

ಬೆಂಗಳೂರು: ಕಣಿಮಿಣಿಕೆ ವಸತಿ ಯೋಜನೆಯ ಹಂತ 1 ಅನ್ನು ಪುನರುಜ್ಜೀವನಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಟೆಂಡರ್‌ಗಳನ್ನು ಕರೆದಿದೆ, ಒಂದು ದಶಕದ ಹಿಂದೆ 27.2 ಕೋಟಿ ರೂ. ಖರ್ಚು ಮಾಡಿ ಯೋಜನೆಯನ್ನು ಕೈಬಿಡಲಾಗಿತ್ತು.
ಈ ಟೆಂಡರ್ 1, 2 ಮತ್ತು 3-BHK ಫ್ಲಾಟ್‌ಗಳ 1,124 ಅಪಾರ್ಟ್ ಮೆಂಟ್ ಗಳನ್ನು ಒಳಗೊಂಡಿದೆ. ಆದರೆ ಇತರ ಹಂತದಲ್ಲಿ ನಿರ್ಮಾಣವಾಗಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಳಪೆ ನೀರು ಸರಬರಾಜು ಮತ್ತು ನೇರ ಸಂಪರ್ಕ ರಸ್ತೆಯ ಕೊರತೆಯ ಬಗ್ಗೆ ದೂರಿದ್ದಾರೆ, ಹೀಗಾಗಿ ಯೋಜನೆಯು ನಿರೀಕ್ಷಿತ ಜನಸಂಖ್ಯೆಯನ್ನು ಆಕರ್ಷಿಸಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಡಿಎ ಪ್ರಕಾರ, ಯೋಜನೆಯ ಹಂತ-1 ಅನ್ನು ಮೇ 2012 ರಲ್ಲಿ 166.3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಯಿತು. ಫೌಂಡೇಶನ್ ಮತ್ತು ಭಾಗಶಃ ರಚನಾತ್ಮಕ ಕೆಲಸಗಳನ್ನು ಮೀರಿ ಕೆಲಸ ಮುಂದುವರಿಯಲು ಸಾಧ್ಯವಾಗಲಿಲ್ಲ, ಗುತ್ತಿಗೆದಾರರು ಜನವರಿ 2015 ರಲ್ಲಿ ಕಾಮಗಾರಿ ಕೈಬಿಟ್ಟರು.
ಸಿಎಜಿ ಆಡಿಟ್ ವರದಿಯಲ್ಲಿ ಈಗಾಗಲೇ ದಾಖಲಾಗಿರುವಂತೆ 27.2 ಕೋಟಿ ರೂ.ಗಳ ವೆಚ್ಚದ ನಂತರ ಒಪ್ಪಂದವನ್ನು ಏಪ್ರಿಲ್ 2016 ರಲ್ಲಿ ಕೊನೆಗೊಳಿಸಲಾಯಿತು. ಇತ್ತೀಚೆಗೆ ಕರೆಯಲಾದ ಟೆಂಡರ್‌ಗಳು ರಚನಾತ್ಮಕ ಸ್ಥಿರತೆ ಮತ್ತು ಪರಿಷ್ಕೃತ ಅಂದಾಜುಗಳ ಮೌಲ್ಯಮಾಪನದ ನಂತರ ಹಂತ-1 ರ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಆದರೆ ಇತರ ಹಂತಗಳಲ್ಲಿ ನಿರ್ಮಾಣವಾದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ನಿವಾಸಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಹಲವಾರು ಮೂಲಭೂತ ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸಿದ್ದಾರೆ. ಮೊದಲನೆ ಹಂತಕ್ಕೆ ಟೆಂಡರ್‌ಗಳನ್ನು ಆಹ್ವಾನಿಸುವ ಮತ್ತು ಕೈಗೆಟುಕುವ ವಸತಿ ಅಭಿವೃದ್ಧಿಯನ್ನು ಬೆಂಬಲಿಸುವ ಬಿಡಿಎ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ ನೇರ ಸಂಪರ್ಕ ರಸ್ತೆಯನ್ನು ಒದಗಿಸುವ ತನ್ನ ದೀರ್ಘಕಾಲೀನ ಬದ್ಧತೆಯನ್ನು ಬಿಡಿಎ ಮೊದಲು ಪೂರೈಸಬೇಕು ಎಂದು ನಿವಾಸಿ ಶಶಾಂಕ್ ಭಾರದ್ವಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಹಲವು ವರ್ಷಗಳಿಂದ ನಿವಾಸಿಗಳು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಂತ 1 ನೂರಾರು ಹೊಸ ಮನೆಗಳನ್ನು ಸೇರಿಸಲು ಸಿದ್ಧವಾಗಿರುವುದರಿಂದ, ಈ ಸಮಸ್ಯೆ ಬಗೆಹರಿಸುವುದು ಪ್ರಮುಖವಾಗಿದೆ. ಹಂತ 1 ರ ನಿರ್ಮಾಣ ಪ್ರಾರಂಭವಾಗುವ ಮೊದಲೇ ನೇರ ಸಂಪರ್ಕ ರಸ್ತೆಯ ಕೆಲಸವನ್ನು ಪ್ರಾರಂಭಿಸಲು ನಾವು ಬಿಡಿಎಯನ್ನು ಒತ್ತಾಯಿಸುತ್ತೇವೆ. ಸಂಪರ್ಕವು ಮೂಲಭೂತ ಅವಶ್ಯಕತೆಯಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ಯೋಜನೆಯು 50 ಎಕರೆಗಳಿಗೂ ಹೆಚ್ಚು ಭೂಮಿಯಲ್ಲಿ ಹರಡಿಕೊಂಡಿದೆ. 2,500 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಮೊದಲ ಹಂತವು ಅಂದಾಜು 12,000 ರಿಂದ 15,000 ನಿವಾಸಿಗಳಿಗೆ ವಸತಿ ಕಲ್ಪಿಸಲಿದೆ.
ಆದರೆ ಶಾಶ್ವತ ಕುಡಿಯುವ ನೀರು ಸರಬರಾಜು, ಸಾಕಷ್ಟು ಉದ್ಯಾನವನಗಳು ಮತ್ತು ಆಟದ ಮೈದಾನಗಳು ಮತ್ತು ಇತರ ಅಗತ್ಯ ಮೂಲಸೌಕರ್ಯಗಳಂತಹ ಹಲವಾರು ಮೂಲಭೂತ ನಾಗರಿಕ ಸೌಲಭ್ಯಗಳನ್ನು ಹೊಂದಿಲ್ಲ" ಎಂದು ಮತ್ತೊಬ್ಬ ನಿವಾಸಿ ಕುಮಾರ್ ಹೇಳಿದರು. ನೇರ ಸಂಪರ್ಕದ ಕೊರತೆಯು ಒಂದು ಸವಾಲಾಗಿದೆ ಮತ್ತು ಅದನ್ನು ಪರಿಹರಿಸಲು ಭೂಸ್ವಾಧೀನಕ್ಕೆ ಕ್ರಮಗಳು ನಡೆಯುತ್ತಿವೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.