನೆಯಾಗಿದೆ ಎಂದು ಮಾಜಿ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶದೊಳಗೆ ಪೆರ್ಗೋಲಾದ ಅಗತ್ಯವೇನಿದೆ? ಇಲ್ಲಿ ಮನರಂಜನೆಗೆ ಯಾವುದೇ ಅವಕಾಶವಿಲ್ಲ. ಈ ಪ್ರದೇಶದಲ್ಲಿ ಸಾಮಾನ್ಯ ವ್ಯಕ್ತಿ ಒಂದು ಮರದ ಕಟ್ಟಿಗೆ ಹೊತ್ತರೂ ಅರಣ್ಯಾಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುವ ಉದಾಹರಣೆಗಳಿವೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳಿಂದಲೇ ನಿಯಮ ಉಲ್ಲಂಘನೆಯಾಗಿದೆ. ಮರ ಕಡಿತ ಮಾಡಿ ಪೆರ್ಗೋಲಾ ನಿರ್ಮಿಸಿದವರವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೋಯ್ಡಾದ ವನ್ಯಜೀವಿ ಕಾರ್ಯಕರ್ತ ರವಿ ರೇಡ್ಕರ್ ಆಗ್ರಹಿಸಿದ್ದಾರೆ.
ಹೈಯಾಳ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಅವರು ಪ್ರತಿಕ್ರಿಯಿಸಿ, ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Advertisement