ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್ ಫ್ಯಾಕ್ಟರಿ ಪತ್ತೆ: NCBಯಿಂದ ಸ್ಫೋಟಕ ಮಾಹಿತಿ, ಫಿನಾಯಿಲ್ ಫ್ಯಾಕ್ಟರಿ ಎಂದಿದ್ದ ಸರ್ಕಾರಕ್ಕೆ ಮುಖಭಂಗ..!

ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೀಡಿದ ಹೇಳಿಕೆಗಳು ಎನ್‌ಸಿಬಿಯ ಅಧಿಕೃತ ಪ್ರಕಟಣೆಗೆ ವಿರುದ್ಧವಾಗಿದ್ದು, ಇದು ಹಲವರ ಹುಬ್ಬೇರುವಂತೆ ಮಾಡಿದೆ.
Drugs
ಡ್ರಗ್ಸ್ ಜಪ್ತಿ ಮಾಡಿರುವುದು.
Updated on

ಮೈಸೂರು: ಗುಜರಾತ್ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬೃಹತ್ ಮಾದಕ ದ್ರವ್ಯ ಜಾಲವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಭೇದಿಸಿದ್ದು, ಸುಮಾರು 10 ಕೋಟಿಗೂ ಅಧಿಕ ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಮತ್ತು 25.6 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದೆ.

ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎನ್​​ಸಿಬಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಪಿಗಳ ಬಂಧನದ ಬಳಿಕ ಎನ್‌ಸಿಬಿಯ ಬೆಂಗಳೂರು ವಲಯ ಘಟಕವು ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಘಟಕ ಮೇಲೆ ದಾಳಿ ನಡೆಸಿ, ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಎನ್​​ಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಇದುವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳು (ಬೀದಿ ಮಾರುಕಟ್ಟೆ), 25.6 ಲಕ್ಷ ರೂ. ನಗದು, ಟೊಯೋಟಾ ಫಾರ್ಚೂನರ್ ಎಸ್‌ಯುವಿ ಮತ್ತು 500 ಕೆಜಿಗಿಂತ ಹೆಚ್ಚು ತೂಕದ ಡ್ರಗ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಹೇಳಿದೆ.

ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆ ಕಲಿತಿದ್ದ ಮಾಸ್ಟರ್ ಮೈಂಡ್

ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆಯನ್ನು ಕಲಿತಿದ್ದ ಮಾಸ್ಟರ್ ಮೈಂಡ್ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಸೂರಿನಲ್ಲಿ ಈ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಎಂದು ಎನ್​ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಅಫೀಮ್ ಮತ್ತು ಸ್ಮ್ಯಾಕ್ ಮಾರಾಟ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ವಿಷ್ಣೋಯ್, ಎನ್‌ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಸಿಂಥಟಿಕ್ ಡ್ರಗ್ಸ್ ತಯಾರಿಕೆಯ ಪ್ರಕ್ರಿಯೆ, ಮಾರುಕಟ್ಟೆ ಬೇಡಿಕೆ ಮತ್ತು ಸರಬರಾಜು ಜಾಲದ ಬಗ್ಗೆ ತಿಳಿದುಕೊಂಡಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, 2024ರಲ್ಲಿ ಮೈಸೂರಿನಲ್ಲಿ ಗುಪ್ತವಾಗಿ ಉತ್ಪಾದನಾ ಘಟಕ ಸ್ಥಾಪಿಸಿ, ಅನೇಕ ಬಾರಿ ಡ್ರಗ್ಸ್ ಉತ್ಪಾದನೆ ಮತ್ತು ವಿತರಣೆ ನಡೆಸಿದ್ದ.

Drugs
ಮೈಸೂರು: ಡ್ರಗ್ಸ್ ತಯಾರಿಕೆ ಅನುಮಾನ; ಫೆನಾಯಿಲ್ ಘಟಕದ ಮೇಲೆ ದೆಹಲಿ ಪೊಲೀಸರು ದಾಳಿ!

ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿದ್ದ ಘಟಕದಲ್ಲಿ ಡ್ರಗ್ಸ್ ತಯಾರಿಕೆಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳು ಮತ್ತು ಸಂಪೂರ್ಣ ಪ್ರಯೋಗಾಲಯ ವ್ಯವಸ್ಥೆ ಪತ್ತೆಯಾಗಿದೆ.

ಈವರೆಗೆ ಬಂಧಿತರಾದ ನಾಲ್ವರೂ ರಾಜಸ್ಥಾನದ ಜಾಲೋರ್ ಜಿಲ್ಲೆಯವರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಸದಸ್ಯರು, ಪ್ರಯೋಗಾಲಯ ಉಪಕರಣಗಳು ಮತ್ತು ರಾಸಾಯನಿಕಗಳ ಸರಬರಾಜು ಮೂಲ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಈ ನಡುವೆ ಈ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೀಡಿದ ಹೇಳಿಕೆಗಳು ಎನ್‌ಸಿಬಿಯ ಅಧಿಕೃತ ಪ್ರಕಟಣೆಗೆ ವಿರುದ್ಧವಾಗಿದ್ದು, ಇದು ಹಲವರ ಹುಬ್ಬೇರುವಂತೆ ಮಾಡಿದೆ.

ಎನ್‌ಸಿಬಿ ದಾಳಿಯಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಗೃಹ ಸಚಿವರು ಹೇಳಿದ್ದರೆ, ಪೊಲೀಸ್ ಆಯುಕ್ತೆ ಇದು ಅಹಮದಾಬಾದ್ ಪ್ರಕರಣಕ್ಕೆ ಸಂಬಂಧಿಸಿದ ತಪಾಸಣೆಯಾಗಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಹೆಬ್ಬಾಳದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕ ನಡೆಸುತ್ತಿದ್ದ ಗಣಪತ್ ಎಂಬ ವ್ಯಕ್ತಿಯನ್ನು ಎನ್‌ಸಿಬಿ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.

ಇನ್ನು ಭಾರತದಲ್ಲಿ ಮಿಫೆಡ್ರೋನ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ಎಚ್ಚರಿಕೆ ನೀಡಿರುವ ಎನ್‌ಸಿಬಿ, ಮಿಫೆಡ್ರೋನ್ ತಯಾರಿಕೆಗೆ ಬಳಸುವ 2-ಬ್ರೋಮೋ-4’-ಮೆಥೈಲ್ಪ್ರೊಪಿಯೋಫೆನೋನ್ ಮತ್ತು ಮೊನೋಮೆಥೈಲಮೈನ್ ಎಂಬ ಎರಡು ಪ್ರಮುಖ ರಾಸಾಯನಿಕಗಳ ಖರೀದಿದಾರರ ಹಿನ್ನೆಲೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com