

ನವದೆಹಲಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ದೇಶದ ಎಲ್ಲಾ ಜನತೆಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.
ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪವು ಇನ್ನಷ್ಟು ಬಲಗೊಳ್ಳಲಿ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಸಂಭ್ರಮಾಚರಣೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ (ಹಿಂದೆ ರಾಜ್ಪಥ್) ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿದ ನಂತರ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ.
ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ಒರ್ವ ವಿದೇಶಿ ಗಣ್ಯ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಈ ವರ್ಷ ವಿದೇಶಿ ಅತಿಥಿಯಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಭಾಗಿ ಆಗಲಿದ್ದಾರೆ. ಇವರನ್ನು ಪದ್ಧತಿಯಂತೆ 21 ಗನ್ ಸೆಲ್ಯೂಟ್, ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲಾಗುವುದು.
3 ದಿನ ಭಾರತದಲ್ಲಿರಲಿರುವ ಉರ್ಸುಲಾ ಮತ್ತು ಕೋಸ್ಟಾರಆಗಮನ ಕೇವಲ ರಾಜತಾಂತ್ರಿಕ ಸಂಬಂಧದ ಪ್ರತೀಕವಾಗಿರದೆ, ಇಡೀ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದೆ. ಇದಕ್ಕೆ ಕಾರಣ, ಗಣರಾಜ್ಯೋತ್ಸವದ ಮರುದಿನ ಏರ್ಪಡಲಿರುವ ವ್ಯಾಪಾರ ಒಪ್ಪಂದ. ವಂದೇ ಮಾತರಂ ಪರಿಕಲ್ಪನೆ: ಈ ಬಾರಿ ಗಣ ರಾಜ್ಯೋತ್ಸವದಂದು ದೇಶದ ಸೇನಾ ಸಾಮರ್ಥ್ಯ ಮತ್ತು ಶ್ರೀಮಂತ ಸಂಸ್ಕೃತಿ ಸಂಭ್ರಮಿಸಲಾಗುವುದು.
ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಣತಂತ್ರ ದಿನವನ್ನು ಅದೇ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದೆ. ಬೆಳಿಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಪಥಸಂಚಲನ ಪ್ರಾರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ.
18 ಕವಾಯತುಗಳ ಪ್ರದರ್ಶನ, 13 ಮಿಲಿಟರಿ ಬ್ಯಾಂಡ್‌ಗಳು ಭಾಗಿಯಾಗಲಿವೆ. 2500 ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. 10,000 ಅತಿಥಿಗಳು ಭಾಗಿಯಾಗಲಿದ್ದಾರೆ. ಪ್ರಾಣಿಗಳ ಪಡೆಯೂ ಮೊದಲ ಬಾರಿ ಸೇರ್ಪಡೆಗೊಳ್ಳಲಿದೆ.
ರಾಷ್ಟ್ರಪತಿ ದೌಪದಿ ಮುರ್ಮು ಧ್ವಜ ಅನಾವರಣ ಮಾಡುವ ವೇಳೆ, ಭಾರತೀಯ ವಾಯುಪಡೆಯ ಅಧಿಕಾರಿ ಪ್ರೈಟ್ ಲೆಫ್ಟಿನೆಂಟ್ ಅಕ್ಷಿತಾ ಧನಕರ ಜೊತೆಗಿರಲಿದ್ದಾರೆ.
ವಂದೇ ಮಾತರಂ ಮತ್ತು ಆತ್ಮನಿರ್ಭರ ಕಲ್ಪನೆಯಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳು ಕರ್ತವ್ಯಪಥದಲ್ಲಿ ಸಾಗಲಿವೆ. 17 ರಾಜ್ಯಗಳ ಹಾಗೂ 13 ಸಚಿವಾಲಯಗಳ ಪ್ರದರ್ಶ ನವಿರಲಿವೆ. ಆಪರೇಷನ್ ಸಿಂದೂರದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಗಿರು ವುದರಿಂದ ಈ ಬಾರಿ ಪರೇಡ್‌ನಲ್ಲಿ ಆಪರೇಷನ್ ಸಿಂದೂರ್: ವಿಕ್ಟರಿ ಥ್ ಜಾಯಿಂಟ್‌ನೆಸ್' ಎಂಬ ಶೀರ್ಷಿಕೆಯಲ್ಲಿ ಸೇನೆ ಟ್ಯಾಬ್ಲೊ ಪ್ರದರ್ಶಿಸಲಿದೆ.
ಕರ್ತವ್ಯ ಪಥದಲ್ಲಿ ನಡೆಯುವ ಗಣ ರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗದಿದ್ದರೂ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ 'ಸಿರಿಧಾನ್ಯದಿಂದ ಮೈಕ್ರೋಚಿಪ್ 'ವರೆಗೆ (ಮಿಲೆಟ್ ಟು ಮೈಕ್ರೋ ಚಿಪ್) ಎಂಬ ಸ್ಥಬ್ದಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕೃಷಿಯಿಂದ ಕೈಗಾರಿಕೆ ವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಪಯಣವನ್ನು ಪ್ರದರ್ಶಿಸಲಿದೆ.
ದೆಹಲಿಯಲ್ಲಿ ಹೆಚ್ಚಿದ ಭದ್ರತೆ
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಸೇನೆ, ಖಾಕಿ ಕೋಟೆಯೇ ನಿರ್ಮಾಣವಾಗಿದ್ದು, ಡ್ರೋಣ್ ಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಕಟ್ಟಡಗಳ ಮೇಲೆ ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲೆಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ, ತಿಂಡಿ, ನೀರಿನ ಬಾಟಲ್, ಗನ್, ಚಾಕು, ಚೂಪಾದ ವಸ್ತುಗಳು, ಕೊಡೆ, ಕಪ್ಪುವಸ್ತ್ರ, ಕ್ಯಾಮೆರಾ, ರೇಡಿಯೋ, ಸ್ಯೂಟ್‌ಕೇಸ್, ಬ್ಯಾಗ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ, ಅಗ್ನಿಕಾರಕ ವಸ್ತುಗಳನ್ನು ನಿಷೇಧಿಸಲಾಗಿದೆ.
Advertisement