'ಇಬ್ಬರೂ ಪರಸ್ಪರ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ': ರೋಹಿಣಿ ಸಿಂಧೂರಿ-ರೂಪಾ ಮೌದ್ಗಿಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ 'ಸುಪ್ರೀಂ' ಮಧ್ಯಂತರ ತಡೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ ದೇವ ಅವರ ಪೀಠವು, ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
Rohini Sindhuri IAS-Roopa Moudgil IPS
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
Updated on

ನವದೆಹಲಿ: ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ದೀರ್ಘಕಾಲದ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಶುಕ್ರವಾರ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ (Justice Satish Chandra Sharma) ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ ದೇವ (Justice Sanjeev Sachdeva) ಅವರ ಪೀಠವು, ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಈ ಅರ್ಜಿಯಲ್ಲಿ, ಡಿ. ರೂಪಾ ಮೌಡ್ಗಿಲ್ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪನ್ನು ರದ್ದುಪಡಿಸುವಂತೆ ಕೋರಲಾಗಿತ್ತು.

ಈ ಪ್ರಕರಣವು 2023ರಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಸಾರ್ವಜನಿಕವಾಗಿ ನಡೆದ ವಾಗ್ವಾದ ಮತ್ತು ಆರೋಪ-ಪ್ರತ್ಯಾರೋಪಗಳಿಂದ ಆರಂಭವಾಗಿತ್ತು. ವಿಚಾರಣೆಯ ವೇಳೆ ಈ ದೀರ್ಘಕಾಲದ ಕಲಹದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಈ ನ್ಯಾಯಾಂಗ ಹೋರಾಟ ಮುಂದುವರಿದರೆ ಇಬ್ಬರ ವೃತ್ತಿಜೀವನಕ್ಕೂ ಹಾನಿಯಾಗಬಹುದು ಎಂದು ಎಚ್ಚರಿಸಿತು.

Rohini Sindhuri IAS-Roopa Moudgil IPS
ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್; 'ಹೈ' ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ..!

“ಇಬ್ಬರೂ ಅತ್ಯುತ್ತಮ ಅಧಿಕಾರಿಗಳು. ಪರಸ್ಪರರ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಹುದು ಎಂಬುದು ನ್ಯಾಯಾಲಯದ ಅಭಿಪ್ರಾಯ,” ಎಂದು ನ್ಯಾಯಪೀಠ ತಿಳಿಸಿತು.

ಅಲ್ಲದೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯವರ್ತಿಯಾಗಿ ನೇಮಿಸಲಾಗಿದೆ. ಕಕ್ಷಿದಾರರು ಅವರ ಮುಂದೆ ಹಾಜರಾಗಬೇಕು. ಮಧ್ಯಂತರ ಕ್ರಮವಾಗಿ ಎರಡೂ ಪ್ರಕರಣಗಳ ಮುಂದಿನ ವಿಚಾರಣೆಗೆ ತಡೆ ನೀಡಲಾಗಿದೆ’ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?

2023ರ ಫೆಬ್ರುವರಿ 18ರಂದು ರೂಪಾ ಮೌದ್ಗಿಲ್ ಅವರು ಫೇಸ್ಬುಕ್ ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಜಾಲಹಳ್ಳಿಯಲ್ಲಿರುವ ಬಂಗಲೆಯನ್ನು ಆಸ್ತಿ ವಿವರಗಳಲ್ಲಿ ಬಹಿರಂಗಪಡಿಸಿಲ್ಲ ಎಂದು ಅವರು ಆರೋಪಿಸಿದ್ದರು.

ಇದಾದ ಬಳಿಕ, ತನ್ನ ವಿರುದ್ಧ ಸುಳ್ಳು ಮತ್ತು ಮಾನನಷ್ಟಕರ ಹೇಳಿಕೆಗಳನ್ನು ನೀಡದಂತೆ ಕೋರಿ ಸಿಂಧೂರಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿಯಲ್ಲಿ ಖಾಸಗಿ ಕ್ರಿಮಿನಲ್ ದೂರನ್ನೂ ದಾಖಲಿಸಿದ್ದರು. ಈ ಪ್ರಕರಣಗಳನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಹೈಕೋರ್ಟ್ ಹಾಗೂ ಬಳಿಕ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು.

Rohini Sindhuri IAS-Roopa Moudgil IPS
ದಾಖಲೆ ಕಳವು ಆರೋಪ: IPS ಅಧಿಕಾರಿ‌ ರೂಪಾ ಮೌದ್ಗಿಲ್ ವಿರುದ್ಧ DIG ವರ್ತಿಕಾ ದೂರು

ಆ ವೇಳೆ ರಾಜಿ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿದ್ದ ಮಾನನಷ್ಟಕರ ಪೋಸ್ಟ್ಗಳನ್ನು ಅಳಿಸುವಂತೆ ಮೌದ್ಗಿಲ್ ಅವರಿಗೆ ನಿರ್ದೇಶಿಸಿತ್ತು. ಬಳಿಕ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿತ್ತು.

ಆದರೆ, 2024ರ ಡಿಸೆಂಬರ್ 9ರಂದು ಮೌದ್ಗಿಲ್ ಹೊಸ ದೂರು ದಾಖಲಿಸಿ, ಸಿಂಧೂರಿ ಅವರು ತಮ್ಮನ್ನು ಮಾನಸಿಕವಾಗಿ ಅಸ್ವಸ್ಥರೆಂದು ಬಿಂಬಿಸುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ಪ್ರಕರಣ ದಾಖಲಿಸಿಕೊಂಡು ಸಿಂಧೂರಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com