

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ಯಲ್ಲಿ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ (Centre of Excellence in Artificial Intelligence – CoE-AI) ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕೇಂದ್ರವನ್ನು ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹12 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದರಲ್ಲಿ ₹5 ಕೋಟಿ 2026-27ರ ಬಜೆಟ್ ಘೋಷಣೆಯಡಿ ಹಾಗೂ ₹7 ಕೋಟಿ LEAP ಕಾರ್ಯಕ್ರಮದಡಿ ಒದಗಿಸಲಾಗುತ್ತದೆ.
ಈ ಉತ್ಕೃಷ್ಟತಾ ಕೇಂದ್ರವು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗಾಗಿ ಪ್ರಾದೇಶಿಕ AI ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಬೆಂಗಳೂರು ಕೇಂದ್ರೀಕೃತ ತಂತ್ರಜ್ಞಾನ ಪರಿಸರದ ಅಸಮತೋಲನ ನಿವಾರಿಸಿ, ಟಿಯರ್-2 ಮತ್ತು ಟಿಯರ್-3 ನಗರಗಳಲ್ಲಿ AI ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, MSME, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ AI ಆಧಾರಿತ ಪರಿಹಾರಗಳನ್ನು ರೂಪಿಸಲು ಈ ಕೇಂದ್ರ ನೆರವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿ AI ಅಭಿವೃದ್ಧಿ ಪ್ರಯೋಗಾಲಯಗಳು, ಉನ್ನತ ಗಣಕ ಸಂಪನ್ಮೂಲಗಳು, ಪ್ರೋಟೋಟೈಪ್ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿಗಳು, ನವೋದ್ಯಮಗಳಿಗೆ ಇನ್ಕ್ಯುಬೇಷನ್, ಸ್ಟಾರ್ಟ್‌ಅಪ್ ಬೆಂಬಲ ಹಾಗೂ ಪ್ರಾದೇಶಿಕ ವಿಸ್ತರಣಾ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಯೋಜನೆಯ ನಿರ್ವಹಣೆಗೆ "IIIT Raichur ARIA – AI Research & Innovation Arena" ಎಂಬ ವಿಶೇಷ ಉದ್ದೇಶಿತ ಸಂಸ್ಥೆ (SPV) ರಚಿಸಲಾಗುವುದು. ಯೋಜನೆಯ ಅನುಷ್ಠಾನವು ಮೂರು ಹಂತಗಳಲ್ಲಿ ನಡೆಯಲಿದ್ದು, ಮೂಲಸೌಕರ್ಯ ನಿರ್ಮಾಣದಿಂದ ಆರಂಭಿಸಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ದೀರ್ಘಕಾಲೀನ ಸ್ವಾವಲಂಬನೆಯತ್ತ ಕೊಂಡೊಯ್ಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯ ಮೂಲಕ ರಾಯಚೂರು ಹಾಗೂ ಉತ್ತರ ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದರೊಂದಿಗೆ, ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಿಗಳು ಮತ್ತು ಕೈಗಾರಿಕೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ದೊರೆಯಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.