

ಇಂದು ನಡೆದ ನೀಟ್-ಯುಜಿ 2026 ಮರುಪರೀಕ್ಷೆ ವೇಳೆ ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರ ಹೊರಗೆ ಕೆಲ ವಿದ್ಯಾರ್ಥಿಗಳು ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವರದಿ ಸಮಯದ (Reporting Deadline) ಬಳಿಕ ಆಗಮಿಸಿದ್ದ ಕಾರಣ ಅವರಿಗೆ ಪರೀಕ್ಷಾ ಕೇಂದ್ರ ಒಳಗೆ ಹೋಗಲು ನಿರಾಕರಿಸಲಾಯಿತು.
ಬೆಂಗಳೂರು ನಗರದ ಪ್ಯಾಲೇಸ್ ರಸ್ತೆಯಲ್ಲಿರುವ ಸರ್ಕಾರಿ ರಾಮನಾರಾಯಣ ಚೆಲ್ಲರಾಮ್ ಕಾಲೇಜಿನ ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳು ಆತಂಕ ಮತ್ತು ನಿರಾಶೆಯಿಂದ ನಿಂತಿರುವ ದೃಶ್ಯಗಳು ವಿಡಿಯೊಗಳಲ್ಲಿ ಕಾಣಿಸಿಕೊಂಡಿವೆ. ಒಂದು ವಿಡಿಯೊದಲ್ಲಿ ವಿದ್ಯಾರ್ಥಿಯೊಬ್ಬಳು ಒಳಗೆ ಪ್ರವೇಶಿಸಲು ಮುಚ್ಚಿದ್ದ ಗೇಟ್ ಏರಲು ಪ್ರಯತ್ನಿಸುತ್ತಿರುವುದೂ ಕಂಡುಬಂದಿದೆ.
ಕೆಲ ವರದಿಗಳ ಪ್ರಕಾರ, ಇಂದು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಿಂದ ಉಂಟಾದ ಭಾರೀ ಸಂಚಾರ ದಟ್ಟಣೆ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಡವಾಗಿ ತಲುಪಲು ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಮಧ್ಯಾಹ್ನ 2.00ರಿಂದ ಸಂಜೆ 5.15ರವರೆಗೆ ನಡೆದ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪರೀಕ್ಷೆಯನ್ನು ಕಠಿಣ ಭದ್ರತಾ ವ್ಯವಸ್ಥೆಗಳ ನಡುವೆ ನಡೆಸಲಾಯಿತು.
ಇದೇ ರೀತಿಯ ಘಟನೆಗಳು ದೇಶದ ಇತರೆ ಭಾಗಗಳಲ್ಲಿಯೂ ವರದಿಯಾಗಿದ್ದು, ನಿಗದಿತ ಸಮಯದ ನಂತರ ಪರೀಕ್ಷಾ ಕೇಂದ್ರಗಳಿಗೆ ತಲುಪಿದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
National Testing Agency (ಎನ್‌ಟಿಎ) ಮಾರ್ಗಸೂಚಿಗಳ ಪ್ರಕಾರ, ಅಭ್ಯರ್ಥಿಗಳಿಗೆ ಬೆಳಗ್ಗೆ 11 ಗಂಟೆಯಿಂದಲೇ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ನಿಗದಿತ ಸಮಯದ ನಂತರ ಆಗಮಿಸಿದವರಿಗೆ ಯಾವುದೇ ವಿನಾಯಿತಿ ನೀಡಲಾಗಲಿಲ್ಲ.
ಈ ಘಟನೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಚಾರ ಸಮಸ್ಯೆಗಳಂತಹ ಅನಿರೀಕ್ಷಿತ ಕಾರಣಗಳಿಂದ ಪರೀಕ್ಷೆ ತಪ್ಪಿದ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ವ್ಯಕ್ತವಾಗುತ್ತಿದೆ.
Advertisement