

ನವದೆಹಲಿ: ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಕ್ತಾಯದ ಹಂತ ತಲುಪಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಕೇಳಿದ ಲಿಖಿತ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.
ಸುಮಾರು ರೂ.14,655 ಕೋಟಿ ವೆಚ್ಚದ 288 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (Satellite Town Ring Road - STRR) ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಎರಡು ಪ್ಯಾಕೇಜ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೆರಡು ಪ್ಯಾಕೇಜ್‌ಗಳು ಅಂತಿಮ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಯನ್ನು ಒಟ್ಟು ಆರು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಇದರಲ್ಲಿ 243 ಕಿ.ಮೀ ರಸ್ತೆ ಕರ್ನಾಟಕದಲ್ಲಿದ್ದು, 45 ಕಿ.ಮೀ ರಸ್ತೆ ತಮಿಳುನಾಡಿನ ವ್ಯಾಪ್ತಿಯಲ್ಲಿದೆ ಎಂದರು.
ಯೋಜನೆಯ ಭಾಗವಾಗಿರುವ ದೊಡ್ಡಬಳ್ಳಾಪುರ–ದೊಡ್ಡಸ್ಪೇಟೆ ಬೈಪಾಸ್ ಹಾಗೂ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಯೊಂದಿಗೆ ಹೊಂದಿಕೆಯಾಗಿರುವ ರಸ್ತೆ ಭಾಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ಇನ್ನು 38 ಕಿ.ಮೀ ಉದ್ದದ ದೊಡ್ಡಬಳ್ಳಾಪುರ–ಹೊಸಕೋಟೆ ವಿಭಾಗದ ಕಾಮಗಾರಿ ಶೇ.99.2ರಷ್ಟು ಪೂರ್ಣಗೊಂಡಿದ್ದು, 2026ರ ನವೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಅದೇ ರೀತಿ ತಮಿಳುನಾಡಿನ ಬೆಳಗೊಂಡಪಲ್ಲಿ–ಕರ್ನಾಟಕ ಗಡಿ ನಡುವಿನ 33.3 ಕಿ.ಮೀ ರಸ್ತೆ ಕಾಮಗಾರಿ ಶೇ.91.3ರಷ್ಟು ಪೂರ್ಣಗೊಂಡಿದ್ದು, ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ, ಓಬ್ಲಾಪುರ–ಕುಣಿಗಲ್ ಹಾಗೂ ಕುಣಿಗಲ್–ಎಸ್. ಮೂಡುಗಡಪಲ್ಲು ನಡುವಿನ ಎರಡು ಹೊಸ ಆರು ಪಥದ STRR ರಸ್ತೆ ವಿಭಾಗಗಳ ಪ್ರಸ್ತಾವನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮೌಲ್ಯಮಾಪನ ಸಮಿತಿ ಪರಿಶೀಲಿಸಿದೆ ಎಂದು ತಿಳಿಸಿದರು.
ಭೂಸ್ವಾಧೀನ ವೆಚ್ಚದ ಕುರಿತು ಮಾತನಾಡಿ, ಕರ್ನಾಟಕ ಭಾಗದ STRR ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ವೆಚ್ಚದ ಶೇ.30ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲು ಒಪ್ಪಿದೆ. ರಾಜ್ಯದಲ್ಲಿ ಭೂಸ್ವಾಧೀನಕ್ಕೆ ಅಂದಾಜು ರೂ.6,117 ಕೋಟಿ ಅಗತ್ಯವಿದ್ದು, ಇದುವರೆಗೆ ರೂ.518.32 ಕೋಟಿ ರಾಜ್ಯ ಸರ್ಕಾರ ಜಮಾ ಮಾಡಿದೆ. ತಮಿಳುನಾಡಿನ 45 ಕಿ.ಮೀ ರಸ್ತೆ ಭಾಗಕ್ಕೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು, ಭೂಸ್ವಾಧೀನ ಸೇರಿದಂತೆ, ಕೇಂದ್ರ ಸರ್ಕಾರವೇ ಭರಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ 261.7 ಕಿ.ಮೀ ಉದ್ದದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆ ಕುರಿತೂ ಕೇಂದ್ರ ಸರ್ಕಾರ ಮಾಹಿತಿ ನೀಡಿದರು.
ಬಹುತೇಕ ಪ್ಯಾಕೇಜ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು ಅಥವಾ ಅಂತಿಮ ಹಂತದಲ್ಲಿದೆ. ಆದರೆ, ತಮಿಳುನಾಡಿನ ಅರಕ್ಕೋಣಂ–ಕಾಂಚೀಪುರಂ ನಡುವಿನ 25.5 ಕಿ.ಮೀ ರಸ್ತೆ ಕಾಮಗಾರಿ ಮಾತ್ರ ಸ್ಥಗಿತಗೊಂಡಿದೆ ಎಂದು ಹೇಳಿದರು.
ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ 2025ರ ಮೇ ತಿಂಗಳಲ್ಲಿ ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿ ಕಾಮಗಾರಿ ನಿಲ್ಲಿಸಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2025ರ ನವೆಂಬರ್‌ನಲ್ಲಿ ಗುತ್ತಿಗೆ ರದ್ದುಗೊಳಿಸುವ ಉದ್ದೇಶದ ನೋಟಿಸ್ ನೀಡಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಗುತ್ತಿಗೆ ರದ್ದತಿ ಕುರಿತಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ನಡುವೆ ಸಾಲ ನೀಡಿದ ಪ್ರಮುಖ ಹಣಕಾಸು ಸಂಸ್ಥೆಗಳು ಹೊಸ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಿವೆ.
ತಮಿಳುನಾಡಿನ ಕೆಲವು ಪ್ಯಾಕೇಜ್‌ಗಳಲ್ಲಿ ಭೂಸ್ವಾಧೀನ ವಿಳಂಬ, ವಿದ್ಯುತ್ ಮತ್ತು ಇತರೆ ಸಾರ್ವಜನಿಕ ಉಪಯೋಗ ಸೌಲಭ್ಯಗಳ ಸ್ಥಳಾಂತರ, ರೈಲ್ವೆ ಇಲಾಖೆಯ ಅನುಮತಿ ಹಾಗೂ ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ಗೋಪುರಗಳ ಸ್ಥಳಾಂತರಕ್ಕೆ ಅಗತ್ಯ ಅನುಮೋದನೆ ಸಿಗದಿರುವುದು ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮಾಹಿತಿ ನೀಡಿದರು.