

ಬೆಂಗಳೂರು: ಬಳ್ಳಾರಿಯ ಅವ್ವಂಬಾವಿಯಲ್ಲಿ ಇದೇ ತಿಂಗಳ ಆರಂಭದಲ್ಲಿ ನಡೆದಿದ್ದ ಘರ್ಷಣೆ, ಸಾವು ಪ್ರಕರಣ ಕುರಿತ ಚರ್ಚೆ ಕಾಂಗ್ರೆಸ್‌ನ ಬಿ.ನಾಗೇಂದ್ರ ಹಾಗೂ ಬಿಜೆಪಿ ಸಹ ಸದಸ್ಯ ಜಿ. ಜನಾರ್ದನ ರೆಡ್ಡಿ ನಡುವೆ ವಾಗ್ವಾದಕ್ಕೆ ತಿರುಗಿತು.
ವಿಧಾನಸಭೆಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ವಾಲ್ಮೀಕಿ ಸಮಾಜದಲ್ಲಿ ಶ್ರೀರಾಮುಲು ಮುಂದೆ ನೀನು ನಾಯಕನಾಗೋಕೆ ಆಗುವುದಿಲ್ಲ. ನೂರು ಜನ್ಮ ಹುಟ್ಟಿ ಬಂದರೂ ನೀನು ಲೀಡರ್ ಆಗೋಕೆ ಆಗುವುದಿಲ್ಲ ಎಂದು ಗುಡುಗಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಇದರಿಂದ ರೊಚ್ಚಿಗೆದ್ದ ಬಿ.ನಾಗೇಂದ್ರ ಮೇಜು ಕುಟ್ಟಿ ಸವಾಲು ಸ್ವೀಕಾರ ಮಾಡಿದರು. ಹಿಂದಿನ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಅವರನ್ನು ಸೋಲಿಸಿದ್ದೆ ಮತ್ತು ಮುಂದೆ ರೆಡ್ಡಿ ಅವರನ್ನು ಸೋಲಿಸುತ್ತೇನೆ ಎಂದು ನಾಗೇಂದ್ರ ಹೇಳಿದ್ದರು.
ಜನಾರ್ದನ ರೆಡ್ಡಿ ಸವಾಲು ಸ್ವೀಕರಿಸಿದ ನಾಗೇಂದ್ರ, ವಾಲ್ಮೀಕಿ ಸಮಾಜ ನಮ್ಮ ಸಮಾಜ. ನಮ್ಮ ಸಮಾಜದ ಜನ ನಮ್ಮ ಜೊತೆಗೆ ಇದ್ದಾರೆ ಎಂದು ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಸಿದ ರೆಡ್ಡಿ ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕೋಕೆ ಮುಂದಾದ್ರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದ್ರೆ ನೀನು ಅದನ್ನೆ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದ್ರೆ ಹೇಗೆ? ಎಂದು ನಾಗೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಝೆಡ್ ಭದ್ರತೆ ಆದರೂ ಕೇಳಲಿ, ಇರಾನ್‌ನಿಂದ ಯಾವುದಾದರೂ ಭದ್ರತೆ ತೆಗೆದುಕೊಂಡು ಬರಲಿ, ಅಮೆರಿಕದಿಂದ ಆದರೂ ತರಿಸಿಕೊಳ್ಳಲಿ ಅಥವಾ ಇವರಾದರೂ ಭದ್ರತೆ ಮಾಡಿಕೊಳ್ಳಲಿ ಯಾರು ಬೇಡ ಅಂದರು. ಪತ್ರ ಬರೆದಿರೋದು ಬಹಳ ಸಂತೋಷ. ಅವರ ಪಾರ್ಟಿ ಕೇಡರ್ಸ್ ಅವರನ್ನೆ ನೂರು ಜನರನ್ನ ಭದ್ರತೆಗೆ ರೆಡಿ ಮಾಡಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ರೆಡ್ಡಿ ಬೇಸರ ವ್ಯಕ್ತ ಪಡಿಸಿದರು.
ಮಾತು ಆರಂಭಿಸಿದ್ದ ನಾಗೇಂದ್ರ, ಜನಾರ್ದನ ರೆಡ್ಡಿ ಅಸತ್ಯಗಳನ್ನು ಸತ್ಯ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ತನಿಖೆಯಲ್ಲಿ ತಪ್ಪು- ಒಪ್ಪು ಗೊತ್ತಾಗುತ್ತದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಜನಾರ್ದನರೆಡ್ಡಿ ಅವರ ಜನ್ಮದಿನದಂದು ಬ್ಯಾನರ್ ಕಟ್ಟಲು ಅಡ್ಡಿಪಡಿಸಿದಾಗ ದೂರವಾಣಿ ಕರೆ ಮಾಡಿದ್ದರು. ನಾನೂ ಸ್ಪಂದಿಸಿದ್ದೆ.
ಈಗಲೂ ಅವರು ನನಗೊಂದು ಕರೆ ಮಾಡಿದ್ದರೆ, ಇಷ್ಟು ದೊಡ್ಡ ಘಟನೆ ನಡೆಯುತ್ತಲೇ ಇರಲಿಲ್ಲ. ಆದರೆ, ಮಹರ್ಷಿ ವಾಲ್ಮೀಕಿ ಅವರ ಚಿತ್ರವಿದ್ದ ಬ್ಯಾನರ್‌ನ್ನು ಹರಿದದ್ದು ಬಹಳ ನೋವಾಗಿದೆ. ಇಷ್ಟು ಸಾಲದು ಎಂಬಂತೆ ಮೊನ್ನೆ ನಡೆದ ಸಮಾವೇಶದಲ್ಲಿ ಶ್ರೀರಾಮುಲು ಅವರು ‘ನಮ್ಮ ಸರ್ಕಾರ ಬಂದಾಗ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಡಲ್ಲ, ಹುಡುಕಿ ಹೊಡೆಯುತ್ತೇವೆ’ ಎಂದಿದ್ದಾರೆ. ಮತ್ತೆ ಬಳ್ಳಾರಿ ರಿಪಬ್ಲಿಕ್ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
Advertisement