

ಬೆಂಗಳೂರು: ಬಿಎಂಟಿಸಿ ಬಸ್ ರಿವರ್ಸ್ ತೆಗೆಯುವಾಗ ರೈಲಿಗೆ ಗುದ್ದಿದ ಪರಿಣಾಮ ಬಸ್ ನ ಹಿಂಭಾಗ ನಜ್ಜುಗುಜ್ಜಾಗಿರುವ ಘಟನೆ ನಗರದ ಸಾದರಮಂಗಲದಲ್ಲಿ ನಡೆದಿದೆ.
ಬಸ್ ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ಘಟಕ 51ರ ಕಾಡುಗೋಡಿ ಬಿಎಂಟಿಸಿ ಬಸ್ ಗೆ ಈ ರೀತಿ ಹಾನಿಯಾಗಿದೆ.
ಸಾದರಮಂಗಲದ ಬಿಎಂಟಿಸಿ ಘಟಕದಿಂದ ಸೋಮವಾರ ಬೆಳಗ್ಗೆ 9-15ರ ವೇಳೆಗೆ ಕಾಡುಗೋಡಿಗೆ ಬಸ್ ಹೊರಟಿತ್ತು.
ಅಲ್ಲೇ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಬಸ್ ಹಿಂದಕ್ಕೆ ತೆಗೆಯುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ಹಳಿ ಕಡೆಗೆ ಹೆಚ್ಚು ಹಿಂದಕ್ಕೆ ಸಾಗಿದೆ. ಅದೇ ಸಮಯದಲ್ಲಿ ಎಸ್ಎಂವಿಟಿ ಬೆಂಗಳೂರು-ಟಾಟಾ ನಗರ (ಜಾರ್ಖಂಡ್) ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬಂದಿದ್ದು, ಬಸ್ ಗೆ ಗುದ್ದಿದೆ. ಇದರಿಂದಾಗಿ ಹಿಂಭಾಗ ನಜ್ಜು ಗುಜ್ಜಾಗಿದೆ.
ಬಿಎಂಟಿಸಿ ವಿಭಾಗೀಯ ನಿರ್ವಾಹಕ ಇಂಜಿನಿಯರ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಸುರಕ್ಷತೆಗೆ ಅಪಾಯ ತರುವ ಘಟನೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
Advertisement