

ಬೆಂಗಳೂರು: ಕರ್ನಾಟಕದಲ್ಲಿ SIR (ವಿಶೇಷ ಮತದಾರರ ಪರಿಷ್ಕರಣೆ) ಪ್ರಕ್ರಿಯೆಯ ಪ್ರತಿ ಹಂತಕ್ಕೂ ಜುಲೈ 15ರ ಆದೇಶದ ಮೂಲಕ ನಿಗದಿಪಡಿಸಲಾದ ಕಾಲಮಿತಿಯನ್ನು ಒಂದು ತಿಂಗಳಿಂದ ಮೂರು ತಿಂಗಳಿಗೆ ವಿಸ್ತರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನಿರ್ದೇಶನ ನೀಡುವಂತೆ ಕೋರಿ, ಸಾಹಿತಿ ದೇವನೂರು ಮಹಾದೇವ, ಇತಿಹಾಸಕಾರ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವೊಂಬಟ್ಕೆರೆ ಮತ್ತು ಮಾಜಿ ಕುಲಪತಿ ಸಬಿಹಾ ಭೂಮಿಗೌಡ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.
SIR ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳ ವಿವರಗಳನ್ನು ಒದಗಿಸಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಯನ್ನು ಮುಂದೂಡಿತು.
SIR ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು ಯಾವುದೇ ಸಾಮಾಜಿಕ ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ರದ್ದುಗೊಳಿಸದಂತೆ ನಿರ್ದೇಶನ ನೀಡಬೇಕೆಂದೂ ಅರ್ಜಿದಾರರು ಕೋರಿದ್ದಾರೆ.
ಅಲ್ಲದೆ, ರಾಜ್ಯದ ಪ್ರತಿಯೊಂದು ಮತಗಟ್ಟೆಯಲ್ಲೂ ಮತದಾರರ ನೆರವು ಕೇಂದ್ರಗಳನ್ನು (voter facilitation centres)ಸ್ಥಾಪಿಸಿ ಅವುಗಳನ್ನು ಕಾರ್ಯಗತಗೊಳಿಸುವಂತೆ ಭಾರತೀಯ ಚುನಾವಣಾ ಆಯೋಗ ಮತ್ತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಇದರ ಜೊತೆಗೆ, ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು ಎಂಬ ವರ್ಗೀಕರಣದಲ್ಲಿನ 'ಇತರೆ' (other) ಉಪ-ವರ್ಗವು ನಿಖರವಾಗಿ ಏನನ್ನು ಒಳಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಹಾಗೂ ನಿರ್ದಿಷ್ಟ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ಮತದಾರರಿಗೆ ತಿಳಿಸದೆ ಆ ಉಪ-ವರ್ಗದ ಅಡಿಯಲ್ಲಿ ಯಾವುದೇ ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಬಾರದೆಂದು ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಮತದಾರರ ಹೆಸರನ್ನು 'ತಾರ್ಕಿಕ ವ್ಯತ್ಯಾಸ' (logical discrepancy) ಎಂದು ಗುರುತಿಸಲು ಕಾರಣವಾಗುವ ಮಾನದಂಡಗಳ ಸಂಪೂರ್ಣ ವಿವರವನ್ನು ಸ್ಪಷ್ಟ ಮತ್ತು ಸುಲಭವಾಗಿ ಅರ್ಥವಾಗುವ ಲಿಖಿತ ರೂಪದಲ್ಲಿ ಪ್ರಕಟಿಸುವಂತೆ ಹಾಗೂ ನೈಸರ್ಗಿಕ ನ್ಯಾಯದ ತತ್ವಗಳಿಗೆ ಅನುಗುಣವಾಗಿ, ಕರಡು ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಮುನ್ನ ಸಂಬಂಧಪಟ್ಟ ಮತದಾರರಿಗೆ ಪೂರ್ವ ಸೂಚನೆ ಮತ್ತು ಪ್ರತಿಕ್ರಿಯಿಸಲು ಸಮಂಜಸವಾದ ಅವಕಾಶವನ್ನು ನೀಡದೆ ಅಂತಹ ಕ್ರಮವನ್ನು ಕೈಗೊಳ್ಳಬಾರದೆಂದು ನಿರ್ದೇಶನ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಜೂನ್ 15 ರಂದು ಕರ್ನಾಟಕ ಸರ್ಕಾರ ಬರೆದ ಪತ್ರದಲ್ಲಿ ವ್ಯಕ್ತಪಡಿಸಲಾದ ನಿರ್ದಿಷ್ಟ ಆತಂಕಗಳನ್ನು ಪರಿಗಣಿಸಲು ಮತ್ತು ರಾಜ್ಯದಲ್ಲಿ 'ವಿಶೇಷ ಮತದಾರರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ನಡೆಸುವ ಕುರಿತು ಆ ವಿಷಯಗಳನ್ನು ಒಳಗೊಂಡ ಲಿಖಿತ ಮಾರ್ಗಸೂಚಿಗಳನ್ನು ನಿಗದಿತ ಕಾಲಮಿತಿಯೊಳಗೆ ಹೊರಡಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.