ರಾಜ್ಯದಲ್ಲಿ ಮುಂಗಾರು ಅಬ್ಬರ: ಒಂದೇ ದಿನ ಮೂರು ಜಿಲ್ಲೆಗಳಲ್ಲಿ ಭಾರೀ ಅವಾಂತರ, ಜನಜೀವನ ಅಸ್ತವ್ಯಸ್ತ

ಘಟನೆ ನಡೆದ ವೇಳೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್ ಹಾಗೂ ಹಲವು ಕಾರುಗಳು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
File photo
ಸಂಗ್ರಹ ಚಿತ್ರ
Updated on

ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಉತ್ತರ ಕರ್ನಾಟಕದಿಂದ ಕರಾವಳಿವರೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಳಗಾವಿ, ಹಾಸನ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಭೂಕುಸಿತ, ಕಟ್ಟಡ ಹಾನಿ ಸೇರಿದಂತೆ ಹಲವು ಅವಘಡಗಳು ಸಂಭವಿಸಿವೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಂಗಳವಾರ ಅಂಬೋಲಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಬೃಹತ್ ಬಂಡೆಗಳು ಬೆಳಗಾವಿ-ವೆಂಗುರ್ಲಾ ರಾಜ್ಯ ಹೆದ್ದಾರಿಗೆ ಉರುಳಿಬಿದ್ದಿದ್ದು, ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಟನೆ ನಡೆದ ವೇಳೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್ ಹಾಗೂ ಹಲವು ಕಾರುಗಳು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಹಾಸನ ಜಿಲ್ಲೆಯ ಸಮೀಪದ ಬಿಟ್ಟಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ಒಂದು ಭಾಗ ಭಾರೀ ಮಳೆಯಿಂದ ಬುಧವಾರ ಕುಸಿದಿದೆ.

ಶಾಲೆ ಆರಂಭವಾಗುವ ಮುನ್ನವೇ ಈ ಘಟನೆ ನಡೆದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ. ಮರದ ದಿಮ್ಮಿಗಳು ಹಾಗೂ ಮೇಲ್ಛಾವಣಿಯ ಹೆಂಚುಗಳು ತರಗತಿ ಕೊಠಡಿಯೊಳಗೆ ಬಿದ್ದು, ಮೇಜು-ಬೆಂಚುಗಳಿಗೆ ಹಾನಿಯಾಗಿದೆ.

File photo
ಮಂಗಳೂರು: ಭಾರೀ ಮಳೆ, ಮನೆ ಗೋಡೆ ಕುಸಿತ, ಮೂವರ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಕಿನ್ನಿಪಡವ ಎಸ್‌ಸಿ/ಎಸ್‌ಟಿ ಕಾಲೋನಿಯಲ್ಲೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಾಲ್ಕು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮನೆಗಳು ಯಾವಾಗ ಬೇಕಾದರೂ ಕುಸಿಯುವ ಆತಂಕದಲ್ಲಿ ಕುಟುಂಬಗಳು ದಿನ ಕಳೆಯುವಂತಾಗಿದೆ.

ಈ ನಡುವೆ ಹವಾಮಾನ ಇಲಾಖೆ ರಾಜ್ಯದ ಹಲವೆಡೆ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದು, ಗುಡ್ಡಗಾಡು ಹಾಗೂ ಭೂಕುಸಿತ ಸಂಭವಿಸುವ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com