

ಚಿತ್ರದುರ್ಗ: ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಆಗಸ್ಟ್ 3ರಂದು ನಡೆಯಲಿರುವ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ತನ್ನ ಉದ್ದೇಶ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದು, ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಶೇ.80ರಷ್ಟು ಲಾಭವಾಗಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಚಿತ್ರದುರ್ಗದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಶೇ.80ರಷ್ಟು ಲಾಭ ತಮಿಳುನಾಡಿಗೆ, ಉಳಿದ ಶೇ.20ರಷ್ಟು ಮಾತ್ರ ಕರ್ನಾಟಕಕ್ಕೆ ಸಿಗಲಿದೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ತುಂಗಭದ್ರಾ ನೀರಿನ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಹೊಸಪೇಟೆಯಲ್ಲಿ ಒಂದೇ ವೇದಿಕೆಗೆ ಕರೆತಂದು ಮೂರು ರಾಜ್ಯಗಳ ರೈತರ ಹಿತದೃಷ್ಟಿಯಿಂದ ಪರಿಹಾರ ಕಂಡುಕೊಂಡಿದ್ದೇನೆ. ಅದೇ ರೀತಿಯಲ್ಲಿ ಮೇಕೆದಾಟು ವಿವಾದಕ್ಕೂ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು..
ರಾಜ್ಯದ ವಿವಿಧ ಭಾಗಗಳಿಂದ ಮೋಡ ಬಿತ್ತನೆಗೆ ಆಗ್ರಹ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಸಂಬಂಧಿತ ಇಲಾಖೆಯ ವರದಿ ಬಂದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬರ ಘೋಷಣೆಗೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಮಗ್ರ ಸ್ಥಳ ಪರಿಶೀಲನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಳಿಕ ಕೇಂದ್ರದ ತಂಡ ಭೇಟಿ ನೀಡಿದ ನಂತರವೇ ಬರ ಘೋಷಣೆ ಮಾಡಲಾಗುವುದು. "ಯಾರ ಒತ್ತಡಕ್ಕೂ ಮಣಿದು ಬರ ಘೋಷಣೆ ಮಾಡುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ಸೋಮವಾರ ರಾಜ್ಯದ ಹಿರಿಯ ಸಚಿವರೊಂದಿಗೆ ಕರ್ನಾಟಕದ ಸಂಸದರನ್ನು ಭೇಟಿ ಮಾಡಿ, ಬರ ಪರಿಸ್ಥಿತಿಯ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಲಾಗುವುದು.
ಬರ ಘೋಷಣೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗುವುದು. ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದಾಗಿಯೂ ಹೇಳಿದರು.
ಮೊದಲು ಕುಡಿಯುವ ನೀರಿಗೆ ಆದ್ಯತೆ
ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಮೊದಲು ಕುಡಿಯುವ ನೀರಿನ ಅಗತ್ಯಕ್ಕೆ ಮೀಸಲಿಡಲಾಗುವುದು. ನಂತರ ಮಾತ್ರ ನೀರಾವರಿಗೆ ಬಳಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಪ್ರಸ್ತುತ ಜಲಾಶಯಗಳ ನೀರಿನ ಸಂಗ್ರಹವನ್ನು ಗಮನದಲ್ಲಿಟ್ಟುಕೊಂಡು, ನೀರಿನ ಲಭ್ಯತೆಯನ್ನು ಪರಿಶೀಲಿಸದೆ ಬಿತ್ತನೆ ಮಾಡದಂತೆ ರೈತರಿಗೆ ಮನವಿ ಮಾಡಲಾಗಿದೆ. ನೀರು ಹೆಚ್ಚು ಬೇಕಾಗುವ ಬೆಳೆಗಳನ್ನು ಬೆಳೆಯದಂತೆ ಸಲಹೆ ನೀಡಲಾಗಿದೆ. ಆದರೆ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ಸಮಾಧಾನದ ಸಂಗತಿ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯೂ ಇದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ
ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಕ್ರಮ ಕೈಗೊಳ್ಳಲು ಕಾರ್ಯಪಡೆ ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ. ಈ ಉದ್ದೇಶಕ್ಕೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಹೇಳಿದರು.
ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸಲು ಅಧಿಕಾರಿಗಳಿಗೆ ಅನುಮತಿ ನೀಡಲಾಗಿದ್ದು, ಅನುದಾನದ ದುರುಪಯೋಗ ತಡೆಯಲು ಪ್ರತಿಯೊಂದು ಕೊಳವೆಬಾವಿಯ ಜಿಪಿಎಸ್ ಸ್ಥಳಾಂಕವನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮನೆ ಬಾಗಿಲಿಗೆ ಜಾತಿ, ನಿವಾಸ ಪ್ರಮಾಣಪತ್ರ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮನೆ ಬಾಗಿಲಲ್ಲೇ ಜಾತಿ ಹಾಗೂ ನಿವಾಸ ಪ್ರಮಾಣಪತ್ರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಾರ್ಯದ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.
ಬರಪೀಡಿತ ಬೆಳೆ ಪರಿಶೀಲನೆ
ಇದೇ ವೇಳೆ ಅಭಿವೃದ್ಧಿ ಪರಿಶೀಲನಾ ಸಭೆಗೂ ಮುನ್ನ ಚಿತ್ರದುರ್ಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಸಮಯದ ಅಭಾವದಿಂದ ಯರಬಳ್ಳಿ, ಐಮಂಗಲ, ಮರಡಿಹಳ್ಳಿ ಗ್ರಾಮಗಳ ಭೇಟಿಯನ್ನು ರದ್ದುಗೊಳಿಸಿ, ಹಿರಿಯೂರು ತಾಲ್ಲೂಕಿನ ವಡ್ಡಿಕೆರೆ ಗ್ರಾಮಕ್ಕೆ ಮಾತ್ರ ಭೇಟಿ ನೀಡಿದರು.
ವಡ್ಡಿಕೆರೆ ಗ್ರಾಮದ ಪಾಂಡುರಂಗ ರೆಡ್ಡಿ ಅವರ ಜಮೀನಿನಲ್ಲಿ ಒಣಗಿ ಹೋಗಿದ್ದ ಸೂರ್ಯಕಾಂತಿ ಬೆಳೆ ಪರಿಶೀಲಿಸಿದ ಮುಖ್ಯಮಂತ್ರಿ, ರೈತರ ಅಹವಾಲು ಆಲಿಸಿದರು.
ಈ ವೇಳೆಗೆ ಸೂರ್ಯಕಾಂತಿ ಹೂ ಬಿಡಬೇಕಿತ್ತು. ಆದರೆ, ಹೂ ಬಿಡುವ ಮುನ್ನವೇ ಬೆಳೆ ಒಣಗಿದೆ," ಎಂದು ರೈತರು ಬೆಳೆ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಪರಿಶೀಲನಾ ಸಭೆ ಬಳಿಕ ಮುಖ್ಯಮಂತ್ರಿ ಚಿತ್ರದುರ್ಗದ ಅನುಭವ ಮಂಟಪಕ್ಕೆ ತೆರಳಿದರು.