

ಚಿಕ್ಕಮಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಸಿ.ಟಿ. ರವಿ ಅವರ ನಿವಾಸದ ಮುಂದೆ ಭಾನುವಾರ ಹೈಡ್ರಾಮಾ ನಡೆದಿದ್ದು, ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ತೆರಳಿದ್ದ ಪೊಲೀಸರಿಗೆ ಸಿ.ಟಿ. ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ ಘಟನೆ ಕೆಲಕಾಲ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.
ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್ ಸ್ವೀಕರಿಸಲು ಸಿ.ಟಿ. ರವಿ ನಿರಾಕರಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದ ಪೊಲೀಸ್ ತಂಡ ರವಿ ಅವರ ನಿವಾಸಕ್ಕೆ ತೆರಳಿ ನೋಟಿಸ್ ನೀಡಲು ಮುಂದಾಯಿತು. ಆದರೆ, ಸಿ.ಟಿ. ರವಿ ಅದನ್ನು ಸ್ವೀಕರಿಸಲು ನಿರಾಕರಿಸಿದರು. ಈ ವೇಳೆ ಅವರ ಬೆಂಬಲಿಗರು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿ, ಆಡಳಿತಾರೂಢ ಪಕ್ಷದ ಪರವಾಗಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಪ್ರತಿಭಟನೆ ಕುರಿತ ಹೇಳಿಕೆ ಹಿನ್ನೆಲೆ
ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿ.ಟಿ. ರವಿ ನೀಡಿದ್ದ ಎನ್ನಲಾದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ನೀಡಲು ತೆರಳಿದ್ದರು. ವರದಿಗಳ ಪ್ರಕಾರ, "ನೀಟ್ ಪರೀಕ್ಷೆಗೂ ಮುಲ್ಲಾಗೂ ಏನು ಸಂಬಂಧ?" ಎಂದು ಸಿ.ಟಿ. ರವಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
'ಮೊದಲು ಎಫ್‌ಐಆರ್ ಪ್ರತಿ ನೀಡಿ' ಎಂದ ರವಿ
ಪೊಲೀಸರು ನೋಟಿಸ್ ನೀಡಲು ಮುಂದಾದಾಗ, "ಮೊದಲು ಎಫ್‌ಐಆರ್ ಪ್ರತಿಯನ್ನು ನೀಡಿ" ಎಂದು ಸಿ.ಟಿ. ರವಿ ಆಗ್ರಹಿಸಿದರು. "ನನ್ನ ಭಾಷಣದಲ್ಲಿ ನಾನು ಯಾವುದೇ ಧರ್ಮದ ಬಗ್ಗೆ ಮಾತನಾಡಿದ್ದೇನಾ? ನನ್ನ ಭಾಷಣದಲ್ಲಿ ಧರ್ಮ ಎಂಬ ಪದವೇ ಇಲ್ಲ.
ನಾನು ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ.. 'ಮುಲ್ಲಾ' ಎಂದರೆ ಮುಸ್ಲಿಂ ಸಮುದಾಯ ಎಂದರ್ಥವೇ? ನಾನು ಬೆಂಕಿಗೆ ತುಪ್ಪ ಸುರಿಯಲು ಬಂದವರ ಬಗ್ಗೆ ಮಾತ್ರ ಮಾತನಾಡಿದ್ದೇನೆ, ಯಾವುದೇ ಸಮುದಾಯದ ಬಗ್ಗೆ ಅಲ್ಲ," ಎಂದು ಅವರು ಪೊಲೀಸರಿಗೆ ಹೇಳಿದರು. ಇದೇ ವೇಳೆ, "ರಾಜಕಾರಣಿಗಳ ಕೈಗೊಂಬೆಗಳಾಗಿ ಕೆಲಸ ಮಾಡಬೇಡಿ" ಎಂದು ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದರು.
'ಸತ್ಯ ಪರಿಶೀಲಿಸದೇ ಪ್ರಕರಣ ದಾಖಲಿಸಲಾಗಿದೆ'
"ವಾಸ್ತವಾಂಶ ಪರಿಶೀಲಿಸದೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧವೂ ದೂರುಗಳು ದಾಖಲಾಗಿವೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?" ಎಂದು ಸಿ.ಟಿ. ರವಿ ಪ್ರಶ್ನಿಸಿದರು.
ಪೊಲೀಸರ ವಿರುದ್ಧ ಘೋಷಣೆ, ನೋಟಿಸ್ ಹರಿದು ಆಕ್ರೋಶ
ಈ ವೇಳೆ ವಕೀಲ ಸುಧಾಕರ್ ಹಾಗೂ ಇತರ ವಕೀಲರು ಮತ್ತು ಸಿ.ಟಿ. ರವಿ ಅವರ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಿಂದ ತೆರಳಿದರು.
ಸಿ.ಟಿ. ರವಿ ಅವರು ಠಾಣೆಗೆ ಹಾಜರಾಗಲು ಎರಡು ದಿನ ಕಾಲಾವಕಾಶ ಬೇಕು ಎಂದು ಕೇಳಿದರು. ಪೊಲೀಸರು ಇದಕ್ಕೆ ನಿರಾಕರಿಸಿದರು. ಆ ಬಳಿಕ ಪೊಲೀಸರು ಅಂಟಿಸಿದ್ದ ನೋಟಿಸ್ ಅನ್ನು ಬಿಜೆಪಿ ಕಾರ್ಯಕರ್ತರು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
"ಸಿ.ಟಿ. ರವಿ ಮನೆಯಲ್ಲೇ ಇದ್ದಾಗ ಗೋಡೆಗೆ ನೋಟಿಸ್ ಅಂಟಿಸುವ ಅಗತ್ಯವೇನು?" ಎಂದು ಪ್ರಶ್ನಿಸಿ, ಪೊಲೀಸರ ವಿರುದ್ಧ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಪಾಟೀಲ್ ಸ್ಥಳದಿಂದ ತೆರಳುವವರೆಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.