

ಬೆಂಗಳೂರು: ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವರ್ತೂರು ಪ್ರದೇಶದಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ, ದೀಪೋತ್ಸವ, ಕರಗ ಮತ್ತು ಪಲ್ಲಕ್ಕಿ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಸಂಚಾರಕ್ಕೆ ಸೂಚನೆ ನೀಡಿದ್ದಾರೆ.
ಜನವರಿ 25 ಭಾನುವಾರದಿಂದ ಜನವರಿ 27ರವರೆಗೆ ಮೂರು ದಿನ ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಜಾತ್ರಾ ಸ್ಥಳದಲ್ಲಿ ವಾಹನಗಳ ಪ್ರವೇಶ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ.
ಈ ಮಾರ್ಗದಲ್ಲಿ ವಾಹನ ಸಮೇತ ಬಂದು ಕಿರಿಕಿರಿ ಅನುಭವಿಸದೇ ಪಾರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ. ಸಂಚಾರದ ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.
ಗುಂಜೂರಿನಿಂದ ವೈಟ್‌ಫೀಲ್ಡ್ ಕಡೆಗೆ ಹೋಗುವ ವಾಹನಗಳು ಶ್ರೀ ರಾಮ ದೇವಾಲಯ - ಗುಂಜೂರು ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರ, ಸೊರಹುಣಸೆ, ವೇಲ್ಪುರ ಮತ್ತು ವರ್ತೂರು ಸರ್ಕಾರಿ ಕಾಲೇಜು ರಸ್ತೆ ಮೂಲಕ ವೈಟ್‌ಫೀಲ್ಡ್ ಕಡೆಗೆ ತೆರಳಬಹುದಾಗಿದೆ.
ವೈಟ್‌ಫೀಲ್ಡ್ ನಿಂದ ಗುಂಜೂರು ಕಡೆಗೆ ಹೋಗುವ ವಾಹನಗಳು ಇಮ್ಮಡಿಹಳ್ಳಿ, ವೇಲ್ಪುರ ಸೊರಹುಣಸೆ ರಸ್ತೆಯಿಂದ ಮಧುರನಗರ ಮೂಲಕ ಗುಂಜೂರು ಮತ್ತು ವರ್ತೂರು ಪೊಲೀಸ್ ಠಾಣೆ ಕಡೆಗೆ ಹೋಗಬಹುದು. ಕುಂದಲಹಳ್ಳಿ ಮತ್ತು ಮಾರತಹಳ್ಳಿ ಕಡೆಗೆ ಹೋಗುವ ಲಘು ವಾಹನಗಳು ಗುಂಜೂರು ಕೆಎಫ್‌ಸಿ ರಸ್ತೆ, ಪಣತ್ತೂರು ರೈಲ್ವೆ ಸೇತುವೆ ಮತ್ತು ವಿಬ್ ಗಯಾರ್ ಶಾಲಾ ರಸ್ತೆ ಮೂಲಕ ಸಂಚರಿಸಬಹುದು.
ಹೊಸಕೋಟೆಯಿಂದ ಹೋಪ್‌ಫಾರ್ಮ್ ಜಂಕ್ಷನ್ ಮೂಲಕ ವರ್ತೂರು ಕಡೆಗೆ ಹೋಗುವ ಭಾರಿ ವಾಹನಗಳು ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಾಗಬೇಕು, ವರ್ತೂರು ಕೋಡಿ, ಹೋಪ್‌ಫಾರ್ಮ್ ಮತ್ತು ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಾಗಬೇಕು.
ಸರ್ಜಾಪುರದಿಂದ ಬರುವ ವಾಹನಗಳು ಚಿಕ್ಕ ತಿರುಪತಿ, ದೊಮ್ಮಸಂದ್ರ, ಕೊಡತಿ, ಬೆಳ್ಳಂದೂರು ಮಾರ್ಗವಾಗಿ ಸಂಚರಿಸಬಹುದು. ಏತನ್ಮಧ್ಯೆ, ಗುಂಜೂರು ಬಿಎಂಟಿಸಿ ಡಿಪೋ -41 ರಿಂದ ಗುಂಜೂರು ವರ್ತೂರು ಕಡೆಗೆ ಹೋಗುವ ಬಸ್‌ಗಳು ಹೊಸಹಳ್ಳಿ, ಮಧುರಾನಗರ, ವರ್ತೂರು ಮತ್ತು ನೆರಿಗೆ ರಸ್ತೆ ಮೂಲಕ ಸಂಚರಿಸಬಹುದು.
Advertisement