ಕರ್ನಾಟಕದಲ್ಲಿ ಸಲಿಂಗಿಗಳಲ್ಲಿ ಹೆಚ್ಐವಿ ಪ್ರಕರಣ ಸಂಖ್ಯೆ 166ರಿಂದ 412ಕ್ಕೆ ಏರಿಕೆ: ಆತಂಕಕಾರಿ ಸಂಗತಿ ಬಹಿರಂಗ

ಅಂಕಿಅಂಶಗಳ ಪ್ರಕಾರ, 2024-25ರಲ್ಲಿ ಈ ಸಂಖ್ಯೆ 362ಕ್ಕೆ ಏರಿಕೆಯಾಗಿದ್ದು, 2025-26ರಲ್ಲಿ 412ಕ್ಕೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಈ ಸಮುದಾಯದಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವ ಪುರುಷರ (MSM) ಸಲಿಂಗಕಾಮಿಗಳ ಸಮುದಾಯದಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳವಾಗಿದ್ದು, ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಸ್ಥೆ (KSAPS)ಯ ಅಂಕಿಅಂಶಗಳ ಪ್ರಕಾರ 2023-24ರಲ್ಲಿ 166 ಇದ್ದ ಪ್ರಕರಣಗಳು 2025-26ರಲ್ಲಿ 412ಕ್ಕೆ ಏರಿಕೆಯಾಗಿದೆ.

ಅಂಕಿಅಂಶಗಳ ಪ್ರಕಾರ, 2024-25ರಲ್ಲಿ ಈ ಸಂಖ್ಯೆ 362ಕ್ಕೆ ಏರಿಕೆಯಾಗಿದ್ದು, 2025-26ರಲ್ಲಿ 412ಕ್ಕೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಈ ಸಮುದಾಯದಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ.

ಕೆಎಸ್‌ಎಪಿಎಸ್‌ ಮಾಹಿತಿ ಪ್ರಕಾರ, ನಿರ್ದಿಷ್ಟ ಸಮುದಾಯಗಳ ಕಾರ್ಯಕ್ರಮ (Targeted Intervention Programme - TIP) ಅಡಿಯಲ್ಲಿ ನೋಂದಾಯಿತ ಲೈಂಗಿಕ ಸಂಬಂಧ ಹೊಂದುವ ವ್ಯಕ್ತಿಗಳ ಸಂಖ್ಯೆ 2023-24ರಲ್ಲಿ 44,581 ಇದ್ದದ್ದು, 2024-25ರಲ್ಲಿ 62,664ಕ್ಕೆ ಹಾಗೂ 2025-26ರಲ್ಲಿ 66,606ಕ್ಕೆ ಏರಿಕೆಯಾಗಿದೆ. ನೋಂದಾಯಿತರಲ್ಲಿ 26-35 ವರ್ಷ ವಯೋಮಾನದವರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ನಂತರ 18-25 ವರ್ಷ ವಯೋಮಾನದವರು ಇದ್ದಾರೆ.

Representational image
ದೇಶದಲ್ಲಿ 24 ಲಕ್ಷ ಹೆಚ್ ಐವಿ ಪೀಡಿತರು! ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಲ್ಲಿ ಹೆಚ್ಚಿನ ಜನರಲ್ಲಿ ಏಡ್ಡ್ಸ್

ಎಂಎಸ್ ಎಂ ಸಮುದಾಯಕ್ಕಾಗಿ ಜಾರಿಗೊಳಿಸಲಾಗುವ ಈ ಕಾರ್ಯಕ್ರಮಗಳು ಎಚ್‌ಐವಿ ಹಾಗೂ ಇತರೆ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳ (STI) ತಡೆಗಟ್ಟುವಿಕೆಗೆ ಉದ್ದೇಶಿತ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಾಗಿವೆ.

ಎಂಎಸ್ ಎಂ ಸಮುದಾಯದಲ್ಲಿ ಎಚ್‌ಐವಿ ಮತ್ತು ಲೈಂಗಿಕ ಆರೋಗ್ಯದ ಕುರಿತು ಅರಿವಿನ ಕೊರತೆ ಹಾಗೂ ತಪ್ಪು ಕಲ್ಪನೆಗಳು ಇನ್ನೂ ಪ್ರಮುಖ ಸಮಸ್ಯೆಯಾಗಿವೆ. ಸುರಕ್ಷಿತ ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ಇಲ್ಲದೆ ಮತ್ತು ನಿಯಮಿತ ಎಚ್‌ಐವಿ ಪರೀಕ್ಷೆಯ ಮಹತ್ವ ಅರಿಯದೆ ಅನೇಕರು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಡೇಟಿಂಗ್ ಆ್ಯಪ್‌ಗಳ ಬಳಕೆ ಹೆಚ್ಚುತ್ತಿರುವುದರಿಂದ ಜನರು ಸುಲಭವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಸರಿಯಾದ ಮಾಹಿತಿ ಹಾಗೂ ತಡೆಗಟ್ಟುವ ಸೇವೆಗಳು ಎಲ್ಲರಿಗೂ ತಲುಪುವಂತೆ ನಿರಂತರ ಜಾಗೃತಿ ಮತ್ತು ಸಂಪರ್ಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಕೆಎಸ್‌ಎಪಿಎಸ್ ಯೋಜನಾ ನಿರ್ದೇಶಕಿ ಪದ್ಮ ಬಸವಂತಪ್ಪ ತಿಳಿಸಿದ್ದಾರೆ.

ಅವರು ರಾಜ್ಯದಲ್ಲಿ ಎಂಎಸ್ ಎಂ ಸೇರಿದಂತೆ ಎಲ್ಲ ವರ್ಗಗಳನ್ನು ಸೇರಿಸಿ ಪ್ರತಿ ವರ್ಷ ಸುಮಾರು 12,000 ರಿಂದ 13,000 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದ್ದಾರೆ.

ಎಂಎಸ್ ಎಂ, ಟ್ರಾನ್ಸ್‌ಜೆಂಡರ್‌ಗಳು, ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ವಲಸೆ ಕಾರ್ಮಿಕರು ಹಾಗೂ ಲಾರಿ ಚಾಲಕರಂತಹ ಪ್ರಮುಖ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳು (NGO) ಎಚ್‌ಐವಿ ತಡೆಗಟ್ಟುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಪ್ರತಿ ವರ್ಷ ತಮ್ಮ ವ್ಯಾಪ್ತಿಯಲ್ಲಿರುವ ಜನರ ಸಂಖ್ಯೆಯನ್ನು 25 ಶೇಕಡಾ ಹೆಚ್ಚಿಸುವ ಗುರಿಯನ್ನು ಎನ್‌ಜಿಒಗಳಿಗೆ ನೀಡಲಾಗುತ್ತದೆ ಎಂದು ಪದ್ಮ ಬಸವಂತಪ್ಪ ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳಡಿ ವ್ಯಕ್ತಿಗಳಿಗೆ ಕಾಂಡೋಮ್‌ಗಳನ್ನು ವಿತರಿಸಲಾಗುತ್ತದೆ, ಸುರಕ್ಷಿತ ಲೈಂಗಿಕ ಜೀವನದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ, ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಲಿಂಗ ಮತ್ತು ಲೈಂಗಿಕ ವೈವಿಧ್ಯತೆ ಚಳವಳಿಯ ರಾಜ್ಯ ಸಮಿತಿ ಸದಸ್ಯ ಮನೋಹರ್ ಎಳವರ್ತಿ, ಯುವಜನರ ಸಂವಹನ ವಿಧಾನಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಐವಿ ಜಾಗೃತಿ ಕಾರ್ಯಕ್ರಮಗಳೂ ಅದಕ್ಕೆ ಅನುಗುಣವಾಗಿ ರೂಪುಗೊಳ್ಳಬೇಕು ಎಂದು ಹೇಳಿದ್ದಾರೆ.

ಯುವಕರನ್ನು ದೂಷಿಸುವ ಬದಲು, ಅವರು ಪ್ರತಿದಿನ ಬಳಸುವ ಡಿಜಿಟಲ್ ವೇದಿಕೆಗಳ ಮೂಲಕ ಪರಿಣಾಮಕಾರಿಯಾಗಿ ತಲುಪುವ ಮಾರ್ಗಗಳನ್ನು ಸರ್ಕಾರ ಕಂಡುಹಿಡಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಅಂಡ್ ಟೆಸ್ಟಿಂಗ್ ಸೆಂಟರ್‌ಗಳ (ICTC) ಉಪ ನಿರ್ದೇಶಕ ಹನುಮಂತ ರಾಯಪ್ಪ, ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದ ಕಾರಣ ಅನೇಕರು ತಮ್ಮಲ್ಲಿ ಎಚ್‌ಐವಿ ಸೋಂಕು ಇರುವುದನ್ನು ಅರಿಯದೇ ಇರುತ್ತಾರೆ ಎಂದು ಹೇಳಿದ್ದಾರೆ.

ಅವರು Break Free App ಬಳಕೆ ಮಾಡುವಂತೆ ಹಾಗೂ ಕರ್ನಾಟಕದ ICTC ಕೇಂದ್ರಗಳಲ್ಲಿ ಉಚಿತ ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆಯೂ ಲಭ್ಯವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com