E-20 ಇಂಧನ ಪ್ರಯೋಗ ಬೇಡವೇ ಬೇಡ; ವಾಹನ ಸವಾರರಿಂದ ತೀವ್ರ ಆಕ್ಷೇಪ, ಕೇಂದ್ರ ಸರ್ಕಾರ ನೀತಿ ಹಿಂಪಡೆಯಲಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಎಥೆನಾಲ್ ಮಿಶ್ರಣ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಅಂತಿಮ ಫಲಿತಾಂಶಗಳು 2027ರ ವೇಳೆಗೆ ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮತ್ತು ಶೇ.80ರಷ್ಟು ಪೆಟ್ರೋಲ್ ಮಿಶ್ರಣವನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಇ–20 (E20) ಇಂಧನ ನೀತಿಯ ವಿರುದ್ಧ ವಾಹನ ಸವಾರರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ಎಥೆನಾಲ್ ಮಿಶ್ರಣ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಅಂತಿಮ ಫಲಿತಾಂಶಗಳು 2027ರ ವೇಳೆಗೆ ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಬೆಂಗಳೂರು ನಿವಾಸಿ ಡಾ. ಸಾಗರಿಕಾ ಅವರ ವೆಸ್ಪಾ ಸ್ಕೂಟರ್‌ನಲ್ಲಿ ಇತ್ತೀಚೆಗೆ ಪದೇ ಪದೇ ಸ್ಟಾರ್ಟ್ ಸಮಸ್ಯೆ ಕಾಣಿಸಿಕೊಂಡಿದೆ. ಮೂರು ಬಾರಿ ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗಬೇಕಾಯಿತು. ಪ್ರತಿ ಬಾರಿಯೂ ಪೆಟ್ರೋಲ್ ಟ್ಯಾಂಕ್‌ನಿಂದ ಸುಮಾರು ಒಂದು ಬಾಟಲಿಯಷ್ಟು ನೀರಿನಂತಿರುವ ದ್ರವವನ್ನು ಹೊರತೆಗೆದ ಬಳಿಕ ಸ್ಕೂಟರ್ ಮತ್ತೆ ಸರಿಯಾಗಿ ಕಾರ್ಯನಿರ್ವಹಿಸಿತು ಎಂದು ಹೇಳಿದರು.

ಮೆಕ್ಯಾನಿಕ್ ದೀಪಕ್ ಅವರ ಪ್ರಕಾರ, ಈ ಸಮಸ್ಯೆಗೆ ಇ–20 ಇಂಧನವೇ ಕಾರಣ. ಎಥೆನಾಲ್ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಇಂಧನವನ್ನು ಸರಿಯಾಗಿ ಮಿಶ್ರಣ ಮಾಡದಿದ್ದರೆ ಅಥವಾ ಸೂಕ್ತ ರೀತಿಯಲ್ಲಿ ಸಂಗ್ರಹಿಸದಿದ್ದರೆ, ಎಥೆನಾಲ್ ಪೆಟ್ರೋಲ್‌ನಿಂದ ಬೇರ್ಪಟ್ಟು ಟ್ಯಾಂಕ್‌ನ ತಳಭಾಗದಲ್ಲಿ ನೆಲೆಸುತ್ತದೆ. ಇದರಿಂದ ವಾಹನ ಸ್ಟಾರ್ಟ್ ಆಗಲು ತೊಂದರೆಯಾಗುತ್ತದೆ ಎಂದು ಹೇಳಿದರು.

ಅಸಮರ್ಪಕ ಮಿಶ್ರಣದಿಂದ ಅನೇಕ ಗ್ರಾಹಕರು ಪೆಟ್ರೋಲ್‌ಗೆ ನೀರು ಬೆರೆಸಲಾಗಿದೆ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಬಹಳಷ್ಟು ವಾಹನ ಸವಾರರು ಪೆಟ್ರೋಲ್‌ನಲ್ಲಿ ನೀರು ಬೆರೆಸಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಅವರು ನೋಡುವುದು ಪೆಟ್ರೋಲ್‌ನಿಂದ ಬೇರ್ಪಟ್ಟಿರುವ ಎಥೆನಾಲ್ ಆಗಿರಬಹುದು. ಈ ನೀತಿಯನ್ನು ಸಾರ್ವಜನಿಕರ ಮೇಲೆ ಜಾರಿಗೊಳಿಸುವ ಮೊದಲು ವೈಜ್ಞಾನಿಕ ಅಧ್ಯಯನ ಅಗತ್ಯ ಎಂದು ಅವರು ಹೇಳಿದರು.

ಎಥೆನಾಲ್‌ನ ಉಷ್ಣಮೌಲ್ಯ (ಕ್ಯಾಲೋರಿಫಿಕ್ ವ್ಯಾಲ್ಯೂ) ಪೆಟ್ರೋಲ್‌ಗಿಂತ ಕಡಿಮೆಯಾಗಿರುವುದರಿಂದ ಇಂಧನ ದಕ್ಷತೆಯ ಮೇಲೂ ಪರಿಣಾಮ ಬೀರಬಹುದು ಎಂದು ದೀಪಕ್ ಅಭಿಪ್ರಾಯಪಟ್ಟರು. ಮಿಶ್ರಣ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ತೈಲ ಮಾರುಕಟ್ಟೆ ಕಂಪನಿಗಳು ಹಾಗೂ ಇಂಧನ ಟರ್ಮಿನಲ್ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವು ಇ–20 ಇಂಧನ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸುಮಾರು ನಾಲ್ಕು ದಶಕಗಳಿಂದ ಆಮದು ಮಾಡಿದ ಕಾರುಗಳ ದುರಸ್ತಿ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಎ. ವಿಕ್ಕಿ ಅವರ ಪ್ರಕಾರ, ಎಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದ್ದು, ಹಂತ ವಿಭಜನೆ (ಫೇಸ್ ಸೆಪರೇಷನ್) ಸಂಭವಿಸಿದಾಗ ಅದು ಟ್ಯಾಂಕ್‌ನ ತಳಭಾಗದಲ್ಲಿ ಸಂಗ್ರಹವಾಗುತ್ತದೆ.

ಇದರಿಂದ ಎಂಜಿನ್ ಸಮಸ್ಯೆಗಳು, ಕಾರ್ಬನ್ ನಿಕ್ಷೇಪ, ಇಂಧನ ದಕ್ಷತೆ ಕುಸಿತ ಹಾಗೂ ವಾಹನದ ಪಿಕ್‌ಅಪ್ ಕಡಿಮೆಯಾಗುವಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದರು.

ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್, ಎಥೆನಾಲ್ ಎಂಬ ಪರಿಕಲ್ಪನೆಯಲ್ಲೇ ಸಮಸ್ಯೆಯಿಲ್ಲ. ಆದರೆ ಅದರ ಅನುಷ್ಠಾನ ವಿಧಾನದಲ್ಲೇ ದೊಡ್ಡ ಸಮಸ್ಯೆ ಇದೆ. ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ 2027ರವರೆಗೆ ಇನ್ನಷ್ಟು ಪ್ರಯೋಗಗಳ ಅಗತ್ಯವಿದೆ ಎಂದು ಹೇಳಿದ್ದರೆ, ಈ ಯೋಜನೆ ಇನ್ನೂ ಮೌಲ್ಯಮಾಪನ ಹಂತದಲ್ಲಿದೆ ಎಂದರ್ಥ. ಆದರೆ ಇದೇ ವೇಳೆ ಲಕ್ಷಾಂತರ ಗ್ರಾಹಕರು ಈಗಾಗಲೇ ಈ ಇಂಧನವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com