

ಬೆಂಗಳೂರು: ವ್ಯಕ್ತಿಯೊಬ್ಬ "ಸಂಪೂರ್ಣ ಬೆತ್ತಲೆ"ಯಾಗಿ ಕಾರು ಚಲಾಯಿಸಿಕೊಂಡು, ಮಹಿಳೆಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜನವರಿ 24 ರಂದು ತ್ರಿಪುರಾದ ಮಹಿಳೆಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೇಲಿನ ದೌರ್ಜನ್ಯದ ವಿಡಿಯೋವನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಹಿಳೆ ಕೆಲಸದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ "ಸಂಪೂರ್ಣ ಬೆತ್ತಲೆ"ಯಾಗಿದ್ದ ವ್ಯಕ್ತಿಯೊಬ್ಬರು ಮಹಿಳೆಯನ್ನು ಕರೆದಿದ್ದು, ಆಕೆ ಬಾರದಿದ್ದಾಗ ಆಕೆಯ ಕಡೆಗೆ ಕಾರು ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಯಾರೂ ಸಹ ತನಗೆ ಸಹಾಯ ಮಾಡಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆಯ ಗಸ್ತು ಸಿಬ್ಬಂದಿಗೆ ಸ್ಥಳೀಯರು ಘಟನೆಯ ಬಗ್ಗೆ ಮಾಹಿತಿ ನೀಡಿದಾಗ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಂತರ, ಮಹಿಳೆಯನ್ನು ಗುರುತಿಸಲಾಗಿದ್ದು, ಅವರು ತ್ರಿಪುರಾ ಮೂಲದವರಾಗಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪರ್ಕಿಸಿ ವಿವರವಾದ ಹೇಳಿಕೆ ನೀಡುವಂತೆ ಕೇಳಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್ 75(ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶಂಕಿತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement