

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿನ ಬಾಡಿಗೆ ಮನೆಗಳು ಹಾಗೂ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣಾ ದಳವು ಕಾಮಾಕ್ಷಿಪಾಳ್ಯ, ಕೆ.ಆರ್. ಪುರಂ, ಕುಮಾರಸ್ವಾಮಿ ಲೇಔಟ್, ಹೆಣ್ಣೂರು ಹಾಗೂ ವರ್ತೂರು ಪ್ರದೇಶಗಳಲ್ಲಿ ವಿವಿಧ ದಿನಾಂಕಗಳಲ್ಲಿ ನಡೆಸಿದ ದಾಳಿಗಳ ವೇಳೆ ಈ ಬಂಧನಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರ್ಯಾಚರಣೆಯ ವೇಳೆ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಪ್ರೇರೇಪಿಸುವುದು ಮತ್ತು ಅದಕ್ಕೆ ಸಹಕಾರ ನೀಡುತ್ತಿದ್ದ ಆರೋಪದಡಿ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.
ಸ್ಪಾ, ಮಸಾಜ್ ಹೆಸರಿನಲ್ಲೂ ಮಾಂಸದಂಧೆ
ಇದಲ್ಲದೆ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಏಳು ಮಹಿಳೆಯರನ್ನು ರಕ್ಷಿಸಲಾಗಿದ್ದು, ಅವರಲ್ಲಿ ನಾಲ್ವರು ಇತರ ರಾಜ್ಯಗಳಿಗೆ ಸೇರಿದವರಾಗಿದ್ದು, ಮೂವರು ಸ್ಥಳೀಯ ಮಹಿಳೆಯರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿಗಳು ದೂರವಾಣಿ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಬಾಡಿಗೆ ಮನೆಗಳಲ್ಲಿ ವೇಶ್ಯಾವಾಟಿಕೆ ಚಟುವಟಿಕೆಗಳನ್ನು ಏರ್ಪಡಿಸುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸ್ಪಾದಲ್ಲಿ ದೇಹ ಮಸಾಜ್ ಸೇವೆಯ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದುದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಾಮಾಕ್ಷಿಪಾಳ್ಯ, ಕೆ.ಆರ್. ಪುರಂ, ಕುಮಾರಸ್ವಾಮಿ ಲೇಔಟ್, ಹೆಣ್ಣೂರು ಮತ್ತು ವರ್ತೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement