

ಬೆಂಗಳೂರು: ರಾಜ್ಯವನ್ನು 2028ರೊಳಗೆ ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ಹಾಗೂ ವ್ಯಸನಮುಕ್ತ ಕರ್ನಾಟಕವನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ–2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ಬೇಡ ಬ್ರೋ (Beda BRO)' ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವಜನತೆ ಸರ್ಕಾರದೊಂದಿಗೆ ಕೈಜೋಡಿಸಿದರೆ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ವ್ಯಸನವನ್ನು ಬಿಟ್ಟು ಸಂತೋಷದ ಜೀವನ ನಡೆಸಿ. ನಮ್ಮ ಸುತ್ತಮುತ್ತಲಿನವರಿಗೂ ಈ ಕುರಿತು ಜಾಗೃತಿ ಮೂಡಿಸಬೇಕು. ಸ್ನೇಹಿತರು ಅಥವಾ ಇತರರು ಒತ್ತಡ ಹೇರಿದರೂ ವಿದ್ಯಾರ್ಥಿಗಳು ಮತ್ತು ಯುವಕರು ಅದಕ್ಕೆ ಮಣಿಯಬಾರದು. ಕಳೆದ ಮೂರು ವರ್ಷಗಳಲ್ಲಿ ಮಾಜಿ ಗೃಹ ಸಚಿವ ಜಿ.ಪರಮೇಶವರ್ ಅವರ ನೇತೃತ್ವದಲ್ಲಿ ಸುಮಾರು ರೂ.89 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಡ್ರಗ್ಸ್ ವ್ಯಸನ ಇದೆ ಎಂಬ ವಿಚಾರವನ್ನು ಸಮಾಜದ ಭಯದಿಂದ ಮುಚ್ಚಿಡಬಾರದು. ಹೀಗೆ ಮಾಡಿದರೆ ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿದಂತಾಗುತ್ತದೆ. ಬದಲಾಗಿ ಅವರಿಗೆ ಸೂಕ್ತ ಸಮಾಲೋಚನೆ ನೀಡಿ, ಪೊಲೀಸರನ್ನು ಸಂಪರ್ಕಿಸಬೇಕು.
ಇದರಿಂದ ಡ್ರಗ್ಸ್ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಮಾಹಿತಿ ನೀಡುವ ಮಕ್ಕಳ ಅಥವಾ ಕುಟುಂಬಗಳ ಗುರುತನ್ನು ಸಂಪೂರ್ಣ ಗೌಪ್ಯವಾಗಿಡುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಡ್ರಗ್ಸ್ ಜಾಲದ ಕುರಿತು ಗೌಪ್ಯ ಮಾಹಿತಿ ನೀಡುವವರಿಗೆ ಪೊಲೀಸ್ ಇಲಾಖೆ ಬಹುಮಾನ ನೀಡಲಿದೆ ಎಂದು ತಿಳಿಸಿದ ಅವರು, ಇದರಿಂದ ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ನಾಶಮಾಡಲು ನೆರವಾಗುತ್ತದೆ ಎಂದರು.
ರಾಜ್ಯ ಸರ್ಕಾರಕ್ಕೆ ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿ ಮಾದಕ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಮೊಬೈಲ್ ಮತ್ತು ದೂರವಾಣಿ ಜಾಲದ ಮೂಲಕ ಮನೆ ಮನೆಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲವೂ ಸಕ್ರಿಯವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯ ಸರ್ಕಾರ ಡ್ರಗ್ಸ್ ನಿರ್ಮೂಲನೆಗೆ 'ಶೂನ್ಯ ಸಹಿಷ್ಣುತೆ (Zero Tolerance)' ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಡ್ರಗ್ಸ್ ವಿರುದ್ಧದ ಹೋರಾಟ ಕೇವಲ ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಸೀಮಿತವಾಗದೆ, ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ 'ಆಪರೇಷನ್ RISE' (Refuse, Inform, Support, Empower) ಕಾರ್ಯಕ್ರಮವನ್ನು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಆರಂಭವಾಗಿರುವ 'ಬೇಡ BRO' ಅಭಿಯಾನದ ಮೂಲಕ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಯುವಜನರು ಹೆಚ್ಚಿರುವ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯುವಕರಲ್ಲಿ ಡ್ರಗ್ಸ್ ವ್ಯಸನಕ್ಕೆ ಪ್ರಮುಖ ಕಾರಣವಾಗಿರುವ ಸ್ನೇಹಿತರ ಒತ್ತಡ (Peer Pressure) ಕುರಿತು ವಿಶೇಷ ಜಾಗೃತಿ ಮೂಡಿಸಲಾಗುತ್ತದೆ ಎಂದರು.
"ಒಬ್ಬ ಸ್ನೇಹಿತನ ತಪ್ಪು ಪ್ರಭಾವ ಇಡೀ ಜೀವನವನ್ನೇ ಹಾಳು ಮಾಡಬಹುದು' ಎಂಬ ಸಂದೇಶವನ್ನು 'ಬೇಡ BRO' ಅಭಿಯಾನದ ಮೂಲಕ ಯುವಜನರಿಗೆ ತಲುಪಿಸಲಾಗುತ್ತದೆ. ಇದು ಕೇವಲ ಅಭಿಯಾನವಲ್ಲ, ಯುವಕರ ಬದುಕನ್ನು ಉಳಿಸುವ ಸಾಮಾಜಿಕ ಚಳವಳಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಡಿಜಿ ಮತ್ತು ಐಜಿಪಿ ಎಂಎ ಸಲೀಮ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
184.72 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ವಶಕ್ಕೆ
ರಾಜ್ಯ ಸರ್ಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2026ರ ಮೇ 31ರವರೆಗೆ ಕರ್ನಾಟಕದಲ್ಲಿ 184.72 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ 1,406 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಒಟ್ಟು 6,651 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ 5,090 ಡ್ರಗ್ ಸೇವಕರು ಹಾಗೂ 17 ಡ್ರಗ್ ತಯಾರಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.