

ಬೆಂಗಳೂರು: ರಾಜಾಜಿನಗರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ" ನನಗೆ " ಬೇಕಾದ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಮೂಲಕ ಸರ್ಕಾರಿ ಖಜಾನೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೂರ್ಯ ಮುಕುಂದರಾಜು ಕರ್ನಾಟಕ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ.
ಜಿಎಸ್‌ಟಿ ಹಾಗೂ ಇಲಾಖೆಯ ಇತರ ವೆಚ್ಚಗಳು ಸೇರಿದರೆ ಈ ಒಟ್ಟು ಹಗರಣದ ಮೊತ್ತ 300 ಕೋಟಿಯ ಗಡಿಯನ್ನು ಮೀರುತ್ತದೆ ಎಂದೂ ದೂರಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸುರೇಶ್ ಕುಮಾರ್, ದೂರಿನ ಎಲ್ಲಾ ಅಂಶಗಳಿಗೆ ಇನ್ನೆರಡು ದಿನಗಳಲ್ಲಿ ಲೋಕಾಯುಕ್ತರಿಗೆ ಸುದೀರ್ಘ ಉತ್ತರ ಸಲ್ಲಿಸಲಿದ್ದೇನೆ ಎಂದಿದ್ದಾರೆ.
ಸೂರ್ಯ ಮುಕುಂದರಾಜ್ ರವರ ಹಿನ್ನೆಲೆ, ಅವರ ಉದ್ದೇಶ, ಅವರು ಯಾರ ಪರವಾಗಿ ಈ ಎಲ್ಲಾ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಇದೊಂದು ಪೂರ್ಣ ಸುಳ್ಳಿನಿಂದ ಕೂಡಿರುವ, ಶುದ್ಧ ಹಾಸ್ಯಾಸ್ಪದ ದೂರು. ಲೋಕಾಯುಕ್ತ ರವರು ಈ ಕುರಿತು ಸಂಪೂರ್ಣವಾದ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
1983 ರಿಂದ ಬೆಂಗಳೂರು ನಗರ ಪಾಲಿಕೆಯ ಸದಸ್ಯ ನಾದಾಗಿನಿಂದ ಇದುವರೆಗೂ ನನ್ನ ಕಾರ್ಯ ವೈಖರಿ, ನನ್ನ ರಾಜಕಾರಣದ ಉದ್ದೇಶ, ಮತ್ತು ಕ್ಷೇತ್ರದ ಜನತೆಯ ಹಿತಕ್ಕಾಗಿ ನಾನು ಕೈಗೊಂಡಿರುವ ಕೆಲಸಗಳು ಎಲ್ಲರಿಗೂ ತಿಳಿದಿದೆ.
ನಾನು ನನ್ನ ನಾಲ್ಕು ದಶಕಗಳ ಸಾರ್ವಜನಿಕ ಬದುಕಿನಲ್ಲಿ ಎಂದಿಗೂ, ಯಾವುದೇ ಗುತ್ತಿಗೆಯ ಕೆಲಸಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೈ ಹಾಕಿಲ್ಲ. ಬೇನಾಮಿ ಗುತ್ತಿಗೆದಾರರು ಎಂಬ ಅಂಶ ನನ್ನ ಒಟ್ಟು ಜೀವನದಲ್ಲಿ ಎದ್ದೇ ಇಲ್ಲ. ಸರ್ಕಾರಕ್ಕಾಗಲಿ ಅಥವಾ ನಗರ ಪಾಲಿಕೆಗಾಗಲಿ ನಷ್ಟ ಉಂಟು ಮಾಡುವ ಮನಸ್ಥಿತಿ ಅಥವಾ ಜಾಯಮಾನ ನನ್ನದಲ್ಲ ಎಂದಿದ್ದಾರೆ.
ಇಡೀ ಬೆಂಗಳೂರಿನಲ್ಲಿ ಕಾಮಗಾರಿಗಳನ್ನು ಕೈಗೊಂಡು ಕೆಲಸ ಮಾಡದೆ ಬಿಲ್ ಪಡೆಯುವ ಕುಖ್ಯಾತಿಯ ವ್ಯಕ್ತಿಗಳ ಪರವಾಗಿ ಸೂರ್ಯ ಮುಕುಂದ ರಾಜರವರು ಈ ರೀತಿಯ ವಕಾಲತ್ ವಹಿಸಿರುವುದು ನನಗೆ ನಿಜಕ್ಕೂ ಕನಿಕರವೆನಿಸುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ರಾಜಕಾರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ನಗರ ಪಾಲಿಕೆ ಎಲ್ಲಾ ಅಧಿಕಾರಿಗಳಿಗೆ ನನ್ನ ವ್ಯಕ್ತಿತ್ವ ಏನು ಎಂಬುದು ತಿಳಿದಿದೆ. ಹೀಗಿರುವಾಗ ಲೋಕಾಯುಕ್ತಕ್ಕೆ ನನ್ನ ವಿರುದ್ಧ ಸಲ್ಲಿಸಿರುವ ದೂರು ರಾಜಕೀಯ ದುರುದ್ದೇಶದಿಂದ ಮತ್ತು ನನ್ನ ಹೆಸರಿಗೆ ಹೇಗಾದರೂ ಮಾಡಿ ಕೆಸರು ಎರಚುವ ಒಂದು ಪ್ರಯತ್ನವಷ್ಟೇ ಎಂದು ಆರೋಪಿಸಿದ್ದಾರೆ.
ನಾನು ಈಗಾಗಲೇ ತಿಳಿಸಿರುವಂತೆ ಈ ದೂರಿನ ಪ್ರತಿಯನ್ನು ಪೂರ್ಣ ಅಧ್ಯಯನ ಮಾಡಿ ಪ್ರತಿಯೊಂದು ಅಂಶಕ್ಕೂ ಇನ್ನೆರಡು ದಿನಗಳಲ್ಲಿ ಪೂರ್ಣ ಉತ್ತರವನ್ನು ನೀಡಿ, ದೂರುದಾರರ ಒಟ್ಟು ದುರುದ್ದೇಶದ ಕುರಿತು ತನಿಖೆ ಮಾಡಬೇಕೆಂದು ಲೋಕಾಯುಕ್ತರನ್ನು ಆಗ್ರಹಿಸಿದ್ದಾರೆ.