

ಕನಕಪುರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು ರೈಲ್ವೆ ಹಳಿಗಳ ಕಬ್ಬಿಣದ ಬ್ಯಾರಿಕೇಡ್ ಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ವನ್ಯಜೀವಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿ ಅರೆಕೊಪ್ಪ ಗ್ರಾಮದ ಬಳಿ ಕಾಡಾನೆಯೊಂದು ನಾಡಿನೊಳಗೆ ಬರಲು ಯತ್ನಿಸಿ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ವರದಿಯಾಗಿದೆ.
ಕಾಡಾನೆಯೊಂದು ಆನೆಗಳು ನಾಡಿಗೆ ಬರದಂತೆ ತಡೆಯಲು ನಿರ್ಮಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್‌ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿಕೊಂಡಿದೆ. ಕಂಬದಿಂದ ಹೊರಕ್ಕೆ ಬರಲು ಆನೆಗೆ ಆಗಿಲ್ಲ. ಸುಮಾರು ಹೊತ್ತಿನಿಂದ ಪ್ರಯತ್ನಿಸಿದ ಆನೆಗೆ ಸುಸ್ತಾಗಿದೆ.
ಕಬ್ಬಿಣದ ಕಂಬಗಳ ನಡುವೆ ದೇಹ ಸಿಲುಕಿಕೊಂಡಿದ್ದರಿಂದ ಆನೆಗೆ ಮುಂದೆ ಹೋಗಲು ಅಥವಾ ಹಿಂದಕ್ಕೆ ಸಾಗಲೂ ಸಾಧ್ಯವಾಗದೆ ತೀವ್ರವಾಗಿ ನರಳಾಡಿದೆ. ಆನೆಯ ಕಿರುಚಾಟವನ್ನು ಕೇಳಿ ಸ್ಥಳೀಯ ಗ್ರಾಮಸ್ಥರು ಧಾವಿಸಿದ್ದು, ತಕ್ಷಣವೇ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆಗಿದ್ದೇನು?
ಕಾವೇರಿ ವನ್ಯಜೀವಿಧಾಮದಿಂದ ಕಾಡಂಚಿನ ರೈತರ ಜಮೀನಿಗೆ ರಾತ್ರಿ ಬಂದಿದ್ದ ಕಾಡಾನೆ ಮೇವು ತಿಂದಿತ್ತು. ನಸುಕಿನಲ್ಲಿ ಕಾಡಿಗೆ ಹಿಂದಿರುಗುವಾಗ ಬ್ಯಾರಿಕೇಡ್ ಮಧ್ಯೆ ದನಕರುಗಳು ಅರಣ್ಯಕ್ಕೆ ಹೋಗಿ ಬರಲು ಸಣ್ಣದಾದ ಕಿಂಡಿಯಲ್ಲಿ ವಾಪಸ್ ಹೋಗಲು ಆನೆ ಮುಂದಾಗಿದೆ.
ಅರ್ಧದಷ್ಟು ಮುಂದಕ್ಕೆ ಹೋದ ಕಾಡಾನೆಗೆ ಪೂರ್ತಿ ಹೋಗಲು ಸಾಧ್ಯವಾಗಿಲ್ಲ. ಮಧ್ಯದಲ್ಲೇ ಸಿಲುಕಿಕೊಂಡು ನೋವಿನಿಂದ ನರಳುತ್ತಿತ್ತು. ಬೆಳಿಗ್ಗೆ ಜಮೀನಿಗೆ ಬಂದಿದ್ದ ರೈತರು ಬ್ಯಾರಿಕೇಡ್ ನಡುವೆ ಆನೆ ಸಿಲುಕಿರುವುದನ್ನು ಗಮನಿಸಿ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಹರಸಾಹಸ
ಗ್ರಾಮಸ್ಥರಿಂದ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ರಕ್ಷಿಸಲು ಕಾರ್ಯಾಚರಣೆ ಅರಂಭಿಸಿದರು. ಬಳಿಕ ಪಶು ವೈದ್ಯಾಧಿಕಾರಿಗಳು ಹಾಗೂ ಕಬ್ಬಿಣ ಕತ್ತರಿಸುವ ಯಂತ್ರವನ್ನು ಸ್ಥಳಕ್ಕೆ ತರಿಸಲಾಯಿತು.
ವೈದ್ಯರು ಆನೆಗೆ ಅನಸ್ತೇಷಿಯಾ ಕೊಟ್ಟ ಕೆಲ ಕ್ಷಣದಲ್ಲೇ ಪ್ರಜ್ಞೆ ತಪ್ಪಿತು. ಬಳಿಕ ಯಂತ್ರದಿಂದ ಆನೆ ಸಾಗಲು ಅನುಕೂಲವಾಗುವಷ್ಟು ಬ್ಯಾರಿಕೇಡ್ ಕತ್ತರಿಸಲಾಯಿತು. ಮಧ್ಯಾಹ್ನ 12.30ರ ಸುಮಾರಿಗೆ ಆನೆಗೆ ಪ್ರಜ್ಞೆ ಬಂದ ಬಳಿಕ ಮರಳಿ ಕಾವೇರಿ ವನ್ಯಜೀವಿಧಾಮದ ಕಡೆಗೆ ಓಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ಥಳಕ್ಕೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ನಾಗೇಂದ್ರ, ಆರ್‌ಎಫ್‌ಒ ಶ್ರೀಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.