

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕ ಮೂಲದ ದಂಪತಿಯ ಮನೆಯಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳ ಜೊತೆಗೆ ನಗದು ಕದ್ದ ಆರೋಪದ ಮೇಲೆ 29 ವರ್ಷದ ಮನೆಗೆಲಸದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂದು ಗುರುತಿಸಲಾಗಿದ್ದು, ಮೆರಿಕ ಮೂಲದ ದಂಪತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕದ್ದ ಎಲ್ಲಾ ಚಿನ್ನಾಭರಣ ಮತ್ತು ನಗದನ್ನು ಸಹ ಆರೋಪಿಯಿಂದ ಹಾಗೆಯೇ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 21 ರಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮೂಲತಃ ಅಮೆರಿಕದ ಟೆಕ್ಸಾಸ್ ಮೂಲದವರಾದ ಪತಿ-ಪತ್ನಿ ಜೋಡಿ ಜೆ ಬಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ದೂರು ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ದೂರುದಾರರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ, ಮಲಗುವ ಕೋಣೆಯ ಕಪಾಟಿನ ಲಾಕರ್‌ನಲ್ಲಿ ಇರಿಸಲಾಗಿದ್ದ ಚಿನ್ನ ಮತ್ತು ವಜ್ರದ ಆಭರಣಗಳು ಕದ್ದಿರುವುದು ಕಂಡುಬಂದಿದೆ.
ದೂರಿನಲ್ಲಿ, ಕಳೆದ ಆರು ತಿಂಗಳಿನಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಕೆಲಸದವರ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
"ತನಿಖೆಯ ಸಮಯದಲ್ಲಿ, ನಮ್ಮ ತಂಡವು ಪ್ರಕರಣವನ್ನು ವಿವಿಧ ಕೋನಗಳಿಂದ ಪರಿಶೀಲಿಸಿತು ಮತ್ತು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ದೂರುದಾರರು ವಾಸಿಸುವ ಕೋಡಿಹಳ್ಳಿಯ ವಿಲ್ಲಾ ಬಳಿ ನಾವು ಮನೆಕೆಲಸಗಾರನನ್ನು ಬಂಧಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಆರೋಪಿಯು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement