

ಬೆಳಗಾವಿ: ಭಾರೀ ಮಳೆಯಿಂದಾಗಿ ನೆರೆಯ ಮಹಾರಾಷ್ಟ್ರದ ಜನಪ್ರಿಯ ಅಂಬೋಲಿ ಜಲಪಾತ ಸಮೀಪ ಭೂಕುಸಿತ ಸಂಭವಿಸಿ, ಬೆಳಗಾವಿ–ಸಿಂಧುದುರ್ಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾದ ಪ್ರಸಂಗ ಕಳೆದ ರಾತ್ರಿ ನಡೆಯಿತು.
ಮಹಾರಾಷ್ಟ್ರದ ಸಾವಂತವಾಡಿ ತಾಲ್ಲೂಕಿನ ಅಂಬೋಲಿ ಜಲಪಾತದ ಸಮೀಪ ನಿನ್ನೆ ಮಂಗಳವಾರ ರಾತ್ರಿ ಭೂಕುಸಿತ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಿಂದ ಹಲವಾರು ಬೃಹತ್ ಬಂಡೆಗಳು ಉರುಳಿ ರಸ್ತೆಗೆ ಬಿದ್ದಿದ್ದು, ಕನಿಷ್ಠ ನಾಲ್ಕು ಬೃಹತ್ ಬಂಡೆಗಳ ಕುಸಿತದಿಂದ ರಸ್ತೆ ಸಂಪೂರ್ಣ ತಡೆದವು. ಪರಿಣಾಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡವು.
ರಾತ್ರಿ ವೇಳೆ ಸಂಚಾರ ದಟ್ಟಣೆ ಕಡಿಮೆಯಾಗಿದ್ದರಿಂದ, ಯಾವುದೇ ಪ್ರಾಣಹಾನಿ ಅಥವಾ ವಾಹನಗಳಿಗೆ ಹಾನಿಯಾಗಿಲ್ಲ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಚಂದಗಡದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆ ತೆರವು ಕಾರ್ಯಾಚರಣೆ ಆರಂಭಿಸಿದರು. ಸಿಂಧುದುರ್ಗ ಜಿಲ್ಲಾ ಉಸ್ತುವಾರಿ ಸಚಿವ ನಿತೇಶ್ ರಾಣೆ ಅವರ ಸೂಚನೆಯಂತೆ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬೃಹತ್ ಬಂಡೆಗಳನ್ನು ತೆರವುಗೊಳಿಸಿ ಸಂಪರ್ಕವನ್ನು ಪುನಃ ಸ್ಥಾಪಿಸಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಯಿತು.
ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಹಾರಾಷ್ಟ್ರ ಪೊಲೀಸರು ಕಟ್ಟುನಿಟ್ಟಿನ ನಿಯಂತ್ರಣದೊಂದಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಿ ರಸ್ತೆಯನ್ನು ಭಾಗಶಃ ತೆರೆದರು.
ನಿರಂತರ ಮಳೆಯಿಂದಾಗಿ ಘಾಟ್ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸಾವಂತವಾಡಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿರುವ ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಸುಮಾರು 7:30ಕ್ಕೆ ಅಂಬೋಲಿ ಘಾಟ್‌ನಲ್ಲಿ ಕಿ.ಮೀ. 37/700ರ ಸಮೀಪ ಭೂಕುಸಿತ ಸಂಭವಿಸಿ, ಕೆಲವು ಬೃಹತ್ ಬಂಡೆಗಳು ರಸ್ತೆಯ ಮೇಲೆ ಉರುಳಿಬಿದ್ದಿವೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸಾವಂತವಾಡಿಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿ ರಸ್ತೆ ತೆರವು ಕಾರ್ಯಾಚರಣೆ ನಡೆಸಿದೆ. ರಸ್ತೆಯ ಮೇಲಿದ್ದ ಬಂಡೆಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಅಂಬೋಲಿ ಘಾಟ್‌ನಲ್ಲಿ ವಾಹನ ಸಂಚಾರ ಇದೀಗ ಸುಗಮವಾಗಿ ಸಾಗುತ್ತಿದೆ.
ಅಂಬೋಲಿ ಜಲಪಾತವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಪ್ರವಾಸಿಗರ ಪಾಲಿನ ಅತ್ಯಂತ ಜನಪ್ರಿಯ ಮಳೆಗಾಲ ಪ್ರವಾಸಿ ತಾಣವಾಗಿದೆ. ಕರ್ನಾಟಕದ ಹಲವು ಜಲಪಾತಗಳಲ್ಲಿ ಸುರಕ್ಷತಾ ಕಾರಣಗಳಿಂದ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ, ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಪರ್ಯಾಯ ತಾಣವಾಗಿ ಅಂಬೋಲಿಯನ್ನು ಆಯ್ಕೆ ಮಾಡುತ್ತಿದ್ದಾರೆ.
ಹವಾಮಾನ ಪರಿಸ್ಥಿತಿಯನ್ನು ಗಮನಿಸಿ ಹಾಗೂ ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿದ ನಂತರವೇ ಈ ಪ್ರದೇಶಕ್ಕೆ ಪ್ರಯಾಣಿಸುವಂತೆ ಅಧಿಕಾರಿಗಳು ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.