

ತುಮಕೂರು: ನಡು ರಸ್ತೆಯಲ್ಲೇ ರೌಡಿಶೀಟರ್ ಹತ್ಯೆಯಿಂದ ತುಮಕೂರು ಜಿಲ್ಲೆ ಬೆಚ್ಚಿ ಬಿದ್ದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಮಲ್ಲ ಅಲಿಯಾಸ್ ವೀರಣ್ಣ (42) ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳಗುಂಬ ಬಳಿಯಿರುವ ಗರುಡ ಕೆಫೆ ಮುಂಭಾಗ ಭಾನುವಾರ ರಾತ್ರಿ ಭೀಕರ ಕೊಲೆ ನಡೆದಿದೆ.
ನಾಲ್ಕೈದು ಮಂದಿ ದುಷ್ಕರ್ಮಿಗಳ ಗ್ಯಾಂಗ್ ವೊಂದು ರಾತ್ರಿ 8:30ರ ಸುಮಾರಿಗೆ ರೌಡಿಶೀಟರ್ ಮಲ್ಲನ ಮೇಲೆ ಅಟ್ಯಾಕ್ ಮಾಡಿದ್ದು, ಗುರುತೇ ಸಿಗದೆ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಮಲ್ಲ ಬೆಳಗುಂಬ ನಿವಾಸಿಯಾಗಿದ್ದ.
ತುಮಕೂರು ಗ್ರಾಮಾಂತರ ಠಾಣೆ ರೌಡಿಶೀಟರ್ ಆಗಿದ್ದನು. ಆತನ ಮನೆ ಸಮೀಪವೇ ಅಟ್ಯಾಕ್ ಮಾಡಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2008ರಲ್ಲಿ ಗಡ್ಡ ರಾಜು ಕೊಲೆ ಪ್ರಕರಣದಲ್ಲಿ ಮಲ್ಲ ಆರೋಪಿಯಾಗಿದ್ದನು. ವಡ್ಡರಹಳ್ಳಿ ಕ್ರಾಸ್ ಬಳಿ ನಡೆದಿದ್ದ ಗಡ್ಡರಾಜು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದನು. ಆ ಬಳಿಕ ರೌಡಿಪಟ್ಟಿ ತೆರೆಯಲಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.