

ಬೆಂಗಳೂರು: ನಾಯಿಗಳ ಮೇಲೆ ಹಲ್ಲೆ, ಹಿಂಸೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ರಕ್ಷಿಸಲ್ಪಟ್ಟ ನಾಯಿಗಳನ್ನು ಹಿಂತಿರುಗಿಸುವಂತೆ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಆರು ಗೋಲ್ಡನ್ ರಿಟ್ರೀವರ್ ಹಾಗೂ ಮೂರು ಶಿಹ್ ಟ್ಸು ಸೇರಿದಂತೆ ಒಟ್ಟು ಒಂಬತ್ತು ನಾಯಿಗಳನ್ನು ಅವುಗಳ ಮಾಲೀಕ ರಮೇಶ್ ಕೆ.ಇ. ಅವರಿಗೆ ಹಿಂತಿರುಗಿಸುವಂತೆ ಏಪ್ರಿಲ್ 25ರಂದು ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ People for the Ethical Treatment of Animals ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು.
ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು, “ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶವನ್ನು ಓದಿದಾಗ ನ್ಯಾಯಾಲಯದ ಮನಕಲುಕುವಂತೆ ಮಾಡಿದೆ. ಸದ್ಯ ಪ್ರಾಣಿ ಕಲ್ಯಾಣ ಸಂಸ್ಥೆಯ ವಶದಲ್ಲಿರುವ ನಾಯಿಗಳು ತನಿಖೆ ಪೂರ್ಣಗೊಳ್ಳುವವರೆಗೆ ಅಲ್ಲಿಯೇ ಮುಂದುವರಿಯಬೇಕು” ಎಂದು ಆದೇಶಿಸಿದರು.
ಮ್ಯಾಜಿಸ್ಟ್ರೇಟ್ ಅವರು ಪ್ರಾಣಿಗಳ ನೈತಿಕ ಮತ್ತು ಮಾನವೀಯ ಸಂರಕ್ಷಣೆ ಅತ್ಯಂತ ಮುಖ್ಯ ಎಂಬ ಮೂಲಭೂತ ಅಂಶವನ್ನೇ ಮರೆತಿರುವಂತೆ ಕಾಣುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಛಾಯಾಚಿತ್ರಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, “ದಾಖಲೆಗಳಲ್ಲಿ ಕಂಡುಬರುವ ದೃಶ್ಯಗಳು ನಾಯಿಗಳ ಮಾಲೀಕ ಪ್ರತಿಯೊಂದು ನಾಯಿಯನ್ನು ನಿರ್ದಯವಾಗಿ ಹೊಡೆದಿರುವುದನ್ನು ತೋರಿಸುತ್ತವೆ. ಅವುಗಳನ್ನು ತನ್ನ ಇಚ್ಛೆಯಂತೆ ಬಳಸಬಹುದಾದ ವಸ್ತುಗಳಂತೆ ನಡೆಸಿಕೊಂಡಿದ್ದಾನೆ. ಇಂತಹ ದೃಶ್ಯಗಳು ಇದ್ದರೂ ನಾಯಿಗಳನ್ನು ಮತ್ತೆ ಆರೋಪಿಯ ವಶಕ್ಕೆ ನೀಡುವಂತೆ ನ್ಯಾಯಾಲಯ ಹೇಗೆ ಆದೇಶಿಸಿತು ಎಂಬುದು ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.
ನಾಯಿಗಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತೂ ತನಿಖೆ ಇನ್ನೂ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಿಗಳನ್ನು ಮತ್ತೆ ಆರೋಪಿಯ ವಶಕ್ಕೆ ಒಪ್ಪಿಸುವ ಆದೇಶವು “ಅಸಂಬದ್ಧ” ಹಾಗೂ “ಅಸಹಜ”ವಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ತೀರ್ಪಿನಲ್ಲಿ ಪ್ರಾಣಿಗಳ ಹಕ್ಕುಗಳ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, “ಪ್ರಾಣಿಗಳಿಗೆ ಮಾನವರಂತೆ ಮಾತನಾಡುವ ಶಕ್ತಿ ಇಲ್ಲದಿರಬಹುದು. ಆದರೆ, ಅವುಗಳಿಗೆ ಭಾವನೆಗಳು, ನೋವು ಅನುಭವಿಸುವ ಸಾಮರ್ಥ್ಯ ಹಾಗೂ ಜೀವಂತ ಅಸ್ತಿತ್ವವಿದೆ. ಕಾನೂನು ಈಗ ಪ್ರಾಣಿಗಳನ್ನು ಕೇವಲ ಮಾನವರ ಉಪಯೋಗಕ್ಕಾಗಿ ಇರುವ ವಸ್ತುಗಳೆಂದು ನೋಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ.
“ಒಂದು ನಾಗರಿಕ ಸಮಾಜದ ಮೌಲ್ಯವನ್ನು ಅದು ಮನುಷ್ಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರಿಂದ ಮಾತ್ರ ಅಳೆಯಲಾಗುವುದಿಲ್ಲ. ಮಾತಿಲ್ಲದ ಜೀವಿಗಳಿಗೆ ಅದು ತೋರಿಸುವ ಕರುಣೆ ಮತ್ತು ನ್ಯಾಯವೂ ಅದರ ನಾಗರಿಕತೆಯ ಮಾನದಂಡವಾಗಿದೆ. ಪ್ರಾಣಿಗಳ ಮೇಲಿನ ಪ್ರತಿಯೊಂದು ಕ್ರೌರ್ಯವೂ ಕೇವಲ ಆ ಜೀವಿಗೆ ಮಾಡಿದ ಹಾನಿಯಲ್ಲ, ಅದು ಮಾನವೀಯತೆಯ ಮೇಲಿನ ಕಳಂಕವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಾಣಿಗಳ ರಕ್ಷಣೆ ದಾನಧರ್ಮವಲ್ಲ, ಅದು ಸಂವಿಧಾನಾತ್ಮಕ ನೈತಿಕತೆಯ ಭಾಗವಾಗಿದೆ. ತಮ್ಮ ಹಕ್ಕುಗಳಿಗಾಗಿ ನ್ಯಾಯಾಲಯದ ಬಾಗಿಲು ತಟ್ಟಲು ಸಾಧ್ಯವಿಲ್ಲದ ಜೀವಿಗಳಿಗೂ ನ್ಯಾಯದ ರಕ್ಷಣೆ ದೊರಕಬೇಕು ಎಂದು ಒತ್ತಿ ಹೇಳಿದೆ.
ಇನ್ನೊಂದೆಡೆ, ರಮೇಶ್ ಪರ ವಕೀಲರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರಮೇಶ್ ಒಬ್ಬರೇ ವಾಸಿಸುತ್ತಿದ್ದು, ಒಂಬತ್ತು ನಾಯಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ. ನಾಯಿಗಳು ಆರೋಗ್ಯವಾಗಿದ್ದು, ಪೆಟಾ ಮಾಡಿರುವ ಆರೋಪಗಳು ಕೇವಲ ಕಲ್ಪನೆಯ ಭಾಗವಾಗಿದೆ ಎಂದು ವಾದಿಸಿದರು.
ಆದರೆ, ರಮೇಶ್ ಅವರ ಮನೆಯಲ್ಲಿ ನಾಯಿಗಳನ್ನು ನಿರ್ದಯವಾಗಿ ಹೊಡೆಯುವುದು, ಹಲ್ಲೆ ನಡೆಸುವುದು, ಲೈಂಗಿಕ ದೌರ್ಜನ್ಯ ಎಸಗುವುದು ಹಾಗೂ ಅಕ್ರಮ ಸಂತಾನೋತ್ಪತ್ತಿ (Illegal Breeding) ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಫೆಬ್ರವರಿ 15ರಂದು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ಪೊಲೀಸರು ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಒಂಬತ್ತು ನಾಯಿಗಳನ್ನು ರಕ್ಷಿಸಿ, ಅವುಗಳನ್ನು ಪ್ರಾಣಿ ಕಲ್ಯಾಣ ಸಂಸ್ಥೆಯ ವಶಕ್ಕೆ ಒಪ್ಪಿಸಿದ್ದರು. ಇದೀಗ ತನಿಖೆ ಪೂರ್ಣಗೊಳ್ಳುವವರೆಗೆ ನಾಯಿಗಳು ಅದೇ ಸಂಸ್ಥೆಯ ಆರೈಕೆಯಲ್ಲಿ ಮುಂದುವರಿಯಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.