

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ಹೋಗಿದ್ದಾಗ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಚ್‌ಎಎಲ್ ಮಹಿಳಾ ಠಾಣೆಯ PSI ಕೆ.ಅನಿತಾ, ಹೆಡ್ ಕಾನ್‌ಸ್ಟೇಬಲ್‌ಗಳಾದ ಉಳುವಪ್ಪ ತೆಗೂರು ಹಾಗೂ ಯತೀಶ್ ಕುಮಾರ್ ಅವರನ್ನು ಜೈಪುರದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು. ಇದರ ಬೆನ್ನಲ್ಲೇ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, PSI ಕೆ.ಅನಿತಾ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಯಾರಾದಾರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಯಾರಾದರೂ ಶಾಮೀಲಾಗಿರುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು. ವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಸಮಯಬೇಕು. ಬೇರು ಮಟ್ಟದಲ್ಲಿ ಸರಿಪಡಿಸಬೇಕಿದೆ ಎಂದು ಹೇಳಿದರು.
ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗಾಗಿ ಪಿಎಸ್‌ಐ ಅನಿತಾ ಮತ್ತು ತಂಡ ಜೈಪುರಕ್ಕೆ ತೆರಳಿತ್ತು. ಆದರೆ, ಪ್ರಕರಣದಿಂದ ಕೈಬಿಡಲು ಆರೋಪಿಗಳ ಕುಟುಂಬದವರಿಂದ 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕುಟುಂಬದವರು ರಾಜಸ್ಥಾನದ ಎಸಿಬಿಗೆ ದೂರು ನೀಡಿದ್ದರು. ನಂತರ ಜೈಪುರದ ಹೋಟೆಲ್ ಗಂಗೌರ್‌ನಲ್ಲಿ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಳುವಪ್ಪ ತೆಗೂರು ಅವರನ್ನು ಹಣ ಸಮೇತ ಬಂಧಿಸಿತ್ತು. ವಿಚಾರಣೆಯಲ್ಲಿ ಪಿಎಸ್‌ಐ ಕೆ.ಅನಿತಾ ಮತ್ತು ಮತ್ತೊಬ್ಬ ಹೆಡ್‌ಕಾನ್‌ಸ್ಟೇಬಲ್ ಯತೀಶ್ ಕುಮಾರ್ ಅವರನ್ನು ಬಂಧಿಸಿತ್ತು.
Advertisement