ಇದು Brand Bengaluru ಅಲ್ಲ, 'ಬ್ರೋಕನ್ ಬೆಂಗಳೂರು': ರಸ್ತೆ ಗುಂಡಿ, ಕಸದ ಸಮಸ್ಯೆ ಮುಂದಿಟ್ಟು ಡಿಕೆಶಿ-ಕೃಷ್ಣ ಬೈರೇಗೌಡ ವಿರುದ್ಧ BJP ವಾಗ್ದಾಳಿ

ಇಲಾಖೆಗಳ ಹಂಚಿಕೆಯ ಜಿದ್ದಾಜಿದ್ದಿನಲ್ಲಿ ಕೊನೆಗೂ ಒಲ್ಲದ ಮನಸ್ಸಿನಿಂದ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರಿನ ಜವಾಬ್ದಾರಿ ಕೊಟ್ಟಿದ್ದೀರಿ. ಆದರೆ, ಸಚಿವರಿಗೆ ಬೆಂಗಳೂರಿನ ನಗರದ ಜನರ ಜೀವಕ್ಕಿಂತ, ಬಿಡಿಎ, ಬಿಎಂಆರ್‌ಡಿಎ ಇಲ್ಲದ "ನೀರಸ" ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲಿನ ಅಸಮಾಧಾನವೇ ದೊಡ್ಡದಾದಂತಿದೆ
file pic
ರಸ್ತೆ ಗುಂಡಿ (ಸಾಂಕೇತಿಕ ಚಿತ್ರ)online desk
Updated on

ಬೆಂಗಳೂರು: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳು ಮತ್ತೆ ತಲೆದೋರಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. .

“ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಡಿ.ಕೆ. ಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್‌ಬಂದಿಯ ಬ್ರೋಕನ್ ಬೆಂಗಳೂರು” ಎಂದು ವ್ಯಂಗ್ಯವಾಡಿದ್ದಾರೆ.

ನಗರಕ್ಕೆ ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ ಬಿದ್ದಿರುವ 5,000ಕ್ಕೂ ಅಧಿಕ ಮೃತ್ಯುಕೂಪಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಲ್ಲೆಲ್ಲಾ ನಾರುತ್ತಿರುವ ಕಸದ ರಾಶಿ. ಇಲಾಖೆಗಳ ಹಂಚಿಕೆಯ ಜಿದ್ದಾಜಿದ್ದಿನಲ್ಲಿ ಕೊನೆಗೂ ಒಲ್ಲದ ಮನಸ್ಸಿನಿಂದ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರಿನ ಜವಾಬ್ದಾರಿ ಕೊಟ್ಟಿದ್ದೀರಿ. ಆದರೆ, ಕಂದಾಯ ಇಲಾಖೆಯನ್ನು ಬಿಡಲು ಮನಸಿಲ್ಲದ ಸಚಿವರಿಗೆ ಬೆಂಗಳೂರಿನ ನಗರದ ಜನರ ಜೀವಕ್ಕಿಂತ, ಬಿಡಿಎ, ಬಿಎಂಆರ್‌ಡಿಎ ಇಲ್ಲದ "ನೀರಸ" ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲಿನ ಅಸಮಾಧಾನವೇ ದೊಡ್ಡದಾದಂತಿದೆ ಎಂದು ಕಿಡಿಕಾರಿದ್ದಾರೆ.

5,000ಕ್ಕೂ ಹೆಚ್ಚು ರಸ್ತೆ ಗುಂಡಿಗಳು: ಮಳೆಗಾಲ ಶುರುವಾದರೂ ಕೇವಲ 20% ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ 80% ಕಾಮಗಾರಿ ಇನ್ನೂ ನೆನೆಗುದಿಗೆ ಬಿದ್ದಿದೆ. ಬೈಕ್ ಸವಾರರು ರಸ್ತೆಗೆ ಇಳಿದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಈ ಗುಂಡಿಗಳಿಗೆ ಬೀಳುವ ಬಡವರ ಜೀವಕ್ಕೆ ಯಾರು ಹೊಣೆ?\

file pic
BDA, BMRDA ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಬೆಲೆಯೇ ಇಲ್ಲ: ರಾಮಲಿಂಗಾ ರೆಡ್ಡಿ ಬಳಿಕ ಕೃಷ್ಣ ಬೈರೇಗೌಡ ಸಿಟ್ಟು; ಹೈಕಮಾಂಡ್‌ಗೆ ದೂರು..?

ನಾರುತ್ತಿರುವ ನಗರ: ಕಂಡ ಕಂಡಲ್ಲಿ ಕಸದ ರಾಶಿ ಬಿದ್ದಿದೆ, ವಿಲೇವಾರಿ ಮಾಡಲು GBAಗೆ ಯೋಗ್ಯತೆಯಿಲ್ಲ. ಮಳೆ ನೀರಿಗೆ ಈ ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸ್ವಚ್ಛಗೊಳಿಸಬೇಕಾದ ಸಿಬ್ಬಂದಿಯೇ ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದರೂ ಇಲಾಖೆ ಕುರುಡಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ವಿಟ್ಟಸಂದ್ರ ಪ್ರದೇಶದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಕಸ ವರ್ಗಾವಣೆ ಕೇಂದ್ರ ಸ್ಥಾಪಿಸಲು ಮುಂದಾಗಿರುವ ಸರ್ಕಾರ, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಸರ್ಕಾರ ಬಿಡುಗಡೆ ಮಾಡಿರುವ 2,000 ಕೋಟಿ ರೂ. ಅನುದಾನದ ಬಗ್ಗೆ ಪ್ರಶ್ನೆ ಎತ್ತಿರುವ ಅಶೋಕ್, “ಬೆಂಗಳೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಸ್ತೆ ಗುಂಡಿಗಳು ಇನ್ನೂ ಮುಚ್ಚಿಲ್ಲ. ಆ ಹಣ ಎಲ್ಲಿಗೆ ಹೋಗಿದೆ?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಬೆಂಗಳೂರು ಅಭಿವೃದ್ಧಿ ಖಾತೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾದ ಕೃಷ್ಣ ಬೈರೇಗೌಡರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಖಾತೆ ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಿ. ಆದರೆ 1.5 ಕೋಟಿ ಬೆಂಗಳೂರಿಗರನ್ನು ನಿಮ್ಮ ಅಸಮಾಧಾನಕ್ಕೆ ಬಲಿ ಕೊಡಬೇಡಿ” ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಸರ್ಕಾರ ಅಭಿವೃದ್ಧಿಗಿಂತ ವರ್ಗಾವಣೆ ಮತ್ತು ಕಮಿಷನ್ ರಾಜಕಾರಣದಲ್ಲಿ ತೊಡಗಿದೆ. ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

file pic
ಕೆಟ್ಟುಹೋದ ಲಾರಿಯಂತಿರುವ ಸರ್ಕಾರ ನಡೆಸಲು ಆಗದೆ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ಕೊಟ್ಟಿದ್ದಾರೆ!

‘ಶಿಕ್ಷಣ ಇಲಾಖೆಗೆ ಸಚಿವರೇ ಇಲ್ಲ, ಶಾಲಾ ಮಕ್ಕಳಿಗೆ ಬೆಂಚ್-ಮೇಜುಗಳಿಲ್ಲ

ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನೂ ಪ್ರಸ್ತಾಪಿಸಿರುವ ಅಶೋಕ್ ಅವರು, ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ವಾರಗಳು ಕಳೆದರೂ ಅನೇಕ ಶಾಲೆಗಳಲ್ಲಿ ಮಕ್ಕಳು ಇನ್ನೂ ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ.

ಬೆಂಚ್-ಮೇಜುಗಳ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಖಾಲಿ ಹುದ್ದೆಗಳ ಸಮಸ್ಯೆಗಳು ಮುಂದುವರಿದಿದ್ದು, ಶಿಕ್ಷಣ ಇಲಾಖೆಗೆ ಪೂರ್ಣಾವಧಿ ಸಚಿವರೇ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ ಎಂದು ಅವರು ಹೇಳಿದ್ದಾರೆ.

“ಶಾಲೆಗಳಿವೆ, ಆದರೆ ಅಗತ್ಯ ಸೌಲಭ್ಯಗಳಿಲ್ಲ. ಶಿಕ್ಷಕರಿದ್ದಾರೆ, ಆದರೆ ಪೀಠೋಪಕರಣಗಳಿಲ್ಲ. ಇಲಾಖೆಯಿದೆ, ಆದರೆ ಅದನ್ನು ಮುನ್ನಡೆಸುವ ಸಚಿವರೇ ಇಲ್ಲ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಧನಾ ಸಮಾವೇಶಗಳು ಮತ್ತು ಜಾಹೀರಾತುಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರಕ್ಕೆ ಬಡ ಮಕ್ಕಳಿಗೆ ಬೆಂಚ್-ಮೇಜು ಒದಗಿಸಲು ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಶಿಕ್ಷಣ ಇಲಾಖೆಗೆ ತಕ್ಷಣ ಪೂರ್ಣಾವಧಿ ಸಚಿವರನ್ನು ನೇಮಿಸಿ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಮೇಸನ್ ಟೂಲ್ ಕಿಟ್ ಖರೀದಿಯಲ್ಲೂ 12.92 ಕೋಟಿ ರೂ. ಹಗರಣ’

ಇದೇ ವೇಳೆ ಕಟ್ಟಡ ಕಾರ್ಮಿಕರಿಗಾಗಿ ವಿತರಿಸಬೇಕಿದ್ದ ಮೇಸನ್ ಟೂಲ್ ಕಿಟ್ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದೂ ಅಶೋಕ್ ಅವರು ಆರೋಪಿಸಿದ್ದಾರೆ.

ಮಾರುಕಟ್ಟೆಯಲ್ಲಿ ರೂ.1,379 ಬೆಲೆ ಬಾಳುವ ಟೂಲ್ ಕಿಟ್‌ಗೆ ರೂ.3,575 ದರ ನಿಗದಿಪಡಿಸಿ, ಖಾಸಗಿ ಕಂಪನಿಗಳಿಗೆ ರೂ.3,200 ರಿಂದ ರೂ.3,300ರವರೆಗೆ ಪಾವತಿಸಲಾಗಿದೆ. ಒಟ್ಟು 67,380 ಕಿಟ್‌ಗಳ ಖರೀದಿಯಲ್ಲಿ ಸರ್ಕಾರಕ್ಕೆ ಸುಮಾರು ರೂ.12.92 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕೇಳಿರುವ ಪ್ರಾಸಿಕ್ಯೂಷನ್ ಅನುಮತಿಯ ಕಡತ ಕಳೆದ ಒಂಬತ್ತು ತಿಂಗಳಿಂದ ಸರ್ಕಾರದ ಬಳಿ ಬಾಕಿ ಉಳಿದಿದೆ ಎಂದು ಆರೋಪಿಸಿರುವ ಅವರು, “ಈ ವಿಳಂಬ ಯಾರನ್ನು ರಕ್ಷಿಸಲು?” ಎಂದು ಪ್ರಶ್ನಿಸಿದ್ದಾರೆ.

ಬಡ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com