'ಚಿನ್ನಯ್ಯನನ್ನು ಜೀವನದಲ್ಲೇ ಭೇಟಿಯಾಗಿಲ್ಲ', 50 ಲಕ್ಷ, 200 ಕೋಟಿ ರೂ ಆರೋಪಗಳೆಲ್ಲ ಕಟ್ಟುಕಥೆ: ಸಮಾಜಸೇವಕಿ ರಮಾ ನಾಗರಾಜ್ ಸ್ಪಷ್ಟನೆ

ನಾನು ಚಿನ್ನಯ್ಯ ಅವರನ್ನು ಎಂದಿಗೂ ಭೇಟಿಯಾಗಿಲ್ಲ, ಅವರೊಂದಿಗೆ ಮಾತನಾಡಿಲ್ಲ ಅಥವಾ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ. ಆದರೂ ಧರ್ಮಸ್ಥಳದಲ್ಲಿ ಅಶಾಂತಿ ಸೃಷ್ಟಿಸಲು ರೂಪಿಸಲಾದ ಸಂಚಿನಲ್ಲಿ ನಾನು ಹಣಕಾಸು ಒದಗಿಸಿದ್ದೇನೆ.
witness-complainant CN Chinnayya
ಚಿನ್ನಯ್ಯ
Updated on

ಮಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಚಿತ್ರದುರ್ಗ ಮೂಲದ ಸಮಾಜಸೇವಕಿ ರಮಾ ನಾಗರಾಜ್ ಅವರು ನಿರಾಕರಿಸಿದ್ದಾರೆ.

ಪ್ರಕರಣದ ದೂರುದಾರ ಚಿನ್ನ ಸಿ.ಎನ್. ಅಲಿಯಾಸ್ ಚಿನ್ನಯ್ಯ ಅವರು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿನ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತ ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಯಲ್ಲೇ ಮಾನಹಾನಿ ನಡೆಯುತ್ತಿರುವ ಕಾರಣ ಸಾರ್ವಜನಿಕವಾಗಿ ಪ್ರತಿಕ್ರಿಯಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.

“ನಾನು ಚಿನ್ನಯ್ಯ ಅವರನ್ನು ಎಂದಿಗೂ ಭೇಟಿಯಾಗಿಲ್ಲ, ಅವರೊಂದಿಗೆ ಮಾತನಾಡಿಲ್ಲ ಅಥವಾ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ. ಆದರೂ ಧರ್ಮಸ್ಥಳದಲ್ಲಿ ಅಶಾಂತಿ ಸೃಷ್ಟಿಸಲು ರೂಪಿಸಲಾದ ಸಂಚಿನಲ್ಲಿ ನಾನು ಹಣಕಾಸು ಒದಗಿಸಿದ್ದೇನೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಹೀಗಾಗಿ ಸಂಪೂರ್ಣ ಸತ್ಯವನ್ನು ಹೈಕೋರ್ಟ್ ಮುಂದೆ ಮಂಡಿಸುತ್ತೇನೆಂದು ತಿಳಿಸಿದ್ದಾರೆ.

ಚಿನ್ನಯ್ಯ ಅವರ ಅರ್ಜಿಯಲ್ಲಿನ ಹಲವು ಆರೋಪಗಳು ಅವರ ಹಿಂದಿನ ಯಾವುದೇ ಹೇಳಿಕೆಗಳಲ್ಲಿ ಇರಲಿಲ್ಲ. ಆರಂಭಿಕ ದೂರು, ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆ, ವಿಶೇಷ ತನಿಖಾ ತಂಡ (SIT) ಮುಂದೆ ನೀಡಿದ ಮಾಹಿತಿ ಅಥವಾ ಜಾಮೀನು ಅರ್ಜಿಯಲ್ಲಿಯೂ ಇಂತಹ ಆರೋಪಗಳ ಉಲ್ಲೇಖವಿಲ್ಲ. ಇದೀಗ ಇದ್ದಕ್ಕಿದ್ದಂತೆ ಹೈಕೋರ್ಟ್ ಅರ್ಜಿಯಲ್ಲಿ ರೂ.200 ಕೋಟಿ, 50 ಲಕ್ಷ ರೂ. ನೀಡುವ ಭರವಸೆ, ನಟ ಪ್ರಕಾಶ್ ರಾಜ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸಿದ್ದೆ ಎಂಬ ಆರೋಪಗಳು ಹಾಗೂ ಕೇರಳದಿಂದ ಹಣ ಬಂದಿದೆ ಎನ್ನುವ ಕಥೆಗಳನ್ನು ಸೃಷ್ಟಿಸಿದ್ದಾರೆ.

ತಮ್ಮ ವಿರುದ್ಧ ಕೆಲವು ವ್ಯಕ್ತಿಗಳು ಸಾರ್ವಜನಿಕವಾಗಿ ನಿಂದನೆ ನಡೆಸಿದ್ದು, ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ಸಂಬಂಧ ದಾವಣಗೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ಹೇಳಿದ್ದಾರೆ.

witness-complainant CN Chinnayya
ನನ್ನ ಹೋರಾಟ ಸೌಜನ್ಯ ಸಾವಿನ ವಿರುದ್ಧ; 200 ಕೋಟಿ ರೂ ತರಲು ನಾನು ಧರ್ಮಸ್ಥಳದ ವಿರೋಧಿಯೇ?: ಮಾರಿಕೊಂಡ ಮಾಧ್ಯಮಗಳು ಹೇಳಿಕೆಗೆ ಪ್ರಕಾಶ್ ರೈ ಸ್ಪಷ್ಟನೆ

“ನಾನು ಎಂದಿಗೂ ಭೇಟಿಯಾಗದ ವ್ಯಕ್ತಿಯೊಬ್ಬ ನನ್ನನ್ನೇ ಈ ಕಾಲ್ಪನಿಕ ಸಂಚಿಯ ಗುಪ್ತ ಹಣಕಾಸುದಾರಳಾಗಿ ಹೆಸರಿಸಿರುವುದೇಕೆ ಎಂಬುದನ್ನು ಸಾರ್ವಜನಿಕರೇ ನಿರ್ಧರಿಸಲಿ ಎಂದಿದ್ದಾರೆ.

2025ರ ನವೆಂಬರ್ 11ರಂದು ಮಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ಚಿನ್ನಯ್ಯ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದೇನೆ ಎಂದು ಹೇಳಿದ್ದರು. ಅಲ್ಲದೆ, ಧರ್ಮಸ್ಥಳದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಲಿಪಶುಗಳನ್ನು ಸಮಾಧಿ ಮಾಡಲಾಗಿದೆ ಎಂಬ ತಮ್ಮ ಮೂಲ ದೂರಿನ ಸತ್ಯಾಸತ್ಯತೆಯನ್ನು ತಾವು ಸಮರ್ಥಿಸಿಕೊಂಡಿದ್ದರು.

ತಪ್ಪಿತಸ್ಥ ಭಾವನೆಯಿಂದಾಗಿ ತಾನು ಸ್ವಯಂಪ್ರೇರಣೆಯಿಂದ ಪೊಲೀಸರಿಗೆ ಬಂದಿದ್ದೇನೆ ಮತ್ತು ತನ್ನ ಪ್ರಯತ್ನದಿಂದಾಗಿ ಮೂರು ಶವಗಳು ಪತ್ತೆಯಾಗಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು, ಹೀಗಾಗಿ ಸ್ವಂತ ಅಫಿಡವಿಟ್ ಅನ್ನು ಪರಿಶೀಲಿಸಲು ಖುದ್ದಾಗಿ ಹಾಜರಾಗುವಂತೆ ಹೈಕೋರ್ಟ್‌ಗೆ ಚಿನ್ನಯ್ಯ ಅವರಿಗೆ ಸಮನ್ಸ್ ನೀಡಬೇಕೆಂದು ಮನವಿ ಮಾಡಿದರು.

ಎಸ್‌ಐಟಿ ವಾಹನ ಅಪಘಾತ

ಇದೇ ವೇಳೆ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ನಾಲ್ವರು ಸದಸ್ಯರು ಮಂಗಳವಾರ ಚಾರ್ಮಾಡಿ ಘಾಟ್ ಸಮೀಪ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಎಸ್‌ಐಟಿ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಅಧಿಕಾರಿ ಮಂಜುನಾಥ್ ಹಾಗೂ ವಾಹನ ಚಾಲಕರು ಸೇರಿದ್ದಾರೆ. ಅಧಿಕೃತ ವಾಹನ ಪಲ್ಟಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com