

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ನೀರಿನ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ಬಿ) ಬೇಸಿಗೆಯಲ್ಲಿ ಜಾರಿಗೊಳಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಈ ಬಾರಿ ಮಳೆಗಾಲದಲ್ಲಿಯೇ ಜಾರಿಗೊಳಿಸಿದೆ.
ಕುಡಿಯುವ ನೀರನ್ನು ಈಜುಕೊಳಗಳಿಗೆ, ವಾಹನಗಳ ಸ್ವಚ್ಛತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ಮನೋರಂಜನ ಕಾರಂಜಿಗಳಿಗೆ ಬಳಸುವಂತಿಲ್ಲ ಎಂದು ಬಿಡಬ್ಲ್ಯೂಎಸ್ಎಸ್ಬಿ ಆದೇಶ ಹೊರಡಿಸಿದೆ.
ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಈಜುಕೊಳಗಳಿಗೆ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಿದ್ದು, ವಾಹನಗಳು ಮತ್ತು ಬೀದಿಗಳನ್ನು ತೊಳೆಯಲು ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಿದೆ ಮತ್ತು ಏರೇಟರ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ.
ಆದೇಶ ಉಲ್ಲಂಘಿಸಿದರೆ 5 ಸಾವಿರ ದಂಡ
ಮಂಡಳಿಯು ತನ್ನ ಹೊಸ ಆದೇಶಗಳನ್ನು ಉಲ್ಲಂಘಿಸಿದರೆ 5000 ರೂ. ದಂಡ ವಿಧಿಸುವುದಾಗಿ ಘೋಷಿಸಿದೆ. ಕಠಿಣ ಬೇಸಿಗೆಯನ್ನು ಎದುರಿಸಲು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಘೋಷಿಸಲಾಗುವ ಈ ಕ್ರಮಗಳನ್ನು ಈ ವರ್ಷ ಮಳೆಗಾಲದಲ್ಲಿಯೇ ಬಿಡಬ್ಲ್ಯೂಎಸ್ಎಸ್ಬಿ ಘೋಷಿಸಿದೆ. ಆದರೆ ಈ ಕ್ರಮಗಳು ಜಲಮಂಡಳಿಯಲ್ಲಿ ಹೆಚ್ಚುತ್ತಿರುವ ಕಳವಳಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
"ನೀರಿನ ಸರಿಯಾದ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಮೂರು ಪ್ರಮುಖ ನಿಮಯಗಳನ್ನು ಜಾರಿಗೊಳಿಸಲಾಗಿದೆ" ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷೆ ಡಾ. ಮಂಜುಳಾ ಹೇಳಿದ್ದಾರೆ.
ನಗರದಲ್ಲಿ ಪ್ರತಿ ಹನಿ ನೀರಿನ ಜವಾಬ್ದಾರಿಯುತ ಬಳಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ಕುಡಿಯುವ ನೀರಿನ ಅನಗತ್ಯ ಬಳಕೆಯನ್ನು ತಡೆಯಲು ಮತ್ತು ದೀರ್ಘಕಾಲೀನ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಏರೇಟರ್ ಅಳವಡಿಕೆ ಕಡ್ಡಾಯ
ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಕೈಗಾರಿಕೆಗಳು ಸೇರಿದಂತೆ ನೀರು ಬಳಸುವ ಎಲ್ಲಾ ಕಟ್ಟಡಗಳಲ್ಲಿ ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದ್ದು, ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಕುಡಿಯುವ ನೀರಿನ ದುರ್ಬಳಕೆಗೆ ನಿರ್ಬಂಧ
ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಕುಡಿಯುವ ನೀರಲ್ಲದ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇಂತಹ ಅಗತ್ಯಗಳಿಗೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
ಈಜುಕೊಳಗಳಿಗೆ ಕುಡಿಯುವ ನೀರು ಬಳಕೆ ನಿಷೇಧ
ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದನ್ನು ನಿಷೇಧಿಸಲಾಗಿದೆ. ಈಜುಕೊಳಗಳಿಗೆ ಅಗತ್ಯವಿರುವ ನೀರನ್ನು ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸುವಂತೆ ಸೂಚಿಸಲಾಗಿದೆ.