ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ನಿರ್ಧಾರ; ಕೊಟ್ಟ ಪಟ್ಟಿ ಅನುಷ್ಠಾನಗೊಳಿಸುವುದು ನನ್ನ ಕೆಲಸ: CM ಡಿ.ಕೆ ಶಿವಕುಮಾರ್

ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಅವರು ಹಾಗೂ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಸೂಚಿಸಿತು. ಈ ಗುಟ್ಟು ಕೆಲವರಿಗೆ ಬಿಟ್ಟು ಯಾರಿಗೂ ತಿಳಿದಿರಲಿಲ್ಲ ಎಂದು ಸಿಎಂ ಹೇಳಿದರು.
CM DK Shivakumar
ಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್. ಅವರು ಕೊಟ್ಟ ಪಟ್ಟಿಯನ್ನು ಅನುಷ್ಠಾನಗೊಳಿಸುವುದು ನನ್ನ ಕೆಲಸ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ತಿಳಿಸಿದರು.

ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಮುಖಸ್ಥರು ಇಂದು ಶಿವಕುಮಾರ್ ಅವರನ್ನು ಭೇಟಿ ಮಾಡಿ ಎಂಎಲ್ ಸಿ ಸಲೀಂ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಶಿವಕುಮಾರ್, ಈ ನೆಲದ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದೇ ನಮ್ಮ ಸಿದ್ಧಾಂತ. ಸಂವಿಧಾನವನ್ನು ನಂಬಿದ್ದೇವೆ. ಸಂವಿಧಾನದ ಮೇಲೆ ನಡೆಯುತ್ತಿದ್ದೇವೆ. ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ತಬ್ಬಿದ್ದಾರೆ.‌ ನಾವು ನಿಮ್ಮ ಪರವಾಗಿ ಕೆಲಸ ಮಾಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ" ಎಂದರು.

ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಅವರು ಹಾಗೂ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಸೂಚಿಸಿತು. ಈ ಗುಟ್ಟು ಕೆಲವರಿಗೆ ಬಿಟ್ಟು ಯಾರಿಗೂ ತಿಳಿದಿರಲಿಲ್ಲ. ನಂತರ ಪಕ್ಷದ ಈಗ ಈ ಸ್ಥಾನದಲ್ಲಿ ನನ್ನನ್ನು ಕೂರಿಸಿದೆ ಎಂದು ಹೇಳಿದರು.

ಸಲೀಂ ಅಹ್ಮದ್, ಸಲೀಂ, ವಿನಯ್ ಕುಮಾರ್ ಸೊರಕೆ. ನಾನು ಎಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದವರು. ನಾವು ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಅವರಿಗೆ ಎಂಎಲ್ ಸಿ ಮಾಡಬಾರದು ಎಂದು ವಿರೋಧವಿತ್ತು. ನಾನೇ ಕರೆದುಕೊಂಡು ಹೋಗಿ ಸ್ಪರ್ಧಿಸುವಂತೆ ಮಾಡಿದೆ. ಅವರು ಬೆಂಗಳೂರಿನಲ್ಲಿ ನಿಂತಿದ್ದರೆ ಯಾವತ್ತೋ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಅವರಿಗೆ ರಾಷ್ಟ್ರ ಮಟ್ಟದಲ್ಲೂ ಅವಕಾಶವಿತ್ತು ಎಂದರು.

ಮನ್ಸೂರ್ ರಾಜ್ಯಸಭೆಗೆ: ರೆಹಮಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಲೋಕಸಭೆಗೆ ಸ್ಪರ್ಧೆಸುವಂತೆ ಮಾಡಿದೆ. ಆಗ ಎಲ್ಲರೂ ನಗುತ್ತಿದ್ದರು. ಗೆಲುವು ಸೋಲು ಬೇರೆ ವಿಚಾರ, ನಿನಗೆ ಪಕ್ಷ ಗುರುತಿಸುತ್ತಿದೆ ಎಂದು ಭಾವಿಸಿ ಎಂದು ನಾನು ಹೇಳಿದೆ. ರಾಜ್ಯಸಭೆ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಬೇಡ ಎಂದಾಗ. ಹೈಕಮಾಂಡ್ ನಾಯಕರು ಚರ್ಚಿಸಿ ಮನ್ಸೂರ್ ಅಲಿ ಖಾನ್ ಅವರನ್ನು ಆಯ್ಕೆ ಮಾಡಿದೆವು. ಅವರು ಭವಿಷ್ಯದ ಭರವಸೆಯ ನಾಯಕರು. ಹೀಗೆ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದ್ದೇವೆ" ಎಂದು ತಿಳಿಸಿದರು.

ನನಗೂ ಅಧಿಕಾರ ತಡವಾಗಿ ಸಿಕ್ಕಿತು. ನಾನು ಸುಮ್ಮನೆ ಇದ್ದೆ. ಧರಂ ಸಿಂಗ್ ಅವರ ಸರ್ಕಾರದಲ್ಲಿ ನನ್ನನ್ನು, ಪರಮೇಶ್ವರ್ ಅವರನ್ನು ಮಂತ್ರಿ ಮಾಡಲಿಲ್ಲ. ಆಗಲು ತಾಳ್ಮೆಯಿಂದ ಇದ್ದೆವು. ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ಧ ಇಕ್ಬಾಲ್ ಹುಸೇನ್ ನಿಲ್ಲಿಸಿ ಗೆಲ್ಲಿಸುವುದು ಸುಲಭದ ಮಾತಲ್ಲ. ಬೊಮ್ಮಾಯಿ ಅವರ ಮಗನ ವಿರುದ್ಧವೂ ಪಠಾಣ್ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಸುಲಭವಾಗಿ ಇರಲಿಲ್ಲ. ನಮ್ಮವರ ಅಭಿಪ್ರಾಯ ಬೇರೆ ಇತ್ತು. ಆದರೆ ನಾನು ಸಮೀಕ್ಷೆ ಮಾಡಿಸಿದೆ" ಎಂದು ಹೇಳಿದರು.

ಖಾದರ್ ತ್ಯಾಗ ಮಾಡಿದ್ದರು: "ಯು. ಟಿ ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ" ಎಂದರು.

ಈ ಮಧ್ಯೆ ಅನೇಕ ಗೊಂದಲವಾಗಿದ್ದು, ಕೆಲವು ಸ್ವಾಮೀಜಿಗಳು ಸೇರಿದಂತೆ ಮತ್ತೊಬ್ಬರನ್ನು ಮಂತ್ರಿ ಮಾಡಿ ಎಂದು ಹೇಳುತ್ತಿದ್ದಾರೆ. ನೀವುಗಳು ಸಲೀಂ ಅಹ್ಮದ್ ಅವರನ್ನು ಮಾಡಿ ಎಂದು ಹೇಳುತ್ತಿದ್ದೀರಿ. ಹೀಗೆ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತ ಸಮುದಾಯದವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ತೀರ್ಮಾನ ಮಾಡಲು ಕಷ್ಟವಾಗುತ್ತದೆ. ನಾನು ನಮ್ಮ ಕಷ್ಟವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾನು ವರಿಷ್ಟರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ" ಎಂದರು.

CM DK Shivakumar
ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ: ಜಿಎಸ್ ಪಾಟೀಲ್​ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ; ಬೆಂಬಲಿಗರಿಂದ ವಿಭಿನ್ನ ಯತ್ನ!

ಹೊಸಬರಿಗೂ ಅವಕಾಶ: ವಿಧಾನಸಭೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಕಾರಣ, ಪರಿಷತ್ ನಿಂದ ಎಷ್ಟು ಜನರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಗೊಂದಲ ಇದೆ. ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಐದಾರು ಬಾರಿ ಹಿರಿಯರಿಗೆ ಅಧಿಕಾರ ನೀಡಲು ಆಗಿಲ್ಲ. ಇಲ್ಲಿ ವೈಷಮ್ಯ ಆಗುವುದು ಬೇಡ. ನಾನು, ಜಾರ್ಜ್, ಅಪ್ಪಾಜಿ ನಾಡಗೌಡ, ನಜೀರ್ ಸೇರಿದಂತೆ ಅನೇಕ ನಾಯಕರು ಬಂಗಾರಪ್ಪ ಅವರ ಕಾಲದಲ್ಲಿ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿ ಆದೆವು. ಈಗ ಆ ಪರಿಸ್ಥಿತಿ ಇಲ್ಲ. ಹೊಸಬರಿಗೆ ಅವಕಾಶ ನೀಡಬೇಕು ಎಂದು ನಾನು ಹೇಳಿದ್ದೇನೆ. ದೆಹಲಿಯವರು ಆಲೋಚನೆ ಮಾಡುತ್ತಿದ್ದಾರೆ. ನನ್ನ ಜೊತೆ ಇನ್ನು ಚರ್ಚೆ ಮಾಡಿಲ್ಲ" ಎಂದು ಮಾಹಿತಿ ನೀಡಿದರು.

ಎಲ್ಲಾ ಸಮುದಾಯಗಳಿಂದ ಒತ್ತಡ ಇದೆ: ನಿಮ್ಮಂತೆ ಲಂಬಾಣಿ ಸಮುದಾಯ, ಮರಾಠಿ ಸಮುದಾಯದವರು ಬಂದು ಮಂತ್ರಿ ಸ್ಥಾನ ಕೇಳಿದರು. ಹಿಂದುಳಿದವರು ಬಂದು ಸಂತೋಷ್ ಲಾಡ್, ಶ್ರೀನಿವಾಸ್ ಮಾನೆಗೆ ನೀಡಿ ಎನ್ನುತ್ತಿದ್ದಾರೆ. ಕುರುಬ ಸಮುದಾಯದವರು ಶಿವಣ್ಣ ಅವರಿಗೆ ನೀಡಿ ಎಂದು ಹೇಳುತ್ತಿದ್ದಾರೆ. ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ" ಎಂದು ವಿವರಿಸಿದರು.

ಹಿಂದುಳಿದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶಕ್ತಿ ತುಂಬಲು ತಿದ್ದುಪಡಿ ತರಲು ತೀರ್ಮಾನಿಸಿದ್ದೇವೆ. ಈ ಎಲ್ಲಾ ವಿಚಾರ ಮುಂದಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com