'ಅಪಾರ್ಟ್ ಮೆಂಟ್ ಹಸ್ತಾಂತರ ವೇಳೆ ಅದರ ಸಂಪೂರ್ಣ ಹಕ್ಕು ಮಾಲೀಕರಿಗೆ ಸಿಗಬೇಕು; ಮಾಲೀಕತ್ವ ರಕ್ಷಣೆಗೆ ಮಸೂದೆ ಜಾರಿ': CM ಡಿ.ಕೆ ಶಿವಕುಮಾರ್; Video

ನಾವು ಈ ವಿಚಾರದಲ್ಲಿ ದೃಢವಾಗಿದ್ದೇವೆ. ಆಸ್ತಿ ನಿಮಗೆ ಹಸ್ತಾಂತರವಾಗುವಾಗ ಅದರ ಮೇಲೆ ಸಂಪೂರ್ಣ ಹಕ್ಕು ನಿಮ್ಮದಾಗಿರಬೇಕು. ನೀವು ಆ ಆಸ್ತಿಯ ನಿಜವಾದ ಮಾಲೀಕರು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ಕರ್ನಾಟಕ ಅಪಾರ್ಟ್‌ಮೆಂಟ್ (Ownership and Management) ಮಸೂದೆ-2026 ಕುರಿತು ಇಂದು ಬುಧವಾರ ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ನಿವಾಸಿಗಳ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಲ್ಲ ಪಾಲುದಾರರ ಅಭಿಪ್ರಾಯ ಪಡೆದು ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳನ್ನು ರಕ್ಷಿಸುವ ಸಮಗ್ರ ಕಾನೂನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸುವ ಮೊದಲು ಅಪಾರ್ಟ್‌ಮೆಂಟ್ ಸಂಘಗಳು, ಬಿಲ್ಡರ್‌ಗಳು, ಕಾನೂನು ತಜ್ಞರು ಹಾಗೂ ರಾಜಕೀಯ ಪಕ್ಷಗಳ ಸಲಹೆಗಳನ್ನು ಪಡೆದು ಅಂತಿಮ ರೂಪ ನೀಡಲಾಗುವುದು ಎಂದು ಅವರು ತಿಳಿಸಿದರು.

"ನಾವು ಈ ವಿಚಾರದಲ್ಲಿ ದೃಢವಾಗಿದ್ದೇವೆ. ಆಸ್ತಿ ನಿಮಗೆ ಹಸ್ತಾಂತರವಾಗುವಾಗ ಅದರ ಮೇಲೆ ಸಂಪೂರ್ಣ ಹಕ್ಕು ನಿಮ್ಮದಾಗಿರಬೇಕು. ನೀವು ಆ ಆಸ್ತಿಯ ನಿಜವಾದ ಮಾಲೀಕರು," ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಸರ್ಕಾರ ಮಸೂದೆಯನ್ನು ಆತುರದಲ್ಲಿ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಧಾನಸಭೆ ಅಧಿವೇಶನಕ್ಕೂ ಮುನ್ನ ಸಮಯವಿದೆ. ಮೊದಲು ಮಸೂದೆ ಸಚಿವ ಸಂಪುಟದ ಮುಂದೆ ಬರಲಿದೆ, ನಂತರ ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆ. ಯಾವುದೇ ಮಸೂದೆಯನ್ನು ಬಲವಂತವಾಗಿ ಅಂಗೀಕರಿಸಲು ನಾನು ಬಯಸುವುದಿಲ್ಲ. ಎಲ್ಲರೊಂದಿಗೆ ಚರ್ಚಿಸಿ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳುತ್ತೇವೆ ಎಂದರು.

ಜೀವನಪೂರ್ತಿ ದುಡಿದು ಮನೆ ಖರೀದಿಸಿರುವ ಅಪಾರ್ಟ್‌ಮೆಂಟ್ ಮಾಲೀಕರ ಆಸ್ತಿಗೆ ಸಂಪೂರ್ಣ ಕಾನೂನು ರಕ್ಷಣೆ ದೊರೆಯಬೇಕು ಎಂದು ಒತ್ತಿ ಹೇಳಿದ ಅವರು, ನಿಮ್ಮ ಬೆವರಿನ ದುಡಿಮೆಯಿಂದ ಖರೀದಿಸಿದ ಆಸ್ತಿಗೆ ಪೂರ್ಣ ಕಾನೂನು ರಕ್ಷಣೆ ಇರಬೇಕು. ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.

ಮೂಲ ಆಸ್ತಿ ದಾಖಲೆಗಳನ್ನು ಮನೆ ಖರೀದಿದಾರರಿಗೆ ಹಸ್ತಾಂತರಿಸದ ಬಿಲ್ಡರ್‌ಗಳನ್ನು ಚರ್ಚೆಗೆ ಕರೆಯಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ, ಬ್ಯಾಂಕ್‌ಗಳಲ್ಲಿ ಅಡಮಾನ ಇಟ್ಟಿರುವ ನೆಪದಲ್ಲಿ ದಾಖಲೆಗಳನ್ನು ತಡೆಹಿಡಿಯುವ ಕ್ರಮವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.

'ಭೂಮಿ ಗ್ಯಾರಂಟಿ' ಜಾರಿ

ಸರ್ಕಾರದ ಆರನೇ ಗ್ಯಾರಂಟಿ ಯೋಜನೆ ಎಂದು ವಿವರಿಸಿದ 'ಭೂಮಿ ಗ್ಯಾರಂಟಿ' ಮೂಲಕ ಲಂಚವಿಲ್ಲದೆ ಆಸ್ತಿ ಮಾಲೀಕರಿಗೆ ಖಾತಾ ಪ್ರಮಾಣಪತ್ರ ನೀಡಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಈಗಾಗಲೇ ಸುಮಾರು 40 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 26 ಲಕ್ಷ ಖಾತಾಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಪಾರ್ಟ್‌ಮೆಂಟ್ ಸಂಘಗಳು ತಮ್ಮ ಕಟ್ಟಡಗಳಲ್ಲಿರುವ ಒಳಚರಂಡಿ ನೀರು ಸಂಸ್ಕರಣಾ ಘಟಕಗಳನ್ನು (STP) ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ನಗರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಕುಡಿಯುವ ನೀರು ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನಿರಂತರವಾಗಿ ಕೆಲಸ ಮಾಡಲಿದೆ ಎಂದರು.

ಬೆಂಗಳೂರಿನ ಜನಸಂಖ್ಯೆ ಹಿಂದೆ ಸುಮಾರು 70 ಲಕ್ಷವಿದ್ದರೆ ಈಗ ಸುಮಾರು 1.4 ಕೋಟಿಗೆ ತಲುಪಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸುಮಾರು 1.35 ಕೋಟಿ ವಾಹನಗಳು ಸಂಚರಿಸುತ್ತಿದ್ದು, ಮೂಲಸೌಕರ್ಯ ವಿಸ್ತರಣೆ ಹಂತ ಹಂತವಾಗಿ ನಡೆಯಲಿದೆ ಎಂದು ವಿವರಿಸಿದರು.

ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಮೂಲಕ ಸುಮಾರು 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆ ಅಭಿವೃದ್ಧಿ ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಸುಮಾರು 4,000 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಸಣ್ಣ ಲೇಔಟ್‌ಗಳ ಬದಲು ಯೋಜಿತ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಉತ್ತೇಜನ ನೀಡಲಿದೆ ಎಂದು ಪುನರುಚ್ಚರಿಸಿದ ಅವರು, ಮುಂಬೈಯಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮನೆಗಳು ಇನ್ನೂ ಕೈಗೆಟುಕುವ ದರದಲ್ಲಿ ಲಭ್ಯವಿರುವುದರಿಂದ ನಗರವು ಆಕರ್ಷಕ ತಾಣವಾಗಿ ಉಳಿದಿದೆ ಎಂದರು.

ಬೆಂಗಳೂರು ನಿಮ್ಮ ಹೃದಯವಾಗಬೇಕು, ಭಾರತದ ಹೃದಯ ನಗರವಾಗಬೇಕು ಎಂಬುದು ನಮ್ಮ ಕನಸು," ಎಂದು ಮುಖ್ಯಮಂತ್ರಿ ಹೇಳಿದರು.

ಡಿ.ಕೆ. ಶಿವಕುಮಾರ್
ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ತುರ್ತು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ; Video

ಸಾರ್ವಜನಿಕರಿಂದ ಸಲಹೆ ಆಹ್ವಾನ

ಇದಕ್ಕೂ ಮೊದಲು ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಈ ಸಭೆಯ ಮುಖ್ಯ ಉದ್ದೇಶ ಮಸೂದೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದಾಗಿದೆ ಎಂದು ತಿಳಿಸಿದರು.

ಮೊದಲ ಆದ್ಯತೆ ಈ ಮಸೂದೆ ಕುರಿತು ನಿಮ್ಮ ಅಭಿಪ್ರಾಯಗಳಿಗೆ ಮಾತ್ರ. ಈ ವೇದಿಕೆಯ ಮುಖ್ಯ ಉದ್ದೇಶ ಮಸೂದೆ ಕುರಿತ ಚರ್ಚೆಯಾಗಿದೆ ಎಂದರು.

ಮಸೂದೆಯ ಪ್ರಮುಖ ಅಂಶಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ವಿಶೇಷ ಇ-ಮೇಲ್ ವಿಳಾಸದ ಮೂಲಕ ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಎಂದು ಹೇಳಿದರು.

ಕಾನೂನು ತಜ್ಞರು ಹಾಗೂ ಸಂಬಂಧಿತ ಸಂಘಟನೆಗಳೊಂದಿಗೂ ಸಮಾಲೋಚನೆ ನಡೆಸಿದ ಬಳಿಕ ಮಸೂದೆಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆಯ ಹೊಸ ನಿಯಮಗಳ ಕುರಿತು ವ್ಯಕ್ತವಾದ ಆತಂಕಕ್ಕೂ ಉತ್ತರಿಸಿದ ಸಚಿವ ಭೈರೇಗೌಡ, ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಅಪಾರ್ಟ್‌ಮೆಂಟ್‌ಗಳು ನೋಂದಾಯಿತ ತ್ಯಾಜ್ಯ ಸಂಸ್ಕರಣಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂಬುದು ಸುಪ್ರೀಂ ಕೋರ್ಟ್ ಆದೇಶ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು.

ತ್ಯಾಜ್ಯ ಸಂಗ್ರಹ ಶುಲ್ಕದ ಬಗ್ಗೆ, "ಸರ್ಕಾರ ಗರಿಷ್ಠ 12 ರೂಪಾಯಿ ಮಾತ್ರ ನಿಗದಿಪಡಿಸಿದೆ. 12 ರೂಪಾಯು ಕಡ್ಡಾಯ ದರವಾಗಿ ನಿಗದಿಪಡಿಸಿಲ್ಲ. ಅಪಾರ್ಟ್‌ಮೆಂಟ್ ಸಂಘ ಮತ್ತು ಸೇವಾ ಸಂಸ್ಥೆಯ ನಡುವೆ ಪರಸ್ಪರ ಮಾತುಕತೆಯ ಮೂಲಕ ದರ ನಿಗದಿಯಾಗಬಹುದು ಎಂದರು.

ತ್ಯಾಜ್ಯ ಸಂಗ್ರಹಣೆಯಲ್ಲಿ ಏಕಸ್ವಾಮ್ಯ ಉಂಟಾಗದಂತೆ ಇನ್ನಷ್ಟು ಸಂಸ್ಥೆಗಳನ್ನು ನೋಂದಾಯಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.

ಆನ್ ಲೈನ್ ಮೂಲಕವೂ ಅಭಿಪ್ರಾಯ ಕಳಿಸಬಹುದು

ಆನ್ ಲೈನ್ ಮೂಲಕವೂ ಸಲಹೆ ಸೂಚನೆ ನೀಡಬಹುದು. ಇಮೇಲ್ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. kaomablr@gmail.com ಮೇಲ್ ಐಡಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಇದೆ.

ಕರಡು ಮಸೂದೆಯ ಬಗ್ಗೆ ಮಾಹಿತಿ ನೀಡಿದ ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಿಂದಿನ ಕಾನೂನಿನಲ್ಲಿ ಇದ್ದ ತೊಡಕುಗಳನ್ನು ಇವಾಗ ನಿವಾರಣೆ ಮಾಡಲಾಗಿದೆ. ಈ ಹಿಂದೆ ಅಪಾರ್ಟ್ಮೆಂಟ್ ಮಾಲೀಕರ ಸಂಘಗಳಿಗೆ ಕಡ್ಡಾಯ ನೋಂದಣಿ ಇರಲಿಲ್ಲ. ಆದರೆ ಇದೀಗ ಕಡ್ಡಾಯಗೊಳಿಸಲಾಗಿದೆ. ಕಾಮನ್ ಏರಿಯಾ ಯಾವ ರೀತಿಯಲ್ಲಿ ಹಂಚಿಕೆ ಆಗಬೇಕು ಎಂಬ ಬಗ್ಗೆ ಗೊಂದಲ ಇದ್ದವು. ಬಿಲ್ಡರ್‌ ಗಳು ಕಾಮನ್ ಏರಿಯಾವನ್ನು ನಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇದೀಗ ಹೊಸ ಕಾನೂನಿನಲ್ಲಿ ಈ ಗೊಂದಲ ನಿವಾರಣೆ ಮಾಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com