

ಮೈಸೂರು: ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸರ್ಕಾರ ಕೊಡುವ ಭಾಷಣವನ್ನು ರಾಜ್ಯಪಾಲರು ಬದಲಾಯಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವದಲ್ಲೂ ರಾಜ್ಯಪಾಲರು ಭಾಷಣ ಮಾಡಬೇಕಿದೆ. ನಾವು ಬರೆದು ಕೊಟ್ಟ ಭಾಷಣವನ್ನು ರಾಜ್ಯಪಾಲರು ಗಣರಾಜ್ಯೋತ್ಸವದ ಭಾಷಣದಲ್ಲಿ ಓದಬೇಕು ಎಂಬ ನಿಯಮ ಇಲ್ಲ. ಅದರಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿ ಕೊಳ್ಳಬಹುದು. ರಾಜ್ಯಪಾಲರು ಏನು ಮಾಡುತ್ತಾರೋನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾವು ಬರೆದು ಕೊಟ್ಟ ಭಾಷಣವನ್ನು ರಾಜ್ಯ ಪಾಲರು ಗಣರಾಜ್ಯೋತ್ಸವದ ಭಾಷಣ ದಲ್ಲಿ ಓದಬೇಕು ಎಂಬ ನಿಯಮ ಇಲ್ಲ. ಅದರಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು. ರಾಜ್ಯ ಪಾಲರು ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ಆದರೆ, ಸಂವಿಧಾನದ 176 ಮತ್ತು 163 ನೇ ವಿಧಿಗಳು ಜಂಟಿ ಸದನದ ಅಧಿವೇಶನದಲ್ಲಿ ಮಾತ್ರ ಸರ್ಕಾರ ಬರೆದು ಕೊಟ್ಟಿದ್ದನೇ ಅವರು ಓದಬೇಕು ಅನ್ನೋ ನಿಯಮ ಇದೆ ಎಂದು ತಿಳಿಸಿದರು.
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಮಾಹಿತಿ ನೀಡಿದ್ದಾರೆ ಅದರಲ್ಲಿ ತಪ್ಪೇನು ಇಲ್ಲ ಎಂದರು.
‘ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ನಾವು ಪತ್ರ ವ್ಯವಹಾರವನ್ನೆಲ್ಲಾ ನಡೆಸಿದ್ದೇವೆ. ಆದರೂ ಆಯ್ಕೆ ಮಾಡದಿದ್ದರೆ ಏನು ಮಾಡುವುದು? ಪ್ರತಿ ರಾಜ್ಯದಿಂದ ಒಂದನ್ನು ಆಯ್ಕೆ ಮಾಡುವುದು ಕೇಂದ್ರ ಸರ್ಕಾರವಲ್ಲವೇ? ಎಂದು ಕೇಳಿದರು.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರ ಮಾತುಗಳಿಗೆ ಪ್ರತಿಕ್ರಿಯಿಸಿ, ಕರ್ನಾಟಕವು ಅನುಕೂಲಕರ ಹೂಡಿಕೆ ವಾತಾವರಣವನ್ನು ನೀಡುತ್ತದೆ. ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳಿವೆ. ಕೌಶಲ್ಯರಹಿತ ಕಾರ್ಮಿಕರಿಗೆ ಕೌಶಲ್ಯ ತರಬೇತಿಯನ್ನು ಸಹ ನೀಡಲಾಗುತ್ತಿದೆ ಮತ್ತು ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗದ ಭರವಸೆ ಇದೆ" ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ಎಚ್ ಡಿ ರೇವಣ್ಣ ಅವರನ್ನು ಕಾನೂನುಬಾಹಿರವಾಗಿ ಗುರಿಯಾಗಿಸಿಕೊಂಡಿದೆ ಎಂಬ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಇತ್ತೀಚಿನ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಆರೋಪಗಳು ರಾಜಕೀಯ ಪ್ರೇರಿತ. ಎಚ್.ಡಿ.ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ನಾವು ಹಸ್ತಕ್ಷೇಪ ಮಾಡಿರಲಿಲ್ಲ. ಅದೊಂದೆ ಅಲ್ಲ ಯಾವುದೇ ಪ್ರಕರಣದಲ್ಲೂ ರಾಜ್ಯ ಸರ್ಕಾರ ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದರು.
ಎಲ್ಲವನ್ನು ಕಾನೂನು ಪ್ರಕಾರವೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಆಗ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ನಮ್ಮ ವಿರೋಧ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ರೇವಣ್ಣ ಅವರ ಪ್ರಕರಣದಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಯಾವುದೇ ಉಡುಗೊರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ 17 ಸ್ಥಾನಗಳಲ್ಲಿ ಗೆದ್ದಿರುವ ಅವರು, ಅದು ಹೇಗೆ 124 ಸ್ಥಾನಗಳಲ್ಲಿ ಗೆಲ್ಲುತ್ತಾರೆ? ಅದು ಅಸಾಧ್ಯದ ಮಾತು ಎಂದು ಹೇಳಿದರು.
ಬಿಜೆಪಿಯವರೊಂದಿಗೆ ಜೆಡಿಎಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಆದರೂ ಕಾಂಗ್ರೆಸ್ ಪಕ್ಷ 139 ಕ್ಷೇತ್ರಗಳಲ್ಲಿ ಗೆದ್ದಿತ್ತು. ಮುಂದಿನ ದಿನಗಳಲ್ಲಿ ಇಬ್ಬರೂ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ 2028 ರ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲಿದೆ. ಆಗ ಯಾರ ನಾಯಕತ್ವ ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಬಿಜೆಪಿಯವರು ಒಂದು ವೇಳೆ ಹೆಚ್ಚು ಸ್ಥಾನ ಗೆದ್ದರೆ ಜೆಡಿಎಸ್ ನವರಿಗೆ ಮುಖ್ಯಮಂತ್ರಿಯ ಹುದ್ದೆ ಬಿಟ್ಟು ಕೊಡುವುದಿಲ್ಲ. ಹಾಗಿದ್ದ ಮೇಲೆ ಜೆಡಿಎಸ್ ಹೇಗೆ ಅಧಿಕಾರಕ್ಕೆ ಬರುತ್ತದೆ ? ಎಂದು ಪ್ರಶ್ನಿಸಿದರು.
ಬಜೆಟ್ ಸಿದ್ಧತೆಗಳ ಕುರಿತು ಮಾತನಾಡಿ, ‘ಬಜೆಟ್ ಸಿದ್ಧತಾ ಸಭೆಯನ್ನು ಇನ್ನೂ ಅರಂಭಿಸಿಲ್ಲ. ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದ್ದೇನೆ. ಫೆ.2ರಿಂದ ಕಟ್ಟುನಿಟ್ಟಾಗಿ ಆರಂಭಿಸಲಿದ್ದೇವೆ ಎಂದು ತಿಳಿಸಿದರು.
Advertisement