ಕಸ ಮಾಫಿಯಾಗೆ ರಾಜ್ಯ ಸರ್ಕಾರ ಬ್ರೇಕ್: ಇನ್ನು ಕಸ ಸಾಗಣೆ ವಾಹನಗಳಿಗೆ GPS ಕಡ್ಡಾಯ, ನಿಯಮ ಉಲ್ಲಂಘಿಸಿದರೆ ಪಾವತಿ ಇಲ್ಲ..!

ಹೊಸ ಕಸ ನಿರ್ವಹಣಾ ವ್ಯವಸ್ಥೆ ಜಾರಿಗೆ ಬರುವವರೆಗೆ ಸರ್ಕಾರ ಕಾಯುವುದಿಲ್ಲ. ಅಷ್ಟರೊಳಗೆ ಈಗಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ಕಸ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಕಸದ ಮಾಫಿಯಾದ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಿಪಿಎಸ್ (GPS) ಅಳವಡಿಸದ ಕಸ ಸಂಗ್ರಹ ವಾಹನಗಳಿಗೆ ಯಾವುದೇ ಪಾವತಿ ಮಾಡಲಾಗುವುದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದು, ಹೊಸ ಟೆಂಡರ್‌ಗಳಲ್ಲಿ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಗುರುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಕಸ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದರೂ, ಪ್ರಸ್ತುತ ಅದನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಹೊಸ ಕಸ ನಿರ್ವಹಣಾ ವ್ಯವಸ್ಥೆ ಜಾರಿಗೆ ಬರುವವರೆಗೆ ಸರ್ಕಾರ ಕಾಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಷ್ಟರೊಳಗೆ ಈಗಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮನೆ ಮನೆಗೆ ಕಸ ಸಂಗ್ರಹಣೆ ಕಡ್ಡಾಯವಾಗಿ ನಡೆಯಬೇಕು ಹಾಗೂ ನಗರದಾದ್ಯಂತ ಇರುವ ಕಸದ ಬ್ಲ್ಯಾಕ್ ಸ್ಪಾಟ್'ಗಳನ್ನು (Garbage Black Spots) ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಸ ಸಂಗ್ರಹಣೆ ಮತ್ತು ಕಸ ವಿಂಗಡಣೆಗೆ ಪ್ರತ್ಯೇಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಒಟ್ಟು 33 ಕಸ ಸಂಗ್ರಹಣೆ ಟೆಂಡರ್ ಪ್ಯಾಕೇಜುಗಳಿದ್ದು, ಅವುಗಳಲ್ಲಿ ಆರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಉಳಿದ 27 ಟೆಂಡರ್‌ಗಳು ಅಂತಿಮ ಹಂತದಲ್ಲಿವೆ. ಅಲ್ಲದೆ, ಪ್ರಸ್ತುತ ಬಳಸಲಾಗುತ್ತಿರುವ ಅನೇಕ ವಾಹನಗಳು ದುಸ್ಥಿತಿಯಲ್ಲಿದ್ದು, ಸಿಬ್ಬಂದಿ ಕೊರತೆಯೂ ಇದೆ ಎಂದು ಹೇಳಿದರು.

ಬಳಿಕ ನಗರದ ನಿವಾಸಿಗಳ ಸಹಕಾರವೂ ಅಗತ್ಯ ಎಂದು ಒತ್ತಿ ಹೇಳಿದ ಸಚಿವರು, “ಸುಮಾರು ಶೇ.10ರಷ್ಟು ಜನರು ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುತ್ತಿದ್ದಾರೆ. ಶೇ.20ರಷ್ಟು ಸಮಸ್ಯೆ ಪಾಲಿಕೆಯ ವ್ಯವಸ್ಥೆಯಲ್ಲಿದೆ. ಆದರೆ, ಸುಮಾರು ಶೇ.65ರಷ್ಟು ನಾಗರಿಕರು ಕಸ ವಿಂಗಡಣೆಯ ನಿಯಮಗಳನ್ನು ಪಾಲಿಸುತ್ತಿದ್ದಾರೆ.

File photo
ಬೆಂಗಳೂರು: ಕಸದ ತೊಟ್ಟಿಗಳಾದ ಶಂಪುರ, ಟ್ಯಾನರಿ ರಸ್ತೆ! ಎಲ್ಲೆಲ್ಲೂ ದುರ್ವಾಸನೆ..

ಜನರು ಕಸ ಸಂಗ್ರಹ ವಾಹನಗಳು ನಿರ್ದಿಷ್ಟ ಸಮಯಕ್ಕೆ ಬರಬೇಕೆಂದು ನಿರೀಕ್ಷಿಸುತ್ತಾರೆ. ಆದರೆ, 24 ಗಂಟೆಯೂ ಕಸ ಸಂಗ್ರಹಣೆ ನಡೆಸುವುದು ಸಾಧ್ಯವಿಲ್ಲ. ಈ ಸಮಸ್ಯೆ ಬಿಬಿಎಂಪಿ ಹಾಗೂ ನಾಗರಿಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಪರಿಹಾರವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸಚಿವರು ಕಸ ಸಂಗ್ರಹಣೆಯಲ್ಲಿ ಅನಿಯಮಿತತೆ ಕಂಡುಬಂದರೆ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಶೀಘ್ರದಲ್ಲೇ ತಾವು ಸ್ವತಃ ನಗರದಲ್ಲಿ ಪರಿಶೀಲನೆ ನಡೆಸಲಿದ್ದು, ಎಲ್ಲಿ ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲವೋ ಅಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಸಾರ್ವಜನಿಕರೂ ಇಂತಹ ಸಮಸ್ಯೆಗಳನ್ನು ವರದಿ ಮಾಡುವಂತೆ ಮನವಿ ಮಾಡಿದರು.

ನಗರದ ಕೆಲವು ಪ್ರದೇಶಗಳಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆ ಪ್ರಮಾಣ ಶೇ.65, ಶೇ.70 ಮತ್ತು ಶೇ.80ರಷ್ಟು ತಲುಪಿದ್ದರೆ, ಕೆಲವು ಕಡೆ ಅದು ಕೇವಲ ಶೇ.45ರಷ್ಟು ಮಾತ್ರ ಇದೆ. ವಿಂಗಡಿಸದ ಕಸವನ್ನು ಸಂಗ್ರಹಿಸಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ಬದಿಯಲ್ಲಿ ಕಸ ಎಸೆಯುವುದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರ ಜೊತೆಗೆ ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತದೆ. ಮನೆಗಳ ಬಳಿ ಬರುವ ಕಸ ಸಂಗ್ರಹ ವಾಹನಗಳಿಗೆ ಕಸವನ್ನು ನೀಡಬೇಕು. ಈಗಿರುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿದರೆ ಕಸ ನಿರ್ವಹಣೆಯಲ್ಲಿ ಕನಿಷ್ಠ ಶೇ.50ರಷ್ಟು ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಾಹನಗಳು ತಲುಪದ ಅಥವಾ ಸಮಯಕ್ಕೆ ಬಾರದ ಪ್ರದೇಶಗಳಲ್ಲಿ ರಸ್ತೆ ಬದಿಗೆ ಕಸ ಸುರಿಯುವ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com