23 ವರ್ಷದ ಯುವತಿಯ ಗರ್ಭಾಶಯ ತೆಗೆದುಹಾಕಲು ಹೈಕೋರ್ಟ್ ಪೋಷಕರಿಗೆ ಅನುಮತಿ, ಏನಿದು ಪ್ರಕರಣ?

ಅಪರೂಪದ ಪ್ರಕರಣವೊಂದರಲ್ಲಿ, ಹೈಕೋರ್ಟ್ 23 ವರ್ಷದ ಯುವತಿಯ ಗರ್ಭಾಶಯವನ್ನು (uterus) ತೆಗೆದುಹಾಕಲು ಆಕೆಯ ಪೋಷಕರು ಸಲ್ಲಿಸಿದ್ದ ಮನವಿಗೆ ಅನುಮತಿ ನೀಡಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ.
High court
ಹೈಕೋರ್ಟ್
Updated on

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ, ಹೈಕೋರ್ಟ್ 23 ವರ್ಷದ ಯುವತಿಯ ಗರ್ಭಾಶಯವನ್ನು (uterus) ತೆಗೆದುಹಾಕಲು ಆಕೆಯ ಪೋಷಕರು ಸಲ್ಲಿಸಿದ್ದ ಮನವಿಗೆ ಅನುಮತಿ ನೀಡಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆಸಲಾಗುವುದು. ಯುವತಿಗೆ ತೀವ್ರ ಬೆಳವಣಗೆ ಮತ್ತು ಬೌದ್ಧಿಕ ಅಂಗವೈಕಲ್ಯ (developmental and intellectual disabilities) ಇದ್ದು, ದಿನನಿತ್ಯದ ಮೂಲಭೂತ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು, ನಿರ್ವಹಿಸಲು ಮತ್ತು ನಡೆಸಲು ಸಹ ಅಸಮರ್ಥಳಾಗಿರುವುದರಿಂದ ಹೈಕೋರ್ಟ್ ಮನಗಂಡು ಈ ಆದೇಶ ನೀಡಿದ್ದಾರೆ.

ನ್ಯಾಯಾಲಯ ಹೇಳಿದ್ದೇನು?

ವೈದ್ಯಕೀಯ ಮಂಡಳಿ ನೀಡಿದ ವರದಿಗಳು, ರೋಗಿಯ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಯ ಅಸಮರ್ಥತೆಯ ಸ್ವರೂಪ ಮತ್ತು ವ್ಯಾಪ್ತಿ, ಆಕೆಯ ಮಾಸಿಕ ಋತುಮತಿ ಸಂದರ್ಭದಲ್ಲಿ ಸ್ವತಂತ್ರವಾಗಿ ಸ್ವಚ್ಛತೆ ನಿರ್ವಹಿಸಲು ಅಸಮರ್ಥತೆ, ಪೋಷಕರು ಉಲ್ಲೇಖಿಸಿದ ವೈದ್ಯಕೀಯ ಸಮಸ್ಯೆಗಳು, ಯಾವುದೇ ವೈದ್ಯಕೀಯ ನಿರ್ಬಂಧಗಳಿಲ್ಲದಿರುವುದು ಹಾಗೂ ವೈದ್ಯಕೀಯ ಮಂಡಳಿಯ ಏಕಮತ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಈ ಶಸ್ತ್ರಚಿಕಿತ್ಸೆ ರೋಗಿಯ ಭವಿಷ್ಯದ ಜೀವನದಲ್ಲಿ ಬೆಳವಣಿಗೆ, ಆರೋಗ್ಯ, ಗೌರವ ಮತ್ತು ಹಿತಾಸಕ್ತಿಗೆ ಒಳಿತು ಎಂದು ನ್ಯಾಯಾಲಯ ಹೇಳಿದೆ.

ಯುವತಿಯ ಪೋಷಕರು ಬೆಂಗಳೂರಿನ ಯಲಹಂಕ ತಾಲೂಕಿನ ಒಂದು ಗ್ರಾಮದವರಾಗಿದ್ದು, ಅವರು ಸಲ್ಲಿಸಿದ್ದ ಅರ್ಜಿಯ ಮೇಲೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಈ ಆದೇಶ ನೀಡಿದ್ದಾರೆ.

ಈ ಪ್ರಕರಣವು ಯಾವುದೇ ರೀತಿಯ ಜನಸಂಖ್ಯೆ ನಿಯಂತ್ರಣ ಅಥವಾ ಅಂಗವೈಕಲ್ಯದ ಆಧಾರದ ಮೇಲೆ ರೋಗಿಯ ಹಕ್ಕುಗಳನ್ನು ಕಡಿತಗೊಳಿಸುವ ಉದ್ದೇಶಕ್ಕೆ ಸಂಬಂಧಪಟ್ಟಿಲ್ಲ. ಇದು ಸಂಪೂರ್ಣವಾಗಿ ಯುವತಿಯ ಭವಿಷ್ಯದ ಆರೋಗ್ಯ, ಸ್ವಚ್ಛತೆ, ಗೌರವ, ಸುರಕ್ಷತೆ ಮತ್ತು ಜೀವನದ ಗುಣಮಟ್ಟದ ವಿಚಾರಗಳಿಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ವೈದ್ಯಕೀಯ ಮಂಡಳಿಯ ಶಿಫಾರಸಿನಂತೆ ಹೊಟ್ಟೆ (abdomen) ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಗರ್ಭಾಶಯವನ್ನು (uterus) ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆಗೆ ನಿರ್ದೇಶಿಸಿದೆ.

ಚಿಕಿತ್ಸೆ ಎಲ್ಲ ಹಂತಗಳಲ್ಲಿ ರೋಗಿಯ ಆರೋಗ್ಯ, ಗೌರವ, ಸುರಕ್ಷತೆ ಮತ್ತು ಅತ್ಯುತ್ತಮ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ಸಮಾಲೋಚನೆ, ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ನೀಡುವಂತೆ ಸಹ ಆದೇಶಿಸಲಾಗಿದೆ.

ವೈದ್ಯಕೀಯ ಮಂಡಳಿ ನೀಡಿದ ವರದಿಯ ಪ್ರಕಾರ, ಯುವತಿಗೆ ಶಾರೀರಿಕ ಬೆಳವಣಿಗೆ ಕೊರತೆ ಜೊತೆಗೆ ಮಧ್ಯಮ ಮಟ್ಟದ ಶಾಶ್ವತ ಬೌದ್ಧಿಕ ಮತ್ತು ಬೆಳವಣಿಗೆ ನ್ಯೂನತೆ ಇದೆ. ಆಕೆಯ ಬೌದ್ಧಿಕ ಮಟ್ಟ ಸಾಮಾಜಿಕವಾಗಿ ಸುಮಾರು 5 ವರ್ಷ 4 ತಿಂಗಳು ಎಂದು ಅಂದಾಜಿಸಲಾಗಿದೆ. ಐಕ್ಯೂ 36 ಆಗಿದ್ದು, 75 ಶೇಕಡಾ ಶಾಶ್ವತ ವಿಶೇಷಚೇತನ ಹೊಂದಿದ್ದಾಳೆ ಎಂದು ವರದಿ ಹೇಳಿದೆ. ಆಕೆ ಆಕಸ್ಮಿಕ ಮೂರ್ಛೆ ಸಮಸ್ಯೆಯಿಂದಲೂ ಬಳಲುತ್ತಿದ್ದಾಳೆ. ಪೋಷಕರು ತಮ್ಮ ಮಗುವಿನ ಏಕೈಕ ಆರೈಕೆದಾರರು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಮಗಳ ಮಾಸಿಕ ಋತುಚಕ್ರ ಅನಿಯಮಿತ ಮತ್ತು ಊಹಿಸಲಾಗದಂತಿವೆ. ಈ ಸಮಯದಲ್ಲಿ ಆಕೆ ವೈಯಕ್ತಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಅಸಮರ್ಥಳಾಗಿರುವುದರಿಂದ ಮತ್ತೆ ಮತ್ತೆ ಸೋಂಕು, ಜ್ವರ ಮತ್ತು ದೀರ್ಘಕಾಲದ ವೈದ್ಯಕೀಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಪರಿಸ್ಥಿತಿ ಆಕೆಗೆ ಆರೋಗ್ಯದ ಅಪಾಯವನ್ನು ಹೆಚ್ಚಿಸುವುದಲ್ಲದೆ, ವಯಸ್ಸಾದ ಪೋಷಕರ ಮೇಲೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ಸಮಸ್ಯೆ ತೋಡಿಕೊಂಡರು.

ಬೆಂಗಳೂರಿನ ನ್ಯೂರೋ ಸೆಂಟರ್‌ನಲ್ಲಿ ನಡೆದ ವೈದ್ಯಕೀಯ ಮತ್ತು ಮಾನಸಿಕ ಮೌಲ್ಯಮಾಪನಗಳನ್ನು ಆಧಾರವಾಗಿಸಿಕೊಂಡು ಅರ್ಜಿ ಸಲ್ಲಿಸಿದ್ದರು. ಡೆನ್ವರ್ ಡೆವಲಪ್ಮೆಂಟಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಬೆಳವಣಿಗೆ ನ್ಯೂನತೆ ಕಂಡುಬಂದಿದ್ದು, ವಯಸ್ಸಿಗೆ ತಕ್ಕ ಸರಾಸರಿ ಬೆಳವಣಿಗೆ 58 ಎಂದು ದಾಖಲಾಗಿದೆ.

ಗೆಸೆಲ್ ಡ್ರಾಯಿಂಗ್ ಟೆಸ್ಟ್ ಯುವತಿಯ ಬೌದ್ಧಿಕ ಮಟ್ಟವನ್ನು ಮೂರು ವರ್ಷದ ಮಗುವಿಗಿಂತಲೂ ಕಡಿಮೆಯಾಗಿ ತೋರಿಸಿದೆ. ವಿನ್ಲ್ಯಾಂಡ್ ಸೋಷಿಯಲ್ ಮ್ಯಾಚುರಿಟಿ ಸ್ಕೇಲ್‌ನಲ್ಲಿ ಸಾಮಾಜಿಕ ಕೌಶಲ್ಯ 56 ಎಂದು ಅಳೆಯಲಾಗಿದೆ. ಒಟ್ಟಾರೆ, ಆಕೆಗೆ 23 ವರ್ಷ ವಯಸ್ಸಾಗಿದ್ದರೂ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಮರ್ಥ್ಯಗಳು ಬಹಳ ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಪೋಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com