ಕರ್ನಾಟಕದ ತೆರಿಗೆ ಪಾಲು ಕನಿಷ್ಟ ಶೇ.4.7 ಮರು ನಿಗದಿಯಾಗಲಿ: ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಅಭಿಯಾನ

ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ನೋಡಿದರೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ನೇರವಾಗಿ ಕಡಿಮೆಯಾಯಿತು. ಕೆಲವು ಆರ್ಥಿಕ ಅಜ್ಞಾನಿಗಳು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೆ ವಿತಂಡವಾದ ಮಾಡುತ್ತಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಹಾಗೂ ವಿಶೇಷ ಅನುದಾನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು 16ನೇ ಹಣಕಾಸು ಆಯೋಗದ ಮುಂದೆ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು, ಈ ಕುರಿತು ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ’ ಎಂಬ ಹೆಸರಿನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸರಣಿಯಾಗಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.

ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ನೋಡಿದರೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ನೇರವಾಗಿ ಕಡಿಮೆಯಾಯಿತು. ಕೆಲವು ಆರ್ಥಿಕ ಅಜ್ಞಾನಿಗಳು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೆ ವಿತಂಡವಾದ ಮಾಡುತ್ತಾರೆ.

14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ 100 ರೂಪಾಯಿಯಲ್ಲಿ ಮೊದಲು ಕರ್ನಾಟಕಕ್ಕೆ ರೂ.4.71 ಸಿಗುತ್ತಿದ್ದರೆ, 15ನೇ ಆಯೋಗವು ಅದನ್ನು ರೂ.3.64ಗೆ ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ರೂ.80 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು.

ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್‌ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ ರೂ.4.5 ಲಕ್ಷ ಕೋಟಿಯಿಂದ ರೂ.5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.

CM Siddaramaiah
ತೆರಿಗೆ ಹಂಚಿಕೆ ತಾರತಮ್ಯ: ಕರ್ನಾಟಕ ಆಯ್ತು, ಈಗ ಕೇರಳ, ತಮಿಳುನಾಡಿನಿಂದ ದೆಹಲಿಯಲ್ಲಿ ಪ್ರತಿಭಟನೆ

ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲಿ ಸಮಸ್ಯೆಯಾಗಲು ಆಯೋಗವು ಅಳವಡಿಸಿಕೊಂಡ ಸೂತ್ರಗಳಲ್ಲಿಯೇ ದೋಷಗಳಿದ್ದವು. ಆದಾಯ ದೂರ ಅಥವಾ ಇನ್‌ಕಂ ಡಿಸ್ಟೆನ್ಸ್‌ ಎಂಬ ಸೂತ್ರಕ್ಕೆ ಶೇ 45ರಷ್ಟು ಪ್ರಾಮುಖ್ಯ (ವೈಟೇಜ್‌) ನೀಡಿದ್ದು ಮುಖ್ಯ ಕಾರಣ. ಕರ್ನಾಟಕದ ಜನರ ತಲಾ ಆದಾಯ ಹೆಚ್ಚಿದೆಯೆಂದು ನಮಗೆ ಕಡಿಮೆ ಪಾಲನ್ನು ಹಂಚಿಕೆ ಮಾಡಲಾಯಿತು. ತಲಾ ಆದಾಯ ಎನ್ನುವುದು ಆರ್ಥಿಕತೆಯನ್ನು ಅಳೆಯುವ ಮಾನದಂಡಗಳಲ್ಲೊಂದಷ್ಟೆ, ಅದೇ ಮುಖ್ಯವಲ್ಲ. ರಾಜ್ಯದ ಉತ್ಪನ್ನವನ್ನು ಶ್ರೀಮಂತರು ಮತ್ತು ಬಡವರನ್ನೆಲ್ಲ ಒಂದೇ ಗುಂಪಿಗೆ ಸೇರಿಸಿ ಎಲ್ಲರಿಗೂ ಸಮಾನವಾಗಿ ವಿಭಾಗಿಸಲಾಗುತ್ತದೆ. ಇದರಿಂದ ಬರುವ ಮೊತ್ತವನ್ನು ತಲಾ ಆದಾಯ ಎನ್ನಲಾಗುತ್ತದೆ.

2014ರಿಂದ ಈಚೆಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗುತ್ತಿದೆ. ಜಾಗತಿಕ ಅಸಮಾನತಾ ಸೂಚ್ಯಂಕದ ಅಧ್ಯಯನಗಳ ಪ್ರಕಾರ, ಶೇ 50ರಷ್ಟಿರುವ ಬಡ ಜನರು ಕೇವಲ ಶೇ 15ರಷ್ಟು ಆದಾಯ ಗಳಿಸುತ್ತಿದ್ದಾರೆ. ಶೇ 10ರಷ್ಟಿರುವ ಶ್ರೀಮಂತರು ಶೇ 58ಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳತೆ ಮಾಡಿ ಅದನ್ನು ಆದಾಯ ದೂರ ಎಂಬ ಸೂತ್ರಕ್ಕೆ ತಂದು ಅನುದಾನಗಳನ್ನು ಖೋತಾ ಮಾಡುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದೇವೆ. ಕಲ್ಯಾಣ ಕರ್ನಾಟಕವೂ ಸೇರಿದಂತೆ ಕೆಲವು ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ಇದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಈ ಸೂತ್ರವನ್ನು ಶೇ 45ರ ಬದಲು ಶೇ 25ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.

15ನೇ ಹಣಕಾಸು ಆಯೋಗವು ಜಿಎಸ್‌ಡಿಪಿಯನ್ನು ಲೆಕ್ಕ ಹಾಕುವಾಗ ಅಳವಡಿಸಿಕೊಂಡಿದ್ದ ಮೂಲ ವರ್ಷ (ಬೇಸ್‌ ಇಯರ್‌) 2004-05ರ ಬದಲು 2011-12ಕ್ಕೆ ಬದಲಾಯಿಸಿದ್ದರಿಂದ ಕರ್ನಾಟಕಕ್ಕೆ ಭಾರಿ ನಷ್ಟವಾಯಿತು. 2004-05ರಲ್ಲಿ ರಾಜ್ಯಗಳು ರಫ್ತಿನಲ್ಲಿ, ಉತ್ಪಾದನೆಯ ವಿಧಾನಗಳಲ್ಲಿ ತುಸು ಸಮೀಪವರ್ತಿಯಾಗಿದ್ದವು. ಐಟಿ ಕ್ರಾಂತಿ ಸಂಭವಿಸಿದ ನಂತರ ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವ ರಾಜ್ಯವು ಅನುಕೂಲಕರವಾಗಿದೆಯೋ ಅಲ್ಲಿ ಐಟಿ ಕಂಪೆನಿಗಳು ನೆಲಸಿದವು. ಅವುಗಳಲ್ಲಿ ಬೆಂಗಳೂರು ಒಂದು.

ಐಟಿ ರಫ್ತಿನಿಂದ ಕೇಂದ್ರಕ್ಕೆ ಹಲವಾರು ಅನುಕೂಲಗಳಾಗುತ್ತಿವೆ. ನಮ್ಮಲ್ಲಿ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಚಟುವಟಿಕೆಗಳು ಒಂದಿಷ್ಟು ಹೆಚ್ಚಾಗಬಹುದು. ಆದರೆ ಐಟಿ ರಫ್ತಿನ ಕಾರಣಕ್ಕೆ ನಮ್ಮ ಜಿಎಸ್‌ಡಿಪಿ ಹೆಚ್ಚು ಹಿಗ್ಗಿದಂತೆ ಕಾಣುತ್ತದೆ. ಮೂಲ ವರ್ಷ ಬದಲಾಯಿಸಿದ ಕಾರಣಕ್ಕೆ ಕರ್ನಾಟಕದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 33ರಷ್ಟು ಹೆಚ್ಚಾಗಿರುವಂತೆ ಕಂಡು ಬಂದಿತು. ಇತರೆ ರಾಜ್ಯಗಳ ಸರಾಸರಿ ಏರಿಕೆ ಶೇ 5.6ರಷ್ಟು ಎಂದು ಲೆಕ್ಕ ಹಾಕಿದ ಕಾರಣ ನಮಗೆ ಅನ್ಯಾಯವಾಗಿದೆ. ಹೀಗಾಗಿ ಈ ಮಾನದಂಡವನ್ನು ವಾಸ್ತವಿಕವಾಗಿ ಲೆಕ್ಕ ಹಾಕಿ ಸರಿಪಡಿಸಬೇಕು ಎಂದು ತಿಳಿಸಿದ್ದಾರೆ.

15ನೇ ಹಣಕಾಸು ಆಯೋಗವು ಜನಸಂಖ್ಯೆಯನ್ನು 1971ರ ಬದಲಾಗಿ 2011 ಅನ್ನು ಆಧಾರವಾಗಿರಿಸಿಕೊಂಡ ಕಾರಣದಿಂದಲೂ ನಮಗೆ ತೀವ್ರ ರೂಪದ ಅನ್ಯಾಯವಾಗಿದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತು. ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಯಿತು. ಇದನ್ನು ಸರಿಪಡಿಸಬೇಕಾದರೆ 1971ರ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಬೇಕು ಹಾಗೂ ಜನಸಂಖ್ಯೆಗೆ ನಿಗದಿಪಡಿಸಿರುವ ಪ್ರಾಮುಖ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸಬೇಕು.

CM Siddaramaiah
ರಾಜ್ಯ ಸರ್ಕಾರ ತೆರಿಗೆ ಭಯೋತ್ಪಾದನೆಯಲ್ಲಿ ನಿರತ: ಆರ್.ಅಶೋಕ್ ಟೀಕೆ

ಪ್ರಕೃತಿ ವಿಕೋಪಗಳನ್ನು ನಿಭಾಯಿಸಲು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಅನುದಾನಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಲೆಕ್ಕ ಹಾಕಿ ಹಂಚಿಕೆ ಮಾಡಬೇಕು. 2018-24ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ ರೂ.1.56 ಲಕ್ಷ ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ. 2002ರಿಂದಲೂ ಅತಿವೃಷ್ಟಿ, ಬರ, ಪ್ರವಾಹಗಳಿಗೆ ರಾಜ್ಯವು ನಿರಂತರವಾಗಿ ಒಳಗಾಗುತ್ತಲೇ ಇದೆ. ಇಷ್ಟಿದ್ದರೂ ನಮಗೆ ಕೇವಲ 5 ರಿಸ್ಕ್‌ ಫ್ಯಾಕ್ಟರ್‌ ಅಂಕ ನೀಡುವ ಮೂಲಕ ವಂಚಿಸಲಾಗಿದೆ. ಇದನ್ನು 15ಕ್ಕೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್‌ ಅಧಿಕಾರ ಹಂಚಿಕೆ ಸೂಚ್ಯಂಕವನ್ನು ಅಳವಡಿಸಿಕೊಳ್ಳಬೇಕು. ಹಿಂದಿನ ಹಣಕಾಸು ಆಯೋಗಗಳು ಜನಸಂಖ್ಯೆಗೆ ಶೇ 90 ಹಾಗೂ ವಿಸ್ತೀರ್ಣಕ್ಕೆ ಶೇ 10ರಷ್ಟು ಮಾನದಂಡಗಳನ್ನು ಅಳವಡಿಸಿಕೊಂಡ ಕಾರಣ, ವಿಕೇಂದ್ರೀಕರಣ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಯಿತು. ಆದ್ದರಿಂದ ಜನಸಂಖ್ಯೆಗೆ ಶೇ 60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ 20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ 20ರಷ್ಟು ಮಾನದಂಡಗಳನ್ನು ನಿಗದಿಪಡಿಸಬೇಕು.

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ ರೂ.25 ಸಾವಿರ ಕೋಟಿಗಳನ್ನು ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ ರೂ,10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ನೀಡಬೇಕು.

ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯಗಳಾಗಿವೆ. ಅವು ಇಡೀ ಭಾರತದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲಿನ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನಗಳನ್ನು ಒದಗಿಸಬೇಕು. ಅಲ್ಲದೆ, ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಒಣ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನಗಳನ್ನು ಕೊಡಬೇಕು.

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒತ್ತಾಯ ಮಾಡುತ್ತಿದ್ದಂತೆಯೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಶೇ 41ರಷ್ಟು ಹಂಚಿಕೆಯನ್ನು ಶೇ 50ಕ್ಕೆ ಏರಿಕೆ ಮಾಡಬೇಕು; ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಕೇಂದ್ರದ ಆದಾಯದ ಶೇ 5ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿಕೆ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ರೂ.1.15 ಲಕ್ಷ ಕೋಟಿಗಳಷ್ಟು ಹೂಡಿಕೆ ಅಗತ್ಯವಿದೆ. ಇದಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ ರೂ.27,793 ಕೋಟಿಗಳನ್ನಾದರೂ ನೀಡುವಂತೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com