

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ತಮ್ಮ ಭಾಷಣದ ವೇಳೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ತಮ್ಮ ಬಾಸ್ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ತಮಿಳುನಾಡು ಉಸ್ತುವಾರಿಯಾಗಿ ಸಿ.ಟಿ. ರವಿ ಅವರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರ ಜೊತೆ ತಾನು ಕೆಲಸ ಮಾಡಿದ್ದೆ. ಹಿಂದೆಯೋ ಅಥವಾ ಈಗಲೋ ಅದು ಲೆಕ್ಕವಲ್ಲ, ಅವರು ನನ್ನ ಬಾಸ್, ಆದರೆ ಬಾಸ್ ಯಾವಾಗಲೂ ಬಾಸ್ ಎಂದು ಹೇಳುವ ಮೂಲಕ ಅವರು ಸರಳತೆ ಮೆರೆದಿದ್ದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.