ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ತುರ್ತು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ

ರಾಜ್ಯ ಸರ್ಕಾರದ ಈ ಆದೇಶವು ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದಲ್ಲದೆ, ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಲಿದೆ ಎಂದು ಆರೋಪಿಸಿರುವ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
Shobha Karandlaje
ಶೋಭಾ ಕರಂದ್ಲಾಜೆ
Updated on

ಬೆಂಗಳೂರು: ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC) – 2026’ ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಈ ಆದೇಶವು ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದಲ್ಲದೆ, ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಲಿದೆ ಎಂದು ಆರೋಪಿಸಿರುವ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೂ ಒಂದೇ ಪೌರತ್ವವನ್ನು (ಏಕ ಪೌರತ್ವ) ಕಲ್ಪಿಸಿದೆ. ಆದರೆ ಕರ್ನಾಟಕ ಸರ್ಕಾರವು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ‘ಶಾಶ್ವತ ನಿವಾಸಿಗಳು’ ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಹೊರಟಿರುವುದು ಕಾನೂನುಬಾಹಿರವಾಗಿದೆ. ಇದು ಸಂವಿಧಾನದ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ 14ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಅಮಿತ್ ಶಾಗೆ ಬರೆದಿರುವ ಪತ್ರದಲ್ಲಿ ಶೋಭಾ ಕರಂದ್ಲಾಜೆ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇವಲ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಸ್ಥಳೀಯ ದಾಖಲೆಗಳ ಆಧಾರದ ಮೇಲೆ ಈ ಪ್ರಮಾಣಪತ್ರವನ್ನು ನೀಡಲು ಉದ್ದೇಶಿಸಲಾಗಿದೆ. ಇದರಲ್ಲಿ ಭಾರತೀಯ ಪೌರತ್ವವನ್ನು ಕೇಂದ್ರ ಏಜೆನ್ಸಿಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ಯಾವುದೇ ದೃಢವಾದ ವ್ಯವಸ್ಥೆ ಇಲ್ಲ.

Shobha Karandlaje
Watch | ಪ್ರಿಯಾಂಕ್ ಖರ್ಗೆ 'ಬಲಿತ' ದಲಿತ! ಶೋಭಾ ಕರಂದ್ಲಾಜೆ ವಾಗ್ದಾಳಿ

ಇದರಿಂದಾಗಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ವಿದೇಶಿ ಪ್ರಜೆಗಳು ಅಥವಾ ಅಕ್ರಮ ವಲಸಿಗರು ಸುಲಭವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ‘ಶಾಶ್ವತ ವಸತಿ ಪ್ರಮಾಣಪತ್ರ’ ಪಡೆಯುವ ಅಪಾಯವಿದೆ. ಒಮ್ಮೆ ಈ ಪ್ರಮಾಣಪತ್ರ ಕೈಸೇರಿದರೆ, ಅದನ್ನು ಬಳಸಿ ಅವರು ಸರ್ಕಾರದ ಸವಲತ್ತುಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಇದು ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡುತ್ತದೆ ಎಂದು ಶೋಭಾ ಕರಂದ್ಲಾಜೆ ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಅಧಿಸೂಚನೆ ಅತ್ಯಂತ ಆತಂಕಕಾರಿಯಾಗಿದೆ. ಇದರಲ್ಲಿ ಸೂಚಿಸಲಾದ ಅರ್ಹತಾ ಮಾನದಂಡಗಳು ಪ್ರಮುಖವಾಗಿ ಕಂದಾಯ ಅಧಿಕಾರಿಗಳ ಸ್ಥಳೀಯ ಪರಿಶೀಲನೆ ಮತ್ತು ನಿವಾಸದ ಆಧಾರದ ಮೇಲಿರುವಂತೆ ಕಂಡುಬರುತ್ತವೆ.

ಆದಾಗ್ಯೂ, ಸಮರ್ಥ ಕೇಂದ್ರ ಅಧಿಕಾರಾವಳಿಗಳ ಮೂಲಕ ಭಾರತೀಯ ಪೌರತ್ವದ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಯಾವುದೇ ನಿಬಂಧನೆ ಅಥವಾ ಅಕ್ರಮ ವಲಸಿಗರು ಮತ್ತು ವಿದೇಶಿ ಪ್ರಜೆಗಳನ್ನು ಹೊರಗಿಡಲು ಯಾವುದೇ ಬಲವಾದ ಕಾರ್ಯವಿಧಾನ ಇರುವುದಿಲ್ಲ.

ಇದರ ಪರಿಣಾಮವಾಗಿ, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಥವಾ ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವ್ಯಕ್ತಿಗಳು, ಸ್ಥಳೀಯ ದಾಖಲೆಗಳನ್ನು ಪ್ರಸ್ತುತಪಡಿಸುವ ಮೂಲಕ ಅಥವಾ ವಂಚನೆಯ ಮಾರ್ಗಗಳ ಮೂಲಕ ಖಾಯಂ ನಿವಾಸಿ ಪ್ರಮಾಣಪತ್ರವನ್ನು ಪಡೆಯಬಹುದು.

Shobha Karandlaje
SIR: ವಿಶೇಷ ತೀವ್ರ ಪರಿಷ್ಕರಣೆ, 22 ಲಕ್ಷ ಮತದಾರರ ಹೆಸರು ಡಿಲೀಟ್! ಬಾಂಗ್ಲಾ, ಮ್ಯಾನ್ಮಾರ್ ಪ್ರಜೆಗಳು ಪತ್ತೆ!

ಇಂತಹ ಪ್ರಮಾಣಪತ್ರವನ್ನು ಒಮ್ಮೆ ನೀಡಿದ ನಂತರ, ಇದನ್ನು ವಿವಿಧ ರಾಜ್ಯ ಸೌಲಭ್ಯಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಹಕ್ಕುಗಳನ್ನು ಪಡೆಯಲು ಬಳಸಿಕೊಳ್ಳಬಹುದು. ಇದು ಅಕ್ರಮ ವಾಸ್ತವ್ಯಕ್ಕೆ ಕಾನೂನುಬದ್ಧತೆಯನ್ನು ಒದಗಿಸುವಂತಾಗುತ್ತದೆ ಮತ್ತು ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ ಎಂದಿದ್ದಾರೆ.

ಪೌರತ್ವ, ವಿದೇಶಿಯರು, ವಲಸೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಂವಿಧಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ಖಾಯಂ ನಿವಾಸಿ ಸ್ಥಾನಮಾನವನ್ನು ನೀಡುವ ರಾಜ್ಯ ಮಟ್ಟದ ತೀರ್ಮಾನ ಸಾಂವಿಧಾನಿಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ದೇಶದಾದ್ಯಂತ ಪೌರತ್ವ ಮತ್ತು ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ.

ಸರಿಯಾದ ಪೌರತ್ವ ಪರಿಶೀಲನೆಯಿಲ್ಲದೆ ಇಂತಹ ಪ್ರಮಾಣಪತ್ರಗಳನ್ನು ನೀಡುವುದರಿಂದ ಅಕ್ರಮ ವಲಸಿಗರು ರಾಜ್ಯದ ಆಡಳಿತಾತ್ಮಕ ಚೌಕಟ್ಟಿನಲ್ಲಿ ವಿಲೀನಗೊಳ್ಳಲು ಅನುಕೂಲವಾಗಬಹುದು. ಇದು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಸಂಚಕಾರ ತರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026'ರ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು. ಅಲ್ಲಿವರೆಗೆ ಅಧಿಸೂಚನೆಯ ಅನುಷ್ಠಾನವನ್ನು ತಡೆಹಿಡಿಯಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಯಾವ ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರದ ಅಡಿಯಲ್ಲಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಪಡೆಯಬೇಕು. ಕೇಂದ್ರ ಏಜೆನ್ಸಿಗಳ ಮೂಲಕ ಭಾರತೀಯ ಪೌರತ್ವದ ಸಮಗ್ರ ಪರಿಶೀಲನೆಯಿಲ್ಲದೆ ಯಾವುದೇ ಖಾಯಂ ನಿವಾಸಿ ಪ್ರಮಾಣಪತ್ರವನ್ನು ನೀಡದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com