'ರಕ್ತ ಕೊಟ್ಟೇವು, ಭೂಮಿ ಕೊಡುವುದಿಲ್ಲ': ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮಹಿಳೆಯರಿಂದ ಬ್ಯಾನರ್ ಗೆ ರಕ್ತ ಹಚ್ಚಿ ಪ್ರತಿಭಟನೆ

ಬೈರಮಂಗಲ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ರೈತರು ತಮ್ಮ ಬೆರಳುಗಳಿಗೆ ಚುಚ್ಚಿಕೊಂಡು ಹೊರಬಂದ ರಕ್ತವನ್ನು ಟೌನ್‌ಶಿಪ್ ಯೋಜನೆ ವಿರೋಧಿ ಬ್ಯಾನರ್‌ಗಳ ಮೇಲೆ ಲೇಪಿಸಿದರು.
Women protest
ಮಹಿಳೆಯರಿಂದ ಪ್ರತಿಭಟನೆ
Updated on

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸರ್ಕಾರದ ಭೂಸ್ವಾಧೀನ ಯೋಜನೆಗೆ ವಿರೋಧ ವ್ಯಕ್ತಪಡಿಸಲು ರೈತರು ಸಾಂಕೇತಿಕವಾಗಿ 'ರಕ್ತದಲ್ಲಿ ಬರಹ ಪ್ರತಿಭಟನೆ' ನಡೆಸಿದರು.

ಬೈರಮಂಗಲ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ರೈತರು ತಮ್ಮ ಬೆರಳುಗಳಿಗೆ ಚುಚ್ಚಿಕೊಂಡು ಹೊರಬಂದ ರಕ್ತವನ್ನು ಟೌನ್‌ಶಿಪ್ ಯೋಜನೆ ವಿರೋಧಿ ಬ್ಯಾನರ್‌ಗಳ ಮೇಲೆ ಲೇಪಿಸಿದರು. ಕೃಷಿ ಭೂಮಿಯನ್ನು ಬಿಟ್ಟುಕೊಡುವ ಬದಲು ರಕ್ತ ಸುರಿಸಲು, ಅಗತ್ಯವಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದರು.

ಪ್ರತಿಭಟನಾಕಾರರು "ಭೂಮಿ ಕೊಡುವುದಿಲ್ಲ, ರಕ್ತ ಕೊಡುತ್ತೇವೆ", "ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆಗಳನ್ನು ಕೂಗಿ, ಭೂಸ್ವಾಧೀನದಿಂದ ತಮ್ಮ ಜೀವನೋಪಾಯ ಮತ್ತು ಫಲವತ್ತಾದ ಕೃಷಿ ಭೂಮಿಗೆ ಅಪಾಯ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು 500ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಇಂದಿನ ರಕ್ತ ಪ್ರತಿಭಟನೆ ನಮ್ಮ ದೃಢ ಸಂಕಲ್ಪವನ್ನು ತೋರಿಸುತ್ತದೆ. ಟೌನ್‌ಶಿಪ್ ಯೋಜನೆಯನ್ನು ಸರ್ಕಾರ ಕೈಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ರೈತ ನಾಗರಾಜು ಹೇಳಿದರು.

Women protest
'CM ಡಿ.ಕೆ ಶಿವಕುಮಾರ್ ಅವರು ಡ್ರಾಮಾ ಡೈಲಾಗ್ ರೀತಿ ಮಾತಾಡ್ತಾರೆ': ನಿಖಿಲ್ ಕುಮಾರಸ್ವಾಮಿ; Video

ಕಳೆದ ಕೆಲವು ವಾರಗಳಿಂದ ವೇಗ ಪಡೆದುಕೊಂಡಿರುವ ರೈತರ ಹೋರಾಟದಲ್ಲಿ ಈ ಪ್ರತಿಭಟನೆ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಆರಂಭದಲ್ಲಿ ಧರಣಿ ಮತ್ತು ಸ್ಥಳೀಯ ಪ್ರತಿಭಟನೆಗಳಿಗೆ ಸೀಮಿತವಾಗಿದ್ದ ಚಳವಳಿ ಈಗ ವಿವಿಧ ರೈತ ಸಂಘಟನೆಗಳು ಹಾಗೂ ಪ್ರತಿಪಕ್ಷಗಳ ಬೆಂಬಲದೊಂದಿಗೆ ರಾಜಕೀಯ ಮತ್ತು ಸಾರ್ವಜನಿಕ ಆಯಾಮವನ್ನು ಪಡೆದುಕೊಂಡಿದೆ.

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸರ್ಕಾರ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿದು ಯೋಜನೆಗಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯೋಜನಾ ಪ್ರದೇಶದಲ್ಲಿ ಜಂಟಿ ಮಾಪನ ಸಮೀಕ್ಷೆ (JMC Survey) ನಡೆಸುವ ವೇಳೆ ಪ್ರತಿಭಟನಾನಿರತ ರೈತರು ಅಧಿಕಾರಿಗಳಿಗೆ ಸಮೀಕ್ಷೆ ನಡೆಸಲು ಅಡ್ಡಿಪಡಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯ ಬಳಿಕ ರಾಜ್ಯ ಸರ್ಕಾರ ಜಂಟಿ ಮಾಪನ ಸಮೀಕ್ಷೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

Women protest
'ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ಮಾತು ಸಾಲದು, ಯೋಜನೆಯನ್ನೇ ರದ್ದುಪಡಿಸಿ': ಸಿಎಂಗೆ ಬಿಡದಿ ರೈತರ ಒತ್ತಾಯ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಹೇಳಿಕೆ ನೀಡಿ, ಬಲವಂತದ ಭೂಸ್ವಾಧೀನ ನಡೆಯುವುದಿಲ್ಲ. ಸ್ವಯಂಪ್ರೇರಣೆಯಿಂದ ಭೂಮಿ ನೀಡಲು ಸಮ್ಮತಿಸುವ ಭೂಮಾಲೀಕರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ, ಯೋಜನೆಯ ವಿವಿಧ ಆಯಾಮಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.

ಆದಾಗ್ಯೂ, ಈ ಭರವಸೆಗಳಿಂದ ರೈತರು ಸಮಾಧಾನಗೊಂಡಿಲ್ಲ. ನಾಲ್ಕು ಹೊಸ ಗ್ರಾಮಗಳ ವ್ಯಾಪ್ತಿಯ ಸುಮಾರು 4,940 ಎಕರೆ ಭೂಮಿಗೆ ಸಂಬಂಧಿಸಿದ ಅಂತಿಮ ಭೂಸ್ವಾಧೀನ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿರುವುದು, ಬಲವಂತದ ಭೂಸ್ವಾಧೀನ ಇರುವುದಿಲ್ಲ ಎಂಬ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ.

ಭೂಸ್ವಾಧೀನ ಸ್ವಯಂಪ್ರೇರಿತ ಎಂದು ಸರ್ಕಾರ ಹೇಳುತ್ತದೆ. ಹಾಗಿದ್ದರೆ ಸಾವಿರಾರು ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಏಕೆ ಹೊರಡಿಸಿದೆ? ಸರ್ಕಾರದ ಈ ಕ್ರಮಗಳು ಪರಸ್ಪರ ವಿರುದ್ಧ ಸಂದೇಶಗಳನ್ನು ನೀಡುತ್ತಿದ್ದು, ರೈತರಲ್ಲಿ ಆತಂಕ ಸೃಷ್ಟಿಸುತ್ತಿವೆ ಎಂದು ರೈತ ಮಹಿಳೆ ಸುಮಾ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com