ಹೊಸ ಸಚಿವಾಲಯ ಪ್ರಜಾಪ್ರಭುತ್ವದ ಹೃದಯವಾಗಲಿ: ಒಂದು ಆಡಳಿತಾತ್ಮಕ ನೋಟ

ಪ್ರಜಾಪ್ರಭುತ್ವದ ಬಹುದೊಡ್ಡ ಅಪೇಕ್ಷೆ ಏನೆಂದರೆ ನಾಯಕನಾದವನಿಗೆ ಶ್ರೀಸಾಮಾನ್ಯನ ಸಂಕಷ್ಟಗಳನ್ನು ಆಲಿಸುವ ಕಾಳಜಿ ಇರಬೇಕು ಮತ್ತು ಸ್ಪಂದಿಸುವ ಹೃದಯವಿರಬೇಕು.
Vidhana Saudha
ವಿಧಾನ ಸೌಧ
Updated on

ಲೇಖನ: ಡಾ. ಜಗದೀಶ್ ಬಿದರಕೊಪ್ಪ

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಸರ್ಕಾರ ಎಂಬ ಅಬ್ರಾಂ ಲಿಂಕನ್ನರವರ ಮಾತಿನಂತೆ ಪ್ರಜೆಗಳ ಸಂಕಷ್ಟಗಳನ್ನು ಪರಿಹರಿಸುವ ಕಾರ್ಯವನ್ನು ಮಾಡುವ ಜವಾಬ್ದಾರಿ, ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಇರುತ್ತದೆ. ಸರ್ಕಾರವೆಂದರೆ ಕೇವಲ ಆಡಳಿತವಲ್ಲ, ಸರ್ಕಾರವೆಂದರೆ ಶ್ರೀಸಾಮಾನ್ಯ ಸಂಕಷ್ಟಗಳನ್ನು ಆಲಿಸುವ ವ್ಯವಸ್ಥೆ. ಹಾಗೆಯೇ ಡಿ.ಕೆ ಶಿವಕುಮಾರ್ ಅವರ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಶ್ರೀಸಾಮಾನ್ಯನ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಕುಂದು ಕೊರತೆಗಳನ್ನು ಪರಿಹರಿಸಲು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ ಮತ್ತು ಭರವಸೆಯ ನಡೆ.. ಪ್ರಜಾಪ್ರಭುತ್ವದ ಬಹುದೊಡ್ಡ ಅಪೇಕ್ಷೆ ಏನೆಂದರೆ ನಾಯಕನಾದವನಿಗೆ ಶ್ರೀಸಾಮಾನ್ಯನ ಸಂಕಷ್ಟಗಳನ್ನು ಆಲಿಸುವ ಕಾಳಜಿ ಇರಬೇಕು ಮತ್ತು ಸ್ಪಂದಿಸುವ ಹೃದಯವಿರಬೇಕು. ಈ ನಿಟ್ಟಿನಲ್ಲಿ ನೋಡಿದಾಗ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರವರ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದೂರು, ದುಮ್ಮಾನ, ಸಂವಿಧಾನ ಬದ್ಧ ಬೇಡಿಕೆಗಳನ್ನು ಹೊತ್ತು ರಾಜ್ಯದ ಮೂಲೆ ಮೂಲೆಗಳಿಂದ ಬರುವ ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸುವ ಆಡಳಿತಾತ್ಮಕವಾಗಿ, ಪ್ರಜಾಸತ್ತಾತ್ಮಕವಾಗಿ ಇಂಥದೊಂದು ವ್ಯವಸ್ಥಿತ ಕಾರ್ಯವಿಧಾನ ತೀರ ಅಗತ್ಯವಿತ್ತು.

ಸಚಿವಾಲಯದ ಕಾರ್ಯವಿಧಾನ ಹೀಗಿರಬೇಕು?

ಈ ಸಚಿವಾಲಯವು ಎಲ್ಲಾ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಏಕೆಂದರೆ ಸಾರ್ವಜನಿಕ ಕುಂದು ಕೊರತೆಗಳು ಒಂದು ಇಲಾಖೆಗೆ ಸೀಮಿತವಾಗಿರುವುದಿಲ್ಲ, ಸಾಮಾನ್ಯವಾಗಿ ಎಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಶ್ರೀಸಾಮಾನ್ಯನ ಸಮಸ್ಯೆಗಳು ಇರುತ್ತವೆ. ಈ ನೂತನ ಸಚಿವಾಲಯ ಕೇವಲ ಒಂದು ಆಡಳಿತಾತ್ಮಕ ವಿಭಾಗವಾಗಿ ಉಳಿಯದೆ ಜನರ ಭರವಸೆಯ ಪ್ರಜಾಪ್ರಭುತ್ವದ ಕೇಂದ್ರವಾಗಿ ಸರ್ಕಾರ ಮತ್ತು ಶ್ರೀಸಾಮಾನ್ಯನ, ಜನರ ನಂಬಿಕಸ್ತ ಕೊಂಡಿಯಾಗಿ ಕೆಲಸ ಮಾಡಬೇಕಾಗಿದೆ.

ಮುಖ್ಯಮಂತ್ರಿಯ ನಿಯಂತ್ರಣದಲ್ಲಿ ಇರುವುದು ಸೂಕ್ತ

ಮುಖ್ಯಮಂತ್ರಿಗಳದ ಡಿ ಕೆ ಶಿವಕುಮಾರ್ ರವರು ಸಚಿವರೊಬ್ಬರಿಗೆ ಈ ಸಚಿವಾಲಯದ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದ್ದಾರೆ ಆದರೆ ಆಡಳಿತಾತ್ಮಕವಾಗಿ ಎಲ್ಲಾ ಇಲಾಖೆಗಳು ಸಂಪುಟ ದರ್ಜೆಯ ಮಂತ್ರಿಗಳು ನಿರ್ವಹಿಸುವುದರಿಂದ ಕುಂದು ಕೊರತೆಯ ನಿವಾರಿಸುವ ಸಚಿವಾಲಯ ಸಂಪುಟ ದರ್ಜೆ ಮಂತ್ರಿಯಾದರೆ ಇದರ ನಿರ್ದೇಶನಗಳನ್ನ ಪಾಲಿಸಲು ಇನ್ನೊಬ್ಬ ಸಂಪುಟ ದರ್ಜೆ ಮಂತ್ರಿಗೆ ಮುಜುಗರ ಉಂಟಾಗಬಹುದು. ಹಾಗೆಯೇ ಈ ಸಚಿವಾಲಯಕ್ಕೆ ಪ್ರಾಮುಖ್ಯತೆ ಕೊಡುವುದರೊಂದಿಗೆ. ಪ್ರಜಾಪ್ರಭುತ್ವದ ಘನತೆ, ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದುಕೊಳ್ಳಬಹುದಾಗಿದೆ.

ಜನತಾ ದರ್ಶನದ/ಜನಸ್ಪಂದನದ ಮಾದರಿ

ಈ ಹಿಂದೆ ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಮುಖ್ಯಮಂತ್ರಿಗಳ ಜನತಾದರ್ಶನಕ್ಕೆಹೆಚ್ಚು ಜನರು ಭಾಗವಹಿಸಿ ಗಂಟೆಗಟ್ಟಲೆ ಕಾಯುತ್ತಿದ್ದರು ಮುಂದುವರೆದಂತೆ ಇದನ್ನು ಜಿಲ್ಲಾ ಮಟ್ಟಕ್ಕೆ ಜನಸ್ಪಂದನ ಕಾರ್ಯಕ್ರಮವಾಗಿ ವಿಸ್ತರಿಸಿದರೂ ಜನರ ಸಮಸ್ಯೆಗಳ ಪ್ರಮಾಣ ಕಡಿಮೆಯಾಗಲಿಲ್ಲ. ಈಗಲೂ ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಕೆಲಸಗಳನ್ನು ಅಧಿಕಾರಿ ವರ್ಗದವರು ತಮ್ಮ ಹಂತದಲ್ಲಿ ಹೇಗೆ? ಪರಿಹರಿಸಬೇಕೆಂಬುದು, ಆಡಳಿತಾತ್ಮಕ ನಿರ್ದೇಶನದ ಕೊರತೆ ಎದ್ದು ಕಾಣುತ್ತದೆ ಮತ್ತು ಒಬ್ಬ. ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯ ಗೊಂದಲದಲ್ಲಿ ಅನೇಕ ಸಮಸ್ಯೆಗಳು ಹಾಗೆಯೇ ಉಳಿದುಬಿಡುತ್ತವೆ. ಆದ್ದರಿಂದ ಶ್ರೀಸಾಮಾನ್ಯನ ಅಲೆದಾಟ ಕಡತಗಳ ವಿಲೇವಾರಿಯಲ್ಲಿ ವಿಳಂಬ ತಪ್ಪುತಿಲ್ಲ.

ಸೂಕ್ತ ಆಡಳಿತಾತ್ಮಕ ಮಾರ್ಗದರ್ಶನ ಅಗತ್ಯ

ಪ್ರಜಾಪ್ರಭುತ್ವದಲ್ಲಿ ಆಡಳಿತದಲ್ಲಿ ಇದ್ದವರಿಗೆ ಕೇವಲ ಜನರ ಸಮಸ್ಯೆಗಳನ್ನು ಆಲಿಸುದಷ್ಟೇ ಕೆಲಸವಲ್ಲ ಜನರಿಗೆ ಸೂಕ್ತ ತಿಳುವಳಿಕೆ ಮತ್ತು ಆಡಳಿತಾತ್ಮಕವಾಗಿ ಹೇಗೆ? ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂಬ ಸೂಕ್ತ ಮಾರ್ಗದರ್ಶನ ನೀಡಲು ಮೇಲು ಹಂತದ ಆಡಳಿತ ವರ್ಗದಿಂದ ಆಡಳಿತಾತ್ಮಕ ಸಾಕ್ಷರತೆಯ ಮಾರ್ಗದರ್ಶನ ಇದ್ದರೆ ಆಡಳಿತದ ವೇಗಗತಿಯನ್ನು ಹೆಚ್ಚಿಸಿ ಜನರ ದೂರು, ಸಂಕಷ್ಟಗಳನ್ನು ವಿಳಂಬವಿಲ್ಲದೆ ಬಗೆಹರಿಸಬಹುದು. ಹಾಗೆಯೇ ಇದು ಉತ್ತಮ ಆಡಳಿತದ ಪದ್ಧತಿಯು ಎನಿಸಿಕೊಳ್ಳುತ್ತದೆ.

ಕಾನೂನು ಬದ್ಧ ಪರಿಶೀಲನೆ

ಈ ಸಚಿವಾಲಯದಲ್ಲಿ ಉನ್ನತ ಹಂತದ ಅಧಿಕಾರಿ ವರ್ಗ ಇರುವುದರಿಂದ ಜನರ ಸಮಸ್ಯೆಗಳು, ಸಂವಿಧಾನ ಹಾಗೂ.ಕಾನೂನು ಬದ್ಧ ಇವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಕೆಳಹಂತದ ಅಧಿಕಾರಿ ವರ್ಗದವರಿಗೆ ನಿರ್ದೇಶನ ನೀಡಲು ಮತ್ತು ಕೆಳಹಂತದ ಅಧಿಕಾರಿ ವರ್ಗದವರು ಶ್ರೀಸಾಮಾನ್ಯನ ಮತ್ತು ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಆಡಳಿತಾತ್ಮಕ ತಿಳುವಳಿಕೆ ಉಂಟಾಗಿ ಕಡತಗಳನ್ನು ಶೀಘ್ರ ವಿಲೇವಾರಿಗೆ ಅನುಕೂಲವಾಗುತ್ತದೆ.

ಹೊಸ ಸರ್ಕಾರದ ಮೇಲೆ ಹೆಚ್ಚು ನಿರೀಕ್ಷೆ

ಹೊಸ ಸರ್ಕಾರದ ಮುಂದೆ ಸವಾಲುಗಳು ಇವೆ ಹಾಗೆಯೇ ನಿರೀಕ್ಷೆಗಳ ಬಾರವು ಇವೆ. ಕಲ್ಯಾಣ್ ಕರ್ನಾಟಕ, ಕಿತ್ತೂರ ಕರ್ನಾಟಕ, ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಸಮಾನ ಅಭಿವೃದ್ಧಿಗೆ ಮತ್ತು ಒತ್ತು ನೀಡುವ ಕೆಲಸ ಆಗಬೇಕಿದೆ. ಮತ್ತು ಆಯಾ ಭಾಗದ ಸಾರ್ವಜನಿಕ ಮತ್ತು ಶ್ರೀಸಾಮಾನ್ಯನ ಸಂಕಷ್ಟಗಳನ್ನು ಅರಿತುಕೊಳ್ಳಬೇಕಾಗಿದೆ.

ಉದ್ಯೋಗ ಸೃಷ್ಟಿಗೆ ಗಮನ

ರಾಜ್ಯದ ವಿದ್ಯಾವಂತ ಶ್ರೀಸಾಮಾನ್ಯನ ಪ್ರಮುಖ ಸಮಸ್ಯೆ ಏನೆಂದರೆ ವಿದ್ಯಾರ್ಹತೆ ತಕ್ಕಂತೆ ಉದ್ಯೋಗ ದೊರಕದಿರುವುದು. ಹಾಗೆಯೇ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಲು ಈ ಸಚಿವಾಲಯ ಸೂಕ್ತ ಮಾರ್ಗದರ್ಶನ ನೀಡಬೇಕಾಗುತ್ತದೆ.

ರಾಜ್ಯದ ಶ್ರೀಸಾಮಾನ್ಯ ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳು

ಆರ್ಥಿಕ ಮತ್ತು ಜೀವನೋಪಾಯದ ಸಮಸ್ಯೆಗಳು, ಹೆಚ್ಚುತ್ತಿರುವ ಬೆಲೆ ಏರಿಕೆ, ಉದ್ಯೋಗಾವಕಾಶದ ಕೊರತೆಯಿಂದ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೆಚ್ಚುತ್ತಿದ್ದು ಸೂಕ್ತ ಉದ್ಯೋಗ ಸಿಗದೇ ಯುವಕರು ಸಂಕಷ್ಟ ಎದುರಿಸುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ತೀವ್ರ ಅಬಾವ ಉಂಟಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಕಳಪೆ ರಸ್ತೆಗಳು ಮತ್ತು ಸಾರಿಗೆ ಬಸ್ಸುಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ತೊಂದರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ವಿಳಂಬ ಹಾಗೂ ಸಣ್ಣ ಪುಟ್ಟ ಕೆಲಸಗಳಿಗೂ ಲಂಚ ನೀಡುವ ಪರಿಸ್ಥಿತಿ, ಕೃಷಿ ಭೂಮಿ, ಈಖಾತಾ ಮತ್ತು ಜಮೀನು ವಿವಾದಿಗಳಿಗೆ ಸಂಬಂಧಿಸಿದಂತೆ ತಾಲೂಕು ಮತ್ತು ಕಂದಾಯ ಕಚೇರಿಗಳಲ್ಲಿ ಸಾರ್ವಜನಿಕರು ನಿರಂತರವಾಗಿ ಅಲೆದಾಡಬೇಕಾಗುತ್ತದೆ, ಆಸ್ಪತ್ರೆಗಳ ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷಣದ ಗುಣಮಟ್ಟ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ,ದುಬಾರಿ ಶುಲ್ಕಗಳು ಪೋಷಕರಿಗೆ ಆರ್ಥಿಕ ಹೊರೆಯಾಗಿ ಪರಿಗಣಿಸಿವೆ, ಅನಾವೃಷ್ಟಿ, ಅಕಾಲಿಕ ಪ್ರವಾಹಗಳಿಂದ ರೈತರು ಬೆಳೆ ಕಳೆದುಕೊಂಡು ಸಾಲದ ಸುಲಿಗೆ ಸಿಲುಕುವುದು ರಾಜ್ಯದಲ್ಲಿ ನಿರಂತರ ಸಮಸ್ಯೆಯಾಗಿದೆ, ಇವೆಲ್ಲಾ ಸಮಸ್ಯೆಗೆ ಹೊಸ ಸಚಿವಾಲಯ ಶ್ರಮಿಸಬೇಕಾಗಿದೆ.

ಅನುಭವಿ ಮಂತ್ರಿಮಂಡಲ

ಹೊಸ ಸರ್ಕಾರದಲ್ಲಿ ಬಹುತೇಕ ಮಂತ್ರಿಗಳು ಬಹಳಷ್ಟು ರಾಜಕೀಯ, ಆಡಳಿತಾತ್ಮಕ ಅನುಭವವನ್ನು ಹೊಂದಿದವರು ಇದ್ದಾರೆ ಈ ಅನುಭವ ಪಡೆ ರಾಜ್ಯದ ಶ್ರೀಸಾಮಾನ್ಯನ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಬದ್ಧತೆ ತೋರುತ್ತಾರೆ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿದೆ

ಈ ಹೊಸ ಸಚಿವಾಲಯವು ಸಾಮಾನ್ಯ ಆಡಳಿತ ವಿಭಾಗವಾಗಿ ಉಳಿಯಿದೆ ಪ್ರಜಾಪ್ರಭುತ್ವದ ಬಹುದೊಡ್ಡ ನಂಬಿಕಸ್ತ ವಿಭಾಗವಾಗಿ ಜನರ ಕಣ್ಣೀರು ಒರೆಸುವ ಜನತಾ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲಿ ಎಂಬುದೇ ಜನತೆಯ ಬಯಕೆ.

ಡಾ. ಜಗದೀಶ್ ಬಿದರಕೊಪ್ಪ

ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ

ಇಮೇಲ್: jagadishbidarakoppa@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com