

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾರ್ಟಿ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಐವರ ಪೈಕಿ ಇಬ್ಬರು ಯುವಕರು ಸಂತ್ರಸ್ತ ಯುವತಿಗೆ ಮೊದಲೇ ಪರಿಚಯವಿದ್ದರು ಎನ್ನಲಾಗಿದೆ. ಆರೋಪಿಗಳಲ್ಲೊಬ್ಬನಾದ ಸೋಮಶೇಖರ್ ಎಂಬಾತ, "ಕಲಬುರ್ಗಿಯಿಂದ ನಮ್ಮ ಸ್ನೇಹಿತರು ಬಂದಿದ್ದಾರೆ" ಎಂದು ಹೇಳಿ ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡಿದ್ದಾನೆ.
ಮೂಲತಃ ದೇವನಹಳ್ಳಿ ಭಾಗದಲ್ಲಿ ವಾಸವಿದ್ದ ಸಂತ್ರಸ್ತ ಯುವತಿ, ಸ್ನೇಹಿತನ ಮಾತನ್ನು ನಂಬಿ ನಿನ್ನೆ ಸಂಜೆ ಆರೋಪಿಗಳು ಪಾರ್ಟಿ ಮಾಡುತ್ತಿದ್ದ ಜಾಗಕ್ಕೆ ತೆರಳಿದ್ದಾಳೆ. ಈ ವೇಳೆ ಆರೋಪಿಗಳಲ್ಲೊಬ್ಬನಾದ ಅಂಬರೀಶ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಯುವತಿ ಹೇಗೋ ಧೈರ್ಯ ಮಾಡಿ ಐವರ ಗುಂಪಿನಿಂದ ಬಿಡಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ. ತಕ್ಷಣವೇ ಆಕೆ ಜಾಗರೂಕತೆಯಿಂದ '112' ತುರ್ತು ಸಹಾಯವಾಣಿಗೆ ಕರೆ ಮಾಡಿ ತನಗಾದ ಅನ್ಯಾಯ ಮತ್ತು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅಲ್ಲದೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸೋಮಶೇಖರ್, ಅಂಬರೀಶ ಸೇರಿದಂತೆ ಐದೂ ಜನ ಆರೋಪಿಗಳನ್ನು ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮತ್ತೊಂದೆಡೆ, ಸಂತ್ರಸ್ತ ಯುವತಿಯನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.