

ಬೆಂಗಳೂರು ನಗರದ ಹುಳಿಮಾವು ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯಲ್ಲಿ ಭಾನುವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 38 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಐದು ಅಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಸುಮಾರು ಎರಡು ಗಂಟೆಗಳ ಕಾಲ ನಡೆದ ಮನವೊಲಿಕೆ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಹಿಳೆಯನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದರು.
ಮೂಲತಃ ಕೇರಳದವರಾದ ಮಹಿಳೆ ದೊಡ್ಡಕಮ್ಮನಹಳ್ಳಿಯ ಐದು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯ ಬಾಡಿಗೆ ಮನೆಯಲ್ಲಿ ಮಗನೊಂದಿಗೆ ವಾಸವಾಗಿದ್ದರು.
ಭಾನುವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ತಮ್ಮ ಮಗನನ್ನು ಕರೆದುಕೊಂಡು ಕಟ್ಟಡದ ಮೇಲ್ಛಾವಣಿಗೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಕಟ್ಟಡದ ಅಂಚಿನಲ್ಲಿ ಮಗನೊಂದಿಗೆ ನಿಂತಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಕೂಡಲೇ ನಮ್ಮ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಹುಳಿಮಾವು ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಸ್ಥಳಕ್ಕೆ ಆಗಮಿಸಿದ ಹುಳಿಮಾವು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ್ ಆರ್. ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಹಿಳೆಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ, ತಮ್ಮ ಹಲವು ವರ್ಷಗಳ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳಕ್ಕೆ ಬರಬೇಕು ಎಂದು ಮಹಿಳೆ ಪಟ್ಟು ಹಿಡಿದಿದ್ದರು.
ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಮಹಿಳೆಯೊಂದಿಗೆ ಸಮಾಲೋಚನೆ ನಡೆಸಿ, ಮಗುವಿನ ಸುರಕ್ಷತೆಯನ್ನು ಮನವರಿಕೆ ಮಾಡಿಕೊಟ್ಟರು. ಕೊನೆಗೆ ಸಮಾಧಾನಗೊಂಡ ಮಹಿಳೆ ಕಟ್ಟಡದ ಅಂಚಿನಿಂದ ಹಿಂದೆ ಸರಿದರು. ಬಳಿಕ ಅಧಿಕಾರಿಗಳು ಆಕೆಯನ್ನು ಹಾಗೂ ಮಗುವನ್ನು ಸುರಕ್ಷಿತವಾಗಿ ಕೆಳಗೆ ಕರೆಕಂದರು.
ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ತನ್ನನ್ನು ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನೀಡಿದ ದೂರಿನ ಆಧಾರದ ಮೇಲೆ ಹುಳಿಮಾವು ಪೊಲೀಸರು ಆ ವ್ಯಕ್ತಿಯ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತರುವಿಕೆ ಸೇರಿದಂತೆ ವಿವಿಧ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ನಿಖರ ಕಾರಣವನ್ನು ಮಹಿಳೆ ಪೊಲೀಸರಿಗೆ ತಿಳಿಸಿಲ್ಲ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಅವರು ಈ ಹಿಂದೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳೆ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಮಾನಸಿಕ ಸಮಾಲೋಚನೆ (ಕೌನ್ಸೆಲಿಂಗ್) ವ್ಯವಸ್ಥೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಘಟನೆ ಕೆಲಕಾಲ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಯ ಪ್ರಯತ್ನದಿಂದ ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ.