

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಕುರಿತ ಅಸಮಾಧಾನಗಳ ಸರಣಿ ಮುಂದುವರಿದಿರುವ ಬೆನ್ನಲ್ಲೇ, ಇದೀಗ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೂಡ ತಮ್ಮ ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿದ್ದ ಪ್ರಮುಖ ಸಂಸ್ಥೆಗಳಾದ ಪ್ರಮುಖ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಬಳಿಯೇ ಉಳಿದಿರುವುದರಿಂದ ಕೃಷ್ಣ ಬೈರೇಗೌಡ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, BDA ಮತ್ತು BMRDA ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಹೆಚ್ಚಿನ ಮಹತ್ವವಿಲ್ಲ ಎಂದು ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೂ ತಂದಿದ್ದು, ಈ ಕುರಿತು ದೂರವಾಣಿ ಮೂಲಕ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ ಐದು ನಗರ ಪಾಲಿಕೆಗಳಾದ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ನಗರ ಪಾಲಿಕೆಗಳ ನಿರ್ವಹಣೆ ಮಾತ್ರ ಇರುವುದರಿಂದ ಜನರಿಗೆ ಗೋಚರಿಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಅವಕಾಶ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಆದಾಗ್ಯೂ, ಬೆಂಗಳೂರು ಜಲಮಂಡಳಿ (BWSSB) ಮತ್ತು ಮೆಟ್ರೋ ರೈಲು ನಿಗಮ (BMRCL) ಅವರ ಖಾತೆಯ ವ್ಯಾಪ್ತಿಯಲ್ಲಿವೆ.
ಈ ಕಾರಣದಿಂದಲೇ ಅವರು ಇನ್ನೂ ಅಧಿಕೃತವಾಗಿ ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ಸ್ವೀಕರಿಸಿಲ್ಲ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್‌ನಿಂದ ಕರೆ ಬರುವ ನಿರೀಕ್ಷೆಯಲ್ಲಿರುವ ಅವರು, BDA ಮತ್ತು BMRDA ಖಾತೆಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದು, ಅದು ಸಾಧ್ಯವಾಗದಿದ್ದರೆ ಖಾತೆ ಬದಲಾವಣೆಗಾಗಿ ಮನವಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಗಮನಕ್ಕೂ ತರಲಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಖಾತೆ ಹಂಚಿಕೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಹಿರಿಯ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಕೂಡ ಇದೇ ಖಾತೆ ತಮಗೆ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಹೇಳಿ ರಾಜೀನಾಮೆ ಸಲ್ಲಿಸಿದ್ದರು.
ಬಳಿಕ ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಅವರು ರಾಜೀನಾಮೆ ಹಿಂಪಡೆದು ಖಾತೆಯ ಜವಾಬ್ದಾರಿ ಸ್ವೀಕರಿಸಿದ್ದರು. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೆಚ್ಚುವರಿ ಖಾತೆ ಅಥವಾ ಹೊಸ ಖಾತೆ ನೀಡುವ ಭರವಸೆಯೊಂದಿಗೆ ಅವರನ್ನು ಮನವೊಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೊಂದೆಡೆ, ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಬೈರತಿ ಸುರೇಶ್ ಅವರ ಹೆಸರು ಸೇರದಿರುವುದಕ್ಕೂ ರಾಜಕೀಯ ಕಾರಣಗಳಿದ್ದವು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ವೇಳೆ ಬೆಂಗಳೂರು ಸುತ್ತಮುತ್ತಲಿನ ನೂರಾರು ಕೋಟಿ ಮೌಲ್ಯದ ಸುಮಾರು 50 ಎಕರೆ ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಅವರು ಕೈಗೊಂಡಿದ್ದರು. ಈ ಕ್ರಮ ಕೆಲ ಕಾಂಗ್ರೆಸ್ ನಾಯಕರಿಗೂ ಅಸಮಾಧಾನ ತಂದಿತ್ತು ಎನ್ನಲಾಗಿದೆ.
ಕಂದಾಯ ಇಲಾಖೆಯಲ್ಲಿ ಉಪನೋಂದಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿರಲಿಲ್ಲ. ಇದರಿಂದಲೂ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬೈರತಿ ಸುರೇಶ್ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸದೆ, ಪಕ್ಷ ಮತ್ತು ಸರ್ಕಾರದ ವಿಚಾರವಾಗಿ ಭೇಟಿ ಮಾಡಿದ್ದೇನೆ ಎಂದು ಹೇಳಿ ಹೊರಟಿದ್ದರು. ಆದರೆ ಮೂಲಗಳ ಪ್ರಕಾರ, ಆ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆ ಹಾಗೂ BDA, BMRDA ಸೇರ್ಪಡೆ ಕುರಿತೇ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement