2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ: FSL ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್, ಪತ್ನಿ, ಆಕೆಯ ಲವರ್ ಸೇರಿ 9 ಮಂದಿ ಬಂಧನ

ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಮಾಜಿ ಸೈನಿಕ ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ದೊರೆತಿದ್ದು ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸುಮಾ, ಆಕೆಯ ಪ್ರಿಯಕರ ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Ex-Serviceman allegedly murdered for Rs 2 crore insurance claim
ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆTNIE
Updated on

ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಗಾವಿಯಲ್ಲಿ ವರದಿಯಾಗಿದ್ದು, ಮಾಜಿ ಯೋಧನ ಸ್ವಂತ ಪತ್ನಿಯೇ ಇನ್ಶುರೆನ್ಸ್ ಹಣಕ್ಕಾಗಿ ತನ್ನ ಲವರ್ ಜೊತೆ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು.. ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಗಳನ್ನೇ ಮೀರಿಸುವಂತ ಕೊಲೆಯೊಂದು ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ.

ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಮಾಜಿ ಸೈನಿಕ ಸಂದೀಪ್ ಸಾವಿಗೆ ಬಿಗ್ ಟ್ವಿಸ್ಟ್ ದೊರೆತಿದ್ದು ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸುಮಾ, ಆಕೆಯ ಪ್ರಿಯಕರ ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನು ಕೊಂದಿದ್ದು ಮಾತ್ರವಲ್ಲದೇ ಅದನ್ನು ಸಹಜ ಸಾವು ಎಂದು ಬಿಂಬಿಸಲು ಪತ್ನಿ ಸುಮಾ ಅಧಿಕಾರಿಗಳೊಂದಿಗೆ ಸೇರಿ ಎಫ್ಎಸ್ಎಲ್ ವರದಿಯನ್ನೇ ತಿರುಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

Ex-Serviceman allegedly murdered for Rs 2 crore insurance claim
ದಾವಣಗೆರೆಯಲ್ಲಿ 18 ಸಿಲಿಂಡರ್‌ಗಳ ಸ್ಫೋಟ: ಇಬ್ಬರಿಗೆ ಗಾಯ, ಅನಿಲ್ ಎಂಬಾತನ ಸ್ಥಿತಿ ಚಿಂತಾಜನಕ!

ವಿಮೆ ಹಣಕ್ಕಾಗಿ ಕೊಲೆ ಸಂಚು

ಮೂಲಗಳ ಪ್ರಕಾರ ಮಾಜಿ ಯೋಧ ಸಂದೀಪ್ ಹೆಸರಿನಲ್ಲಿದ್ದ 2 ಕೋಟಿ ರೂ ವಿಮೆ ಹಣಕ್ಕಾಗಿ ಆತನನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ.

ಸಂದೀಪ್ ಅವರು HDFC ಬ್ಯಾಂಕ್ ಮತ್ತು SBI ಯಲ್ಲಿ ವಿಮಾ ಪಾಲಿಸಿಗಳನ್ನು ಹೊಂದಿದ್ದರು. ಅವರ ಅಪಘಾತದ ಸಾವಿನ ಸಂದರ್ಭದಲ್ಲಿ ಸುಮಾರು ₹2 ಕೋಟಿ ವಿಮಾ ಮೊತ್ತ ದೊರೆಯಲಿದೆ ಎಂಬ ನಂಬಿಕೆ ಆರೋಪಿಗಳಿಗೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಕೆಲ ಸರ್ಕಾರಿ ನೌಕರರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೃತನ ಪತ್ನಿ ಸುಮಾ ಸಂದೀಪ್ ಮಂಜರಗಿ, ಸುಮಾ ಪ್ರಿಯಕರ ಪುಂಡಲೀಕ್ ವಿಠ್ಠಲ್ ಡೊಂಬಾರ್, RMP ವೈದ್ಯ ಡಾ. ಬಸವರಾಜ ಭಾಸ್ಮೆ, ಬೆಳಗಾವಿ ಆಯುಕ್ತರ ಕಚೇರಿಯ FDA ಅಧಿಕಾರಿ ಅಶೋಕ್ ಗುಜನಾಳ, ವಿಧಿವಿಜ್ಞಾನ ಪ್ರಯೋಗಾಲಯದ ಕ್ಲರ್ಕ್ ಅಪ್ಪಾಸಾಹೇಬ ನಾಯಕ್, ಪ್ರಯೋಗಾಲಯ ಸಹಾಯಕ ಚನ್ನಯ್ಯ ಅಡಿವಿಸ್ವಾಮಿಮಠ, ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ್, ಪುಂಡಲೀಕ್‌ನ ಸಹಚರ ಸಚಿನ್ ಸೆಳಾರ್ ಮತ್ತು ಫಾರ್ಮಸಿ ವಿದ್ಯಾರ್ಥಿ ಹಾಗೂ ಪುಂಡಲೀಕ್‌ನ ಸಹಚರ ರಾಹುಲ್ ಜೋಗಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Ex-Serviceman allegedly murdered for Rs 2 crore insurance claim
ಕುಟುಂಬ ಸದಸ್ಯರಿಗೆ ಮಟ್ಟಣ್ಣನವರ್ ಬೆದರಿಕೆ: ಚಿನ್ನಯ್ಯ ಆರೋಪ; ಫೋನ್ ಕರೆ ದಾಖಲೆ ಬಿಡುಗಡೆ ಮಾಡಿದ ಮಾಜಿ ಪೊಲೀಸ್ ಅಧಿಕಾರಿ!

ಪತ್ನಿ ಮತ್ತು ಪ್ರಿಯಕರನ ಸಂಚು

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು, ಸಂದೀಪ್ ಅವರ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ್ ವಿಠ್ಠಲ್ ಡೊಂಬಾರ್ ನೇತೃತ್ವದಲ್ಲಿ ಈ ಸಂಚು ರೂಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದರು.

ಅಕ್ರಮ ಸಂಬಂಧದಿಂದ ಹುಟ್ಟಿದ ಸಂಚು

ಪೊಲೀಸರ ಪ್ರಕಾರ, ಸಂದೀಪ್ ಪತ್ನಿ ಸುಮಾ ಅವರು ಪುಂಡಲೀಕ್ ಅವರ ಅಂಗಡಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಕಾರಣ ಇಬ್ಬರ ನಡುವೆ ಪರಿಚಯ ಬೆಳೆದಿತ್ತು. ಬಳಿಕ ಇಬ್ಬರೂ ಸೇರಿ ಹಿಡಕಲ್ ಅಣೆಕಟ್ಟಿನ ಸಮೀಪ ಹೋಟೆಲ್ ಆರಂಭಿಸಿದ್ದರು.

ಈ ಅವಧಿಯಲ್ಲಿ ಸುಮಾ ಮತ್ತು ಪುಂಡಲೀಕ್ ನಡುವೆ ಅನೈತಿಕ ಸಂಬಂಧ ಬೆಳೆದಿದ್ದು, ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸಂದೀಪ್ ಅವರನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು. ಇದೇ ವೇಳೆ ಸಂದೀಪ್ ಅವರ ಹೆಸರಿನಲ್ಲಿ ಸುಮಾರು 2 ಕೋಟಿ ಮೌಲ್ಯದ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವು ವಿಮಾ ವ್ಯವಸ್ಥೆಗಳ ಬಗ್ಗೆ ಸಂದೀಪ್ ಅವರಿಗೆ ತಿಳಿದಿರಲಿಲ್ಲ ಎನ್ನುವ ಅನುಮಾನವೂ ಪೊಲೀಸರಿಗೆ ಇದೆ.

Ex-Serviceman allegedly murdered for Rs 2 crore insurance claim
ಮೈಸೂರು: ಮಟಮಟ ಮಧ್ಯಾಹ್ನವೇ ಪಬ್‌ನಲ್ಲಿ ಭೀಕರ ಅಗ್ನಿ ದುರಂತ; ಇಬ್ಬರು ಸುಟ್ಟು ಕರಕಲು, 7 ಮಂದಿ ಸ್ಥಿತಿ ಗಂಭೀರ!

ಆಸ್ಪತ್ರೆಯಲ್ಲೇ ವಿಷ ನೀಡಿ ಹತ್ಯೆ

ಮಾರ್ಚ್ 13ರಂದು ಸಂದೀಪ್ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಮೊದಲು ಹುಕ್ಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಘಟಪ್ರಭದ J.G. ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರ ಪ್ರಕಾರ, ಅವರಿಗೆ ಜೀವಕ್ಕೆ ಅಪಾಯವಾಗುವಂತಹ ಗಂಭೀರ ಗಾಯಗಳಿರಲಿಲ್ಲ.

ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸುಮಾ ಮತ್ತು ಪುಂಡಲೀಕ್ ತಮ್ಮ ಕೊಲೆ ಸಂಚನ್ನು ಕಾರ್ಯಗತಗೊಳಿಸಿದ್ದಾರೆ. ವಿಷವನ್ನು ಸಲೈನ್ ಬಾಟಲಿಯಲ್ಲಿ ಬೆರೆಸಿ ಸಂದೀಪ್ ಅವರಿಗೆ ನೀಡಲಾಗಿದ್ದು, ಜೊತೆಗೆ ನಿದ್ರೆ ಮಾತ್ರೆಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಮಾರ್ಚ್ 15ರಂದು ಚಿಕಿತ್ಸೆ ವೇಳೆ ಸಂದೀಪ್ ಅವರು ಮೃತಪಟ್ಟರು.

ಫಾರ್ಮಸಿ ವಿದ್ಯಾರ್ಥಿ ಪಾತ್ರ

ಸುಮಾ ಮತ್ತು ಪುಂಡಲೀಕ್ ಸಂಚಿನಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಫಾರ್ಮಸಿ ವಿದ್ಯಾರ್ಥಿಯಾಗಿದ್ದ ರಾಹುಲ್ ಜೋಗಿ, ಸಂದೀಪ್ ಅವರ ದಾಖಲಾತಿ ಮತ್ತು ಚಿಕಿತ್ಸಾ ವ್ಯವಸ್ಥೆಯಲ್ಲಿ ನೆರವಾಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ರಾಮು ಎಂಬಾತ ಸಲೈನ್ ಬಾಟಲಿಯ ಮೂಲಕ ವಿಷ ನೀಡುವ ವಿಧಾನವನ್ನು ಸೂಚಿಸಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಪೋಸ್ಟ್‌ನಿಂದ ರಹಸ್ಯ ಬಯಲು

ಸಂದೀಪ್ ಅವರ ಸಾವಿನ ಬಳಿಕ, ರಸ್ತೆ ಅಪಘಾತದ ಗಾಯಗಳಿಂದಾಗಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪುಂಡಲೀಕ್ ಸಾಮಾಜಿಕ ಜಾಲತಾಣದಲ್ಲಿ "ನಿಜವಾಗಿ ಏನಾಯಿತು ಎಂಬುದು ನನಗೆ ಗೊತ್ತು, ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ" ಎಂಬ ಅರ್ಥದ ಸ್ಟೇಟಸ್ ಹಾಕಿದ್ದ. ಈ ಸ್ಟೇಟಸ್ ಅನ್ನು ಗಮನಿಸಿದ್ದ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಣೆ ನಡೆಸಿದಾಗ ಸಂಪೂರ್ಣ ಸಂಚು ಬೆಳಕಿಗೆ ಬಂತು.

Ex-Serviceman allegedly murdered for Rs 2 crore insurance claim
'ಹೆಂಡತಿ ಇಲ್ಲದೆ ನಾನಿರಲು ಸಾಧ್ಯವಿಲ್ಲ': ವಿಡಿಯೋ ಮಾಡಿಟ್ಟು ಹೋಂ ಗಾರ್ಡ್ ಪತ್ನಿಯನ್ನು ಇರಿದು ಕೊಂದ ಪತಿ!

ವಿಧಿವಿಜ್ಞಾನ ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್

ಪ್ರಕರಣದ ಅತ್ಯಂತ ಆತಂಕಕಾರಿ ಅಂಶವೆಂದರೆ ವಿಧಿವಿಜ್ಞಾನ ಸಾಕ್ಷ್ಯಗಳನ್ನು ತಿರುಚಿರುವ ಆರೋಪ. ಎಸ್‌ಪಿ ರಾಮರಾಜನ್ ಅವರ ಪ್ರಕಾರ, ಸುಮಾ ತನ್ನ ತಾಯಿ ಮೂಲಕ ಡಾ. ಬಸವರಾಜ ಭಾಸ್ಮೆ ಅವರನ್ನು ಸಂಪರ್ಕಿಸಿದ್ದರು. ಅವರ ಮೂಲಕ ಅಶೋಕ್ ಗುಜನಾಳ ಸಂಪರ್ಕಕ್ಕೆ ಬಂದಿದ್ದು, ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ಕ್ಲರ್ಕ್ ಅಪ್ಪಾಸಾಹೇಬ ನಾಯಕ್ ಸಂಪರ್ಕಕ್ಕೆ ಬಂದರು.

ನಾಯಕ್ ಮೂಲಕ ಚನ್ನಯ್ಯ ಅಡಿವಿಸ್ವಾಮಿಮಠ ಮತ್ತು ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ್ ಸಂಪರ್ಕಕ್ಕೆ ಬಂದಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನು ಬದಲಾಯಿಸಲು 3 ಲಕ್ಷಕ್ಕೂ ಹೆಚ್ಚು ಹಣ ನೀಡಲಾಗಿದೆ.

ಇದರ ಪರಿಣಾಮವಾಗಿ ಮೊದಲ ವರದಿಯಲ್ಲಿ ದೇಹದಲ್ಲಿ ವಿಷ ಪತ್ತೆಯಾಗಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು. ಇದರಿಂದ ಕೊಲೆ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ.

Ex-Serviceman allegedly murdered for Rs 2 crore insurance claim
ಕರ್ನಾಟಕ ಪೊಲೀಸ್ ಇಲಾಖೆಗೆ ಮುಜುಗರ ತಂದಿಟ್ಟ ಆರಕ್ಷಕರು: ರಾಜಸ್ಥಾನದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

ಶವ ಹೊರತೆಗೆದು ಮರುಪರೀಕ್ಷೆ

ಸಂದೇಹ ಗಾಢವಾಗುತ್ತಿದ್ದಂತೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಸಂದೀಪ್ ಅವರ ಸಮಾಧಿಯಿಂದ ಶವವನ್ನು ಹೊರತೆಗೆದರು. ಮರು ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೊಲೆ ನಡೆದಿದೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳು ದೊರೆತವು.

ಪೊಲೀಸ್ ತನಿಖೆ ವೇಳೆ ಆರೋಪಿಗಳು ಕೊಲೆಗೆ ಬಳಸಿದ್ದ ವಿಷದ ಬಾಟಲಿಗಳು, ಸಿರಿಂಜ್‌ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಪೊಲೀಸರು ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 103(1), 238(B) ಮತ್ತು 3(5) ಅಡಿಯಲ್ಲಿ ದಾಖಲಿಸಲಾಗಿದೆ. ಎಸ್‌ಪಿ ರಾಮರಾಜನ್ ಅವರು, "ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೇ ವೈಜ್ಞಾನಿಕ ವರದಿಗಳನ್ನು ಬದಲಾಯಿಸಬಹುದು ಎಂದು ನಾವು ಊಹಿಸಿರಲಿಲ್ಲ. ಈ ಘಟನೆ ವಿಧಿವಿಜ್ಞಾನ ತನಿಖೆಗಳ ಮೇಲಿನ ಸಾರ್ವಜನಿಕರ ವಿಶ್ವಾಸದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ" ಎಂದು ಹೇಳಿದ್ದಾರೆ.

ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ವಿಮಾ ಪಾಲಿಸಿಗಳ ಖರೀದಿ ಮತ್ತು ಇತರರ ಪಾತ್ರ ಸೇರಿದಂತೆ ಸಂಚಿನ ಮತ್ತಷ್ಟು ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com