

ಶಿವಮೊಗ್ಗ: ಜೈಲಿನಲ್ಲಿರುವ ವ್ಯಕ್ತಿಯೊಬ್ಬ ತನ್ನ ಪತ್ನಿ ಕೊಲೆಗೆ ಸುಪಾರಿ ನೀಡಿದ್ದು, ಸುಪಾರಿ ಪಡೆದ ಆತನ ಸಹಚರರು ಬುರ್ಖಾ ಧರಿಸಿ ಮಹಿಳೆ ಹತ್ಯೆಗೆ ಸಂಚು ರೂಪಿಸಿಕೊಂಡು ಬಂದಿದ್ದ ಮೂವರು ಯುವಕರನ್ನು ಸಾರ್ವಜನಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಆಘಾತಕಾರಿ ಘಟನೆ ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆಯಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ಕೊಲೆ ಪ್ರಕರಣವೊಂದರಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿರುವ ವ್ಯಕ್ತಿ ತನ್ನ ಪತ್ನಿ ಕೊಲೆಗೆ ಸುಪಾರಿ ನೀಡಿದ್ದು, ಆತನ ಸಹಚರರಾದ ಅಸ್ಲಾಂ(25), ಮಹೇಶ್ (20), ದರ್ಶನ್ (20) ಮತ್ತು ಮುನ್ನಾ(24) ಎಂಬ ನಾಲ್ವರು ಯುವಕರು ತಮ್ಮ ಗುರುತು ಮರೆಮಾಚಲು ಬುರ್ಖಾ ಧರಿಸಿ ಕೆ.ಆರ್. ಪುರಂನಲ್ಲಿರುವ ಮಹಿಳೆಯ ಮನೆ ಬಳಿ ಬಂದಿದ್ದಾರೆ.
ಆದರೆ, ಇವರ ವಿಚಿತ್ರ ನಡವಳಿಕೆ ಮತ್ತು ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ತಡಮಾಡದ ಸಾರ್ವಜನಿಕರು ಒಟ್ಟಾಗಿ ನಾಲ್ವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಪಾಸಣೆ ನಡೆಸಿದಾಗ ಬುರ್ಖಾ ಒಳಗಿದ್ದ ಗಂಡಸರ ಅಸಲಿ ಮುಖವಾಡ ಬಯಲಾಗಿದ್ದು, ಇದರಿಂದ ಕೆರಳಿದ ಸಾರ್ವಜನಿಕರು ನಾಲ್ವರಿಗೂ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಗಲಾಟೆಯ ನಡುವೆ ಮುನ್ನಾ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಉಳಿದ ಮೂವರು ಆರೋಪಿಗಳಾದ ಅಸ್ಲಾಂ, ಮಹೇಶ್ ಮತ್ತು ದರ್ಶನ್‌ನನ್ನು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ ಎಂದು ಕುಟುಂಬದವರು ಹೇಳಿದ್ದಾರೆ. ಬುರ್ಖಾ ಧರಿಸಿ ಇಂತಹ ಅಪರಾಧ ಕೃತ್ಯಗಳಿಗೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಪತ್ನಿ ತನ್ನನ್ನು ನೋಡಲು ಜೈಲಿಗೆ ಬರುತ್ತಿಲ್ಲ ಮತ್ತು ಖರ್ಚಿಗೆ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಜೈಲಿನಲ್ಲಿರುವ ಪತಿ, ತನ್ನ ಪತ್ನಿ ತಬಸ್ಸುಮ್ ಬಾನು ವಿರುದ್ಧ ತೀವ್ರ ಆಕ್ರೋಶಗೊಂಡಿದ್ದನು. ಸೇಡು ತೀರಿಸಿಕೊಳ್ಳಲು ಜೈಲಿನಿಂದಲೇ ತನ್ನ ಸಹಚರರಿಗೆ ಪತ್ನಿಗೆ ಹತ್ಯೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
Advertisement