

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕಿಂತ ಓಪನ್ ಸ್ಕೂಲಿಂಗ್ (ಮುಕ್ತ ಶಿಕ್ಷಣ) ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಕರ್ನಾಟಕದಲ್ಲಿ ವೇಗವಾಗಿ ಹೆಚ್ಚುತ್ತಿದೆ.
ವಿಶೇಷವಾಗಿ ಕ್ರಿಕೆಟ್‌ನಲ್ಲಿ ಯುವ ಪ್ರತಿಭೆಗಳಾದ ವೈಭವ್ ಸೂರ್ಯವಂಶಿ ಹಾಗೂ ನಿಕಿ ಪ್ರಸಾದ್ ಅವರ ಸಾಧನೆಗಳು ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರ ಚಿಂತನೆಗೆ ಹೊಸ ದಿಕ್ಕು ನೀಡಿವೆ.
ಈ ಹಿಂದೆ ಕ್ರೀಡೆಯಲ್ಲಿ ಸಾಧನೆ ಮಾಡಲು ಶಾಲಾ ತಂಡಗಳಲ್ಲಿ ಆಡಿ, ಜಿಲ್ಲೆ-ರಾಜ್ಯ ಮಟ್ಟಕ್ಕೆ ಏರುವುದು ಸಾಮಾನ್ಯ ಮಾರ್ಗವಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಪರ ತರಬೇತಿ ಪಡೆಯುತ್ತಿರುವ ಯುವ ಕ್ರೀಡಾಪಟುಗಳು ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿಡಬೇಕಾಗಿರುವುದರಿಂದ, ನಿಯಮಿತ ಶಾಲಾ ಶಿಕ್ಷಣವು ಅವರಿಗೆ ಅಡ್ಡಿಯಾಗುತ್ತಿದೆ ಎಂಬ ಅಭಿಪ್ರಾಯ ಹೆಚ್ಚಾಗಿದೆ.
ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಸೇರಿದಂತೆ ವಿವಿಧ ಓಪನ್ ಸ್ಕೂಲಿಂಗ್ ವ್ಯವಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.
ಎನ್‌ಐಒಎಸ್‌ನ ಪ್ರಾದೇಶಿಕ ನಿರ್ದೇಶಕ ಆರ್. ಸ್ವಾಮಿನಾಥನ್ ಅವರು ಮಾತನಾಡಿ, ಕಳೆದ ವರ್ಷ ಕರ್ನಾಟಕದಲ್ಲಿ ಸುಮಾರು 4,600 ವಿದ್ಯಾರ್ಥಿಗಳು ಎನ್‌ಐಒಎಸ್‌ಗೆ ಪ್ರವೇಶ ಪಡೆದಿದ್ದರೆ, ಈ ವರ್ಷ ಈಗಾಗಲೇ 10,000ಕ್ಕೂ ಹೆಚ್ಚು ಪ್ರವೇಶಾತಿಗಳು ದಾಖಲಾಗಿವೆ. ಅಂದರೆ ಕೇವಲ ಒಂದು ವರ್ಷದಲ್ಲಿ ಸುಮಾರು 120 ಶೇಕಡಾ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಈ ಬದಲಾವಣೆಗೆ ಪ್ರಮುಖ ಕಾರಣಗಳಲ್ಲಿ ಒಂದು ವೈಭವ್ ಸೂರ್ಯವಂಶಿ ಅವರ ತರಬೇತಿ ಕ್ರಮವಾಗಿದೆ. ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಅಭ್ಯಾಸ ನಡೆಸುವ ಅವರ ಶಿಸ್ತು ಮತ್ತು ಸಾಧನೆ ಯುವ ಕ್ರಿಕೆಟಿಗರನ್ನು ಆಕರ್ಷಿಸಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರ ತರಬೇತಿ ಪಡೆಯಲು ಸಾಮಾನ್ಯ ಶಾಲಾ ವೇಳಾಪಟ್ಟಿಯಲ್ಲಿ ಸಾಧ್ಯವಾಗುವುದಿಲ್ಲ ಎಂಬುದು ಅನೇಕ ಪೋಷಕರ ಅಭಿಪ್ರಾಯವಾಗಿದೆ.
ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುತ್ತಿರುವ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಕನಸನ್ನು ಸಾಕಾರಗೊಳಿಸಲು ಎನ್‌ಐಒಎಸ್ ಆಯ್ಕೆ ಮಾಡಿಕೊಂಡಿದ್ದಾಳೆ. ಭಾರತದ ಅಂಡರ್-19 ತಂಡದಲ್ಲಿ ಆಡುವ ಗುರಿಯನ್ನು ಈಕೆ ಹೊಂದಿದ್ದಾಳೆ.
ಬಾಲಕಿಯ ತಂದೆ ಮಾತನಾಡಿ, “ಆರಂಭದಲ್ಲಿ ಇದು ತುಂಬಾ ಕಷ್ಟದ ನಿರ್ಧಾರವಾಗಿತ್ತು. ಆದರೆ, ಮಗಳ ಪ್ರತಿಭೆ ಮತ್ತು ಕೋಚ್‌ಗಳ ಸಲಹೆಯನ್ನು ಗಮನಿಸಿ ಓಪನ್ ಸ್ಕೂಲಿಂಗ್ ಆಯ್ಕೆ ಮಾಡಿಕೊಂಡೆವು. ಈಗ ವೈಭವ್ ಸೂರ್ಯವಂಶಿ ಮತ್ತು ನಿಕಿ ಪ್ರಸಾದ್ ಅವರ ಸಾಧನೆ ನೋಡಿದಾಗ ನಮ್ಮ ನಿರ್ಧಾರ ಸರಿಯಾಗಿದೆ ಎನ್ನಿಸುತ್ತಿದೆ,” ಎಂದು ಹೇಳಿದ್ದಾರೆ.
ಅಂಡರ್-19 ಲೀಗ್‌ನಲ್ಲಿ ಆಡುತ್ತಿರುವ ಮತ್ತೊಬ್ಬ ಯುವ ಕ್ರಿಕೆಟಿಗ ಮಾತನಾಡಿ, “ಶಾಲಾ ಶಿಕ್ಷಣದ ಜೊತೆಗೆ ದೀರ್ಘ ಸಮಯ ಅಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಓಪನ್ ಸ್ಕೂಲಿಂಗ್‌ಗೆ ಬಂದ ನಂತರ ಅಭ್ಯಾಸದ ಸಮಯ ಹೆಚ್ಚಾಗಿದೆ. ಇದರ ಪರಿಣಾಮವಾಗಿ ನನ್ನ ಆಟದ ಮಟ್ಟವೂ ಸುಧಾರಿಸಿದೆ, ಓದಿನಲ್ಲಿಯೂ ಉತ್ತಮ ಅಂಕಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾನೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಗೌರವ ಕಾರ್ಯದರ್ಶಿ ಎ. ಶಂಕರ್ ಅವರು ಮಾತನಾಡಿ, ರಾಜ್ಯದಲ್ಲಿ ಪೂರ್ಣಕಾಲಿಕ ಕ್ರಿಕೆಟ್ ವೃತ್ತಿಜೀವನದತ್ತ ಹೆಜ್ಜೆ ಇಡುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಅಥವಾ ಸ್ಮೃತಿ ಮಂದಾನಾ ಅವರಂತಹ ಹಿರಿಯ ಆಟಗಾರರು ಮಕ್ಕಳಿಗೆ ಸ್ಫೂರ್ತಿಯಾಗಿದ್ದರು.
ಈಗ ತಮ್ಮದೇ ವಯೋಮಾನದ ವೈಭವ್ ಸೂರ್ಯವಂಶಿ ಮತ್ತು ನಿಕಿ ಪ್ರಸಾದ್ ಅವರಂತಹ ಯುವ ಪ್ರತಿಭೆಗಳು ಮಾದರಿಯಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ 'ನಾವೂ ಸಾಧಿಸಬಹುದು' ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ," ಎಂದು ಹೇಳಿದ್ದಾರೆ.
ಈ ಹೊಸ ಪ್ರವೃತ್ತಿ ಕ್ರಿಕೆಟ್ ಕ್ಷೇತ್ರದ ಸಾಂಪ್ರದಾಯಿಕ ಮಾದರಿಯನ್ನೇ ಬದಲಾಯಿಸುತ್ತಿದೆ. ಹಿಂದೆ ಶಾಲಾ ಕ್ರಿಕೆಟ್‌ನಲ್ಲಿ ಮಿಂಚಿದರೆ ಮಾತ್ರ ಮುಂದಿನ ಹಂತಗಳಿಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ಈಗ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ನೂರಾರು ಕ್ಲಬ್‌ಗಳು ಹಾಗೂ ಲೀಗ್ ಪಂದ್ಯಾವಳಿಗಳ ಮೂಲಕ ಪ್ರತಿಭಾವಂತ ಆಟಗಾರರನ್ನು ಗುರುತಿಸುವ ವ್ಯವಸ್ಥೆ ಬಲಗೊಂಡಿದೆ. ಇದರಿಂದ ಶಾಲಾ ತಂಡಗಳ ಅವಲಂಬನೆ ಕಡಿಮೆಯಾಗುತ್ತಿದೆ.
ಬೆಂಗಳೂರು ಮೂಲದ ಜವಾಹರ್ ಸ್ಪೋರ್ಟ್ಸ್ ಕ್ಲಬ್‌ನ ಆಡಳಿತಾಧಿಕಾರಿ ನಿಶೀತ್ ದೋಶಿ ಅವರು ಮಾತನಾಡಿ, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಓಪನ್ ಸ್ಕೂಲಿಂಗ್ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ ಈ ಪ್ರವೃತ್ತಿ ಮತ್ತಷ್ಟು ವೇಗ ಪಡೆಯುತ್ತಿದೆ. ಕ್ರೀಡೆಗೆ ಹೆಚ್ಚು ಸಮಯ ನೀಡುವ ಜೊತೆಗೆ ಶಿಕ್ಷಣವನ್ನೂ ಮುಂದುವರಿಸಬಹುದಾದ ಅವಕಾಶ ಇದರಲ್ಲಿ ಇರುವುದರಿಂದ ಹೆಚ್ಚಿನವರು ಈ ಮಾರ್ಗವನ್ನು ಆಯ್ಕೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.
ಆದರೆ, ಓಪನ್ ಸ್ಕೂಲಿಂಗ್ ಕೇವಲ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂಗೀತ, ನೃತ್ಯ, ರಂಗಭೂಮಿ, ಕಲಾ ಚಟುವಟಿಕೆಗಳು ಸೇರಿದಂತೆ ವಿವಿಧ ಪ್ರತಿಭೆಗಳನ್ನು ಬೆಳೆಸಿಕೊಳ್ಳುವ ವಿದ್ಯಾರ್ಥಿಗಳೂ ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಶಿಕ್ಷಕಿ ಬಿಂದು ಎಂ. ಅವರು ಮಾತನಾಡಿ, ಓಪನ್ ಸ್ಕೂಲಿಂಗ್ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಸಾಮಾನ್ಯ ಶಾಲಾ ಶಿಕ್ಷಣದಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದ ಕೆಲ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಈಗ 90ರಿಂದ 92 ಶೇಕಡಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದಾರೆ. ಇದರ ಜೊತೆಗೆ ಅವರ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಾಸವೂ ಉತ್ತಮವಾಗುತ್ತಿದೆ ಎಂದು ಹೇಳಿದ್ದಾರೆ.
ಒಟ್ಟಾರೆ, ಕ್ರೀಡೆ ಮತ್ತು ಶಿಕ್ಷಣವನ್ನು ಸಮತೋಲನಗೊಳಿಸುವ ಹೊಸ ಮಾರ್ಗವಾಗಿ ಓಪನ್ ಸ್ಕೂಲಿಂಗ್ ಹೊರಹೊಮ್ಮಿದ್ದು, ಕರ್ನಾಟಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸುಗಳ ಬೆನ್ನತ್ತಲು ಈ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಪ್ರವೃತ್ತಿ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಹಾಗೂ ಕ್ರೀಡಾ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
Advertisement