ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ; ಆದ್ಯತೆ ಮೇಲೆ ಎತ್ತಿನಹೊಳೆ ಪೂರ್ಣಗೊಳಿಸಲು ಸರ್ಕಾರ ಪ್ರಯತ್ನ: ಸಚಿವ ರಾಮಲಿಂಗಾ ರೆಡ್ಡಿ

ಸಭೆಯಲ್ಲಿ ಮೇಕೆದಾಟು ಯೋಜನೆ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಯಿತು.
Minister Ramalinga Reddy
ಸಚಿವ ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ ಹಾಗೂ ನಾಲ್ಕು ಪ್ರಮುಖ ನೀರಾವರಿ ನಿಗಮಗಳ ಕಾರ್ಯನಿರ್ವಹಣೆಯ ಪರಿಶೀಲನೆಗಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ನಿನ್ನೆ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS), ಹಿರಿಯ ಅಧಿಕಾರಿಗಳು ಹಾಗೂ ನಾಲ್ಕು ನೀರಾವರಿ ನಿಗಮಗಳಾದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾವೇರಿ ನೀರಾವರಿ ನಿಗಮ ನಿಯಮಿತ ಮತ್ತು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಲಾಗಿತ್ತು ಎಂದು ತಿಳಿಸಿದರು.

ಈ ನಾಲ್ಕು ನಿಗಮಗಳ ಅಧ್ಯಕ್ಷರಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಾರ್ಯನಿರ್ವಹಿಸುತ್ತಿದ್ದು, ತಾವು ಉಪಾಧ್ಯಕ್ಷರಾಗಿದ್ದೇನೆ ಎಂದು ಸಚಿವರು ಹೇಳಿದರು. ಈ ನಿಗಮಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಮತ್ತು ಮುಂದಿನ ಮಂಗಳವಾರ ಎರಡು ವಿಸ್ತೃತ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು.

ಸಭೆಯಲ್ಲಿ ಮೇಕೆದಾಟು ಯೋಜನೆ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿ (DPR) ಸಿದ್ಧವಾಗಿದ್ದು, ಅಗತ್ಯ ಅನುಮತಿಗಳನ್ನು ಶೀಘ್ರ ಪಡೆಯಲು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ಇದರ ಜೊತೆಗೆ ಎತ್ತಿನಹೊಳೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಬಾಕಿ ಅಧಿಸೂಚನೆಗಳು, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ-ಬಂಡೂರಿ ಯೋಜನೆ ಅಧಿಸೂಚನೆ ಪ್ರಕ್ರಿಯೆ ಹಾಗೂ ಕಾಲುವೆಗಳ ಆಧುನೀಕರಣ ಕುರಿತ ವಿಷಯಗಳನ್ನೂ ಪರಿಶೀಲಿಸಲಾಯಿತು.

ಮುಂದಿನ ವಾರ ನಡೆಯುವ ಎರಡು ನಿಗಮಗಳ ಸಭೆಗಳ ಬಳಿಕ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ಶ್ವೇತಪತ್ರ (White Paper) ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

Minister Ramalinga Reddy
BDA, BMRDA ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಬೆಲೆಯೇ ಇಲ್ಲ: ರಾಮಲಿಂಗಾ ರೆಡ್ಡಿ ಬಳಿಕ ಕೃಷ್ಣ ಬೈರೇಗೌಡ ಸಿಟ್ಟು; ಹೈಕಮಾಂಡ್‌ಗೆ ದೂರು..?

ಎಲ್ಲ ಯೋಜನೆಗಳ ಪೂರ್ಣಗೊಳಿಸುವುದೇ ಆದ್ಯತೆ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ರಾಮಲಿಂಗಾ ರೆಡ್ಡಿ, "ನಮ್ಮ ಮೊದಲ ಆದ್ಯತೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದು. ಕಾನೂನು ಸಂಬಂಧಿತ ಅಡೆತಡೆಗಳಿದ್ದರೆ ಅವುಗಳನ್ನು ಕೂಡ ನಿವಾರಿಸುತ್ತೇವೆ. ಎತ್ತಿನಹೊಳೆ ಯೋಜನೆಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಸಾಧ್ಯವಾದರೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿಯಿದೆ. ಆದರೆ ಅವು ಋತುಮಾನಿಕ ನದಿಗಳಾಗಿರುವುದರಿಂದ ಕಾಮಗಾರಿ ಪೂರ್ಣಗೊಳಿಸುವ ಸಮಯದಲ್ಲಿ ನೀರಿನ ಲಭ್ಯತೆ ಸವಾಲಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಈ ಇಲಾಖೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿರುವುದರಿಂದ ಎಲ್ಲಾ ಸವಾಲುಗಳ ಬಗ್ಗೆ ಅವರಿಗೆ ಉತ್ತಮ ಅರಿವು ಇದೆ. ಆದ್ದರಿಂದ ಸ್ವಲ್ಪ ಹೆಚ್ಚಿನ ಅನುದಾನವನ್ನು ಮೀಸಲಿಟ್ಟು ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com