

ಮೈಸೂರು: ಸೋಮವಾರ ಬೆಳಗಿನ ಜಾವ ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಫ್ಲೈಬಸ್‌ನ ಚಾಲಕ ಮತ್ತು ಕಂಡಕ್ಟರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪದ ನಂತರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ.
ಇತ್ತೀಚೆಗೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬವೊಂದರ ಮೇಲೆ ಹಲ್ಲೆ ನಡೆದಿತ್ತು. ಈ ವೇಳೆ ಮೂವರ ಬಂಧನವಾದ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಫ್ಲೈಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆರೋಪಿ ವರುಣ್ (24) ಮತ್ತು 17 ವರ್ಷದ ಅಪ್ರಾಪ್ತ ಬಾಲಕನನ್ನು ಮಂಡ್ಯ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರಿನ ನಡುವೆ ಕಾರ್ಯನಿರ್ವಹಿಸುತ್ತಿದ್ದ ಫ್ಲೈಬಸ್ ಮಂಡ್ಯದಲ್ಲಿ ಸ್ವಲ್ಪ ಸಮಯ ನಿಂತು ಪ್ರಯಾಣಿಕರನ್ನು ಇಳಿಯಲು ಅವಕಾಶ ನೀಡಿತ್ತು. ಮಂಡ್ಯದ ಇಂಡುವಾಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯ ಅಂಡರ್ ಪಾಸ್ ಬಳಿ ಮಧ್ಯರಾತ್ರಿ 2.30 ರ ವೇಳೆ ಘಟನೆ ನಡೆದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ (KSRTC) ಮುಂದೆ ಬೈಕ್‌ನಲ್ಲಿ ಬಂದ ಇಬ್ಬರು ಸವಾರರು ಬಸ್ ಚಾಲಕ ಮತ್ತು ನಿರ್ವಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕ, ಕಂಡಕ್ಟರ್ ಗೆ ಆಗಿರುವ ಗಾಯದ ವಿಡಿಯೋ ನೋಡಿದ ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಹಲ್ಲೆ ಮಾಡಿದವರನ್ನು ಬಂಧಿಸಿದ್ದಾರೆ. ಒನ್ ವೇ ಮಾರ್ಗದಲ್ಲಿ ಬಸ್ ಸಂಚಾರ ಮಾಡಿದ್ದನ್ನು ಈ ಬೈಕ್ ಸವಾರರು ಪ್ರಶ್ನಿಸಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆಂದು ಆರೋಪಿಗಳು ದೂರಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಬಂಧಿತ ವ್ಯಕ್ತಿಗಳು ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಲ್ಲಿ ಚಾಲಕ ವಿನೋದ್ ಮತ್ತು ಕಂಡಕ್ಟರ್ ಈರಣ್ಣ ಗಾಯಗೊಂಡಿದ್ದಾರೆ.