GCC, ಕಾರ್ಪೊರೇಟ್ ಸಂಸ್ಥೆಗಳ ಬಳಸಿದ ಲ್ಯಾಪ್‌ಟಾಪ್‌- ಐಟಿ ಸಾಧನ ಗ್ರಾಮೀಣ ಶಾಲೆಗಳಿಗೆ ದಾನ: ರಾಜ್ಯ ಸರ್ಕಾರ ಚಿಂತನೆ

ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳು (GCC) ಹಾಗೂ ತಂತ್ರಜ್ಞಾನ ಕಂಪನಿಗಳಿಂದ ಸಂಗ್ರಹಿಸಲಾದ ಉಪಯುಕ್ತ ಐಟಿ ಸಾಧನಗಳನ್ನು ಮರುಬಳಕೆಗೆ ತಂದು ಡಿಜಿಟಲ್ ಪ್ರವೇಶವನ್ನು ಹೆಚ್ಚಿಸುವುದರ ಜೊತೆಗೆ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ಗ್ರಾಮೀಣ ಶಾಲೆಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಬಳಸಿದ ಲ್ಯಾಪ್‌ಟಾಪ್‌ ಮತ್ತು ಇತರೆ ಮಾಹಿತಿ ತಂತ್ರಜ್ಞಾನ (IT) ಉಪಕರಣಗಳನ್ನು ವಿತರಿಸುವ ರಾಜ್ಯವ್ಯಾಪಿ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಆರಂಭಿಸಲು ಯೋಜನೆ ರೂಪಿಸಿದೆ.

ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳು (GCC) ಹಾಗೂ ತಂತ್ರಜ್ಞಾನ ಕಂಪನಿಗಳಿಂದ ಸಂಗ್ರಹಿಸಲಾದ ಉಪಯುಕ್ತ ಐಟಿ ಸಾಧನಗಳನ್ನು ಮರುಬಳಕೆಗೆ ತಂದು ಡಿಜಿಟಲ್ ಪ್ರವೇಶವನ್ನು ಹೆಚ್ಚಿಸುವುದರ ಜೊತೆಗೆ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.

ಮೊನ್ನೆ ನಡೆದ 'ಕ್ಯಾಟಲಿಸ್ಟ್ ಕನೆಕ್ಟ್' (Katalyst Connect) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 225ಕ್ಕೂ ಹೆಚ್ಚು GCC ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಂವಾದದಲ್ಲಿ ಈ ಪ್ರಸ್ತಾವನೆ ಹೊರಹೊಮ್ಮಿತು. ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಶೇ.60ರಷ್ಟು ಉದ್ಯಮ ಪ್ರತಿನಿಧಿಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದರು. ಐಟಿ/ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಹ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

ಈಗ ಸರ್ಕಾರವು ಉದ್ಯಮಗಳ ವ್ಯಾಪಕ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಒಂದು ನೀತಿ ಚೌಕಟ್ಟನ್ನು ರೂಪಿಸಲಿದೆ. ನಿಯಂತ್ರಣ ಸಂಬಂಧಿತ ಅಡೆತಡೆಗಳನ್ನು ನಿವಾರಿಸಿ, ಉದ್ಯಮಗಳು ದಾನವಾಗಿ ನೀಡುವ ಬಳಕೆಗೆ ಯೋಗ್ಯವಾದ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಹಾಗೂ ಇತರೆ ಐಟಿ ಸಾಧನಗಳನ್ನು ನವೀಕರಿಸಿ (Refurbish) ಸರ್ಕಾರಿ ಶಾಲೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಇತರ ಸಾರ್ವಜನಿಕ ಸಂಸ್ಥೆಗಳಿಗೆ ಪೂರೈಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ.

ಈ ಪ್ರಸ್ತಾವನೆ, ಫಿಡೆಲಿಟಿ (Fidelity) ಸಂಸ್ಥೆ ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ಕೈಗೊಂಡ ಪ್ರಾಯೋಗಿಕ ಯೋಜನೆಯ ಯಶಸ್ಸಿನ ಆಧಾರದ ಮೇಲೆ ರೂಪಿಸಲಾಗಿದೆ. ಈ ಯೋಜನೆಯಡಿ ಮೂರರಿಂದ ನಾಲ್ಕು ವರ್ಷ ಬಳಕೆಯಾದ 1,000 ಕಾರ್ಪೊರೇಟ್ ಲ್ಯಾಪ್‌ಟಾಪ್‌ಗಳನ್ನು ಗ್ರಾಮೀಣ ಶಾಲೆಗಳಿಗೆ ಮರುಹಂಚಿಕೆ ಮಾಡಲಾಗಿತ್ತು.

ಸಭೆಯಲ್ಲಿ ಫಿಡೆಲಿಟಿ ಪ್ರತಿನಿಧಿಗಳು, ದೊಡ್ಡ ಕಂಪನಿಗಳು ಪ್ರತಿ ಕೆಲವು ವರ್ಷಗಳಿಗೊಮ್ಮೆ ತಮ್ಮ ಉದ್ಯೋಗಿಗಳಿಗೆ ಹೊಸ ಲ್ಯಾಪ್‌ಟಾಪ್‌ಗಳನ್ನು ನೀಡುವುದರಿಂದ ಹಳೆಯ ಸಾಧನಗಳನ್ನು ಬದಲಾಯಿಸುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಇನ್ನೂ ಸಂಪೂರ್ಣ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದು, ತ್ಯಜಿಸುವ ಬದಲು ಉತ್ಪಾದಕ ಉದ್ದೇಶಗಳಿಗೆ ಬಳಸಬಹುದು ಎಂದು ತಿಳಿಸಿದರು.

ಈ ಸಲಹೆಯನ್ನು ಸ್ವಾಗತಿಸಿದ ಸಚಿವ ಪ್ರಿಯಾಂಕ್ ಖರ್ಗೆ, ವಿಶೇಷವಾಗಿ ಗ್ರಾಮೀಣ ಶಾಲೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಕಂಪ್ಯೂಟರ್‌ಗಳ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು. ಹೆಚ್ಚಿನ ಕಂಪನಿಗಳು ಮರುಬಳಕೆಗೆ ಯೋಗ್ಯವಾದ ಐಟಿ ಉಪಕರಣಗಳನ್ನು ನೀಡಲು ಉತ್ತೇಜನ ಸಿಗುವಂತೆ, ಉದ್ಯಮ ವಲಯದೊಂದಿಗೆ ಕೈಜೋಡಿಸುವುದರ ಜೊತೆಗೆ ಕೇಂದ್ರ ಸರ್ಕಾರದೊಂದಿಗೂ ಚರ್ಚಿಸಿ ಸರಳ ಕಾರ್ಯವಿಧಾನ ರೂಪಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

Representational image
20 ಲಕ್ಷ ಗಿಡ ನೆಟ್ಟರೆ, 9 ಲಕ್ಷ ಗಿಡಗಳಷ್ಟೇ ಕಾಣಿಸ್ತಾ ಇದೆ, ಬಾಕಿ ಎಲ್ಲಿ?: ಕೃಷ್ಣ ಬೈರೇಗೌಡ

ತಂತ್ರಜ್ಞಾನದ ಬಳಕೆಯಿಂದ ಗ್ರಾಮೀಣ ಕರ್ನಾಟಕದಲ್ಲಿ ಆಡಳಿತ ವ್ಯವಸ್ಥೆ ಈಗಾಗಲೇ ಉತ್ತಮಗೊಂಡಿದೆ. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಿರುವುದರಿಂದ ಸ್ಥಳೀಯ ಆಡಳಿತ ಬಲಗೊಂಡಿದ್ದು, ಗ್ರಾಮೀಣ ಪ್ರದೇಶಗಳ ತೆರಿಗೆ ಸಂಗ್ರಹವು ಸುಮಾರು 450 ಕೋಟಿಯಿಂದ 1,500 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಆದಾಯ ಗ್ರಾಮ ಪಂಚಾಯಿತಿಗಳಿಗೆ ಮರಳುವುದರಿಂದ ಸ್ಥಳೀಯ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಅವರು ಹೇಳಿದರು.

ಉದ್ಯಮ ವಲಯ ಸಹಕರಿಸಲು ಸಿದ್ಧವಿದ್ದರೆ, ಕರ್ನಾಟಕ ಸರ್ಕಾರವೂ ನಿಮ್ಮೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ತಂತ್ರಜ್ಞಾನ ಗ್ರಾಮೀಣ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ತಲುಪುವುದರ ಜೊತೆಗೆ ಇ-ತ್ಯಾಜ್ಯ ಕಡಿಮೆಯಾಗಿ ವಲಯ ಆರ್ಥಿಕತೆಗೆ (Circular Economy) ಕೊಡುಗೆ ನೀಡುವಂತಹ ಈ ಕಾರ್ಯಕ್ರಮವನ್ನು ಪ್ರತಿವರ್ಷದ ನಿಯಮಿತ ಉಪಕ್ರಮವನ್ನಾಗಿ ರೂಪಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಸಿಸಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಈ ಸಭೆಯಲ್ಲಿ ಕೈಗಾರಿಕೆ-ನಿರ್ದಿಷ್ಟ ಕಾರ್ಯಪಡೆಗಳ ರಚನೆ, ಬೆಂಗಳೂರಿನ ಹೊರಗೂ GCCಗಳ ವಿಸ್ತರಣೆ ಹಾಗೂ ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಸಹಭಾಗಿತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಸುಮಾರು 1.75 ಲಕ್ಷ ಉದ್ಯೋಗಿಗಳನ್ನು ಪ್ರತಿನಿಧಿಸುವ ಕಂಪನಿಗಳು ಭಾಗವಹಿಸಿದ್ದವು. ಈ ಸಂಸ್ಥೆಗಳ ವಾರ್ಷಿಕ ವೇತನ ವೆಚ್ಚ ಅಂದಾಜು 20,000 ಕೋಟಿ ರೂಪಾಯಿ ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com